ಜಿಲ್ಲೆಯಲ್ಲಿ 24 ಸರಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ-ಸರಕಾರಿ ಶಾಲೆಗಳ ಅಭಿವೃದ್ಧಿಯತ್ತ ಸರಕಾರ ಗಮನ ಹರಿಸಬೇಕಾಗಿದೆ

0

ಸಿಶೇ ಕಜೆಮಾರ್


ಪುತ್ತೂರು: ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಸರಕಾರ ಮತ್ತೆ ಎಡವಿದೆಯೋ ಎಂಬ ಅನುಮಾನ ಮೂಡತೊಡಗಿದೆ. 2023-24 ನೇ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಕೆಲವೊಂದು ಸರಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ನಡೆದಿದೆ. ಶಾಲೆ ಆರಂಭವಾಗಿ ತಿಂಗಳು ಕಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಆಗಿದೆ. ಇದರಲ್ಲಿ ಪುತ್ತೂರು ತಾಲೂಕಿನ 1 ಸರಕಾರಿ ಶಾಲೆ ಹಾಗೂ 1 ಅನುದಾನಿತ ಶಾಲೆ ಹಾಗೂ ಕಡಬ ತಾಲೂಕಿನ 1 ಸರಕಾರಿ ಶಾಲೆಯಲ್ಲಿ 1 ನೇ ತರಗತಿಗೆ ಶೂನ್ಯ ದಾಖಲಾತಿ ಆಗಿದೆ. ಉಳಿದಂತೆ ಬಂಟ್ವಾಳದ ನಾಲ್ಕು, ಬೆಳ್ತಂಗಡಿಯ ಮೂರು, ಮಂಗಳೂರು ಉತ್ತರದಲ್ಲಿ ಎರಡು, ಮಂಗಳೂರು ದಕ್ಷಿಣದಲ್ಲಿ ಎರಡು, ಮೂಡಬಿದಿರೆಯ ಮೂರು ಮತ್ತು ಸುಳ್ಯ ತಾಲೂಕಿನ ಎಂಟು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯವಾಗಿದೆ. ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ದಾಖಲಾತಿ ಸಂಖ್ಯೆ ಶೂನ್ಯವಾಗಿರುವುದು ಕಂಡು ಬಂದಿದೆ.


ಗ್ರಾಮಕ್ಕೊಂದು ಮಾದರಿ ಶಾಲೆ ಏನಾಯಿತು?:
ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸರಕಾರ ಜಾರಿಗೆ ತಂದಿದ್ದ ಗ್ರಾಮಕ್ಕೊಂದು ಮಾದರಿ ಶಾಲೆ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಏನಾಯಿತು? ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಒಂದು ಸರಕಾರಿ ಶಾಲೆಯನ್ನು ಗುರುತಿಸಿ ಅದನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿ ಅದರ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಶಾಸಕರಿಗೆ ವಹಿಸಿಕೊಡುವುದು ಎಂಬ ಬಗ್ಗೆ ಸರಕಾರ ಆದೇಶ ಮಾಡಿತ್ತು. ಈ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಮೀಟಿಂಗ್‌ಗಳು ನಡೆದು ಶಾಲೆಗಳನ್ನು ಆಯ್ಕೆ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಿ ಆಗಿದ್ದರೂ ಇನ್ನೂ ಕೂಡ ಇದು ಕಾರ್ಯಗತವಾಗದೇ ಇರುವುದು ದುರಂತ.


ಅರ್ಧದಲ್ಲೇ ನಿಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆ:
1 ರಿಂದ 12 ನೇ ತರಗತಿ ವರೇಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸರಕಾರ 2018-19 ರಲ್ಲಿ 176 ತಾಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲು ಆದೇಶ ನೀಡಿತ್ತು. ಆ ಬಳಿಕ 2019 ರಲ್ಲಿ 100 ಶಾಲೆಗಳನ್ನು ಹೊಸತಾಗಿ ಸೇರಿಸಿ ಒಟ್ಟು 276 ಶಾಲೆಗಳಿಗೂ ಅನ್ವಯವಾಗುವಂತೆ ಇಲಾಖೆ ಮಾರ್ಗಸೂಚಿ ಹೊರಡಿಸಿತ್ತು. ಆ ಬಳಿಕ ಹೊಸತಾಗಿ ಕೆಪಿಎಸ್ ಆರಂಭವಾಗಲೇ ಇಲ್ಲ. ಸದ್ಯಕ್ಕೆ ಇರುವ ಕೆಪಿಎಸ್‌ಗಳಲ್ಲಿ ಮಕ್ಕಳ ದಾಖಲಾತಿ ಉತ್ತಮವಾಗಿದೆ. ಸರಕಾರ ಮತ್ತೆ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕಾಗಿದೆ.


ಶಾಲೆಗಳನ್ನು ವಿಲೀನಗೊಳಿಸಬಾರದೇಕೆ..?:
ಬಹುತೇಕ ಪೋಷಕರ ಆರೋಪ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ತರಗತಿಗೊಂದರAತೆ ಶಿಕ್ಷಕರಿಲ್ಲ ಎಂಬುದಾಗಿದೆ. ಆದರೆ ಶಿಕ್ಷಣ ಇಲಾಖೆ ಹೇಳುವುದೇ ಬೇರೆ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಆಧರಿಸಿ ಶಿಕ್ಷಕರ ನೇಮಕಾತಿ ಇದೆ ಎಂದು ಹೇಳುತ್ತಿದೆ. ಒಂದರ್ಥದಲ್ಲಿ ಇದು ಸರಿಯಾಗಿದೆ. 1 ರಿಂದ 7 ನೇ ತರಗತಿ ಇರುವ ಶಾಲೆಯಲ್ಲಿ ಕೇವಲ 8 ಮಕ್ಕಳು ಇದ್ದರೆ ಆ ಶಾಲೆಗೆ ತರಗತಿಗೆ ಒಬ್ಬರಂತೆ 7 ಶಿಕ್ಷಕರನ್ನು ನೇಮಕ ಮಾಡುವುದು ಅಸಾಧ್ಯ. ಇದು ಸರಕಾರಕ್ಕೆ ಹೊರೆಯೂ ಹೌದು. ಹೀಗಿರುವಾಗ ಶಾಲೆಗಳನ್ನು ವಿಲೀನಗೊಳಿಸುವುದು ಒಂದೇ ಪರಿಹಾರ ಎನ್ನುತ್ತಾರೆ ಶಿಕ್ಷಣ ತಜ್ಞರು.


ಏನಿದು ಶಾಲೆಗಳ ವಿಲೀನ:
ಪ್ರಸ್ತುತ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಅತೀ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳನ್ನು ಗುರುತಿಸಿ ಆ ಶಾಲೆಯನ್ನು ಹತ್ತಿರದ ಇನ್ನೊಂದು ಶಾಲೆಯೊಂದಿಗೆ ವಿಲೀನಗೊಳಿಸುವ ಮೂಲಕ ಶಾಲೆಯನ್ನು ಬಲಪಡಿಸಬಹುದಾಗಿದೆ. ಗ್ರಾಮದಲ್ಲಿರುವ ಶಾಲೆಗಳನ್ನು ಗುರುತಿಸಿ ಯಾವ ಶಾಲೆಯನ್ನು ಯಾವ ಶಾಲೆಯ ಜೊತೆ ವಿಲೀನ ಮಾಡಬಹುದು ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಬೇಕಾಗಿದೆ.

ಕಾರಣಗಳೇನು..?
ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಲು ಕಾರಣಗಳೇನು ಎಂಬ ಬಗ್ಗೆ ಶಿಕ್ಷಣ ತಜ್ಞರು ಅವಲೋಕನ ಮಾಡಬೇಕಾಗಿದೆ. ಸರಕಾರಿ ಶಾಲೆಗಳಲ್ಲಿನ ಸೌಲಭ್ಯಗಳ ಕೊರತೆ ಇರಬಹುದೇ? ಶಿಕ್ಷಕರ ಕೊರತೆಯೂ ಮಕ್ಕಳ ದಾಖಲಾತಿ ಕಡಿಮೆಯಾಗಲು ಕಾರಣವಿರಬಹುದೇ? ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಈಗಾಗಲೇ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದರೂ ಅದ್ಯಾವುದೂ ಪ್ರಯೋಜನಕ್ಕೆ ಬಾರದೇ ಇರುವುದು ವಿಪರ್‍ಯಾಸವೇ ಸರಿ. ಒಟ್ಟಿನಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಮನಸ್ಸು ಮಾಡದಿದ್ದರೆ ಮುಂದೊಂದು ದಿನ ಇನ್ನಷ್ಟು ಸರಕಾರಿ ಶಾಲೆಗಳು ಬಂದ್ ಆಗುವ ಸಂಭವ ಇದೆ.

ಗ್ರಾಮಕ್ಕೊಂದು ಮಾದರಿ ಶಾಲೆಯ ಬಗ್ಗೆ ಯಾವುದೇ
ಬೆಳವಣಿಗೆ ಆಗಿಲ್ಲ ಅದು ಹಾಗೆಯೇ ಇದೆ. ಈ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗೆ 1 ನೇ ತರಗತಿಗೆ ಮಗು ದಾಖಲಾತಿ ಪಡೆಯಬೇಕಾದರೆ 6 ವರ್ಷ ತುಂಬಿರಬೇಕು ಎಂಬ ಆದೇಶವನ್ನು ಸರಕಾರ ಮೊದಲಿಗೆ ಹೊರಡಿಸಿತ್ತು. ಈ ಆದೇಶದಲ್ಲಿ ತಿದ್ದುಪಡಿ ಮಾಡಿ ಮಗುವಿಗೆ 5 ವರ್ಷ 5 ತಿಂಗಳು ತುಂಬಿರಬೇಕು ಎಂಬ ಆದೇಶ ಹೊರಡಿಸಿದೆ. ಅದರಂತೆ ದಾಖಲಾತಿ ಆಗುತ್ತಿದೆ.

–ಲೋಕೇಶ್ ಎಸ್.ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು

ಪ್ರತಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ
ಶಿಕ್ಷಣ ವಿಭಾಗ ಆರಂಭಿಸಬೇಕು. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವುದು ತಪ್ಪುತ್ತದೆ. ಈಗಾಗಲೇ ಕೆಪಿಎಸ್‌ಗಳಲ್ಲಿ ಮಕ್ಕಳ ದಾಖಲಾತಿ ಉತ್ತಮವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸರಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕಾದ ಅನಿವಾರ್‍ಯತೆ ಇದೆ.

ಅಬ್ದುಲ್ ಖಾದರ್ ಮೇರ್ಲ, ಅಧ್ಯಕ್ಷರು ತೆಗ್ಗು ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ, ಸದಸ್ಯರು ಕೆಯ್ಯೂರು ಗ್ರಾಪಂ


ಆದೇಶದ ಗೊಂದಲ
ಈ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಗೆ ದಾಖಲಾತಿ ಪಡೆಯಬೇಕಾದರೆ ಮಗುವಿಗೆ 6 ವರ್ಷ ತುಂಬಿರಬೇಕು ಎಂಬ ಆದೇಶವೊಂದನ್ನು ಸರಕಾರ ಜಾರಿ ಮಾಡಿತ್ತು. ಈ ಹಿಂದೆ ಮಗುವಿಗೆ 5 ವರ್ಷ 3 ತಿಂಗಳು ಆಗಿದ್ದರೆ ದಾಖಲಾತಿ ಮಾಡಬಹುದಾಗಿತ್ತು. 6 ವರ್ಷದ ಆದೇಶದ ಬೆನ್ನಲ್ಲೆ ಅಂದರೆ ಮೇ.20 ಆಸುಪಾಸಿನಲ್ಲಿ ಸರಕಾರ ಮತ್ತೊಂದು ಆದೇಶ ಹೊರಡಿಸಿ ಮಗುವಿಗೆ 5 ವರ್ಷ 5 ತಿಂಗಳು ಆಗಿದ್ದರೆ ದಾಖಲಾತಿ ಮಾಡಬಹುದು ಎಂದಿತ್ತು. ಸರಕಾರದ ಈ ಗೊಂದಲಮಯ ಆದೇಶದಿಂದಾಗಿಯೂ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಂಠಿತವಾಗಲು ಕಾರಣವಾಗಿದೆ. ಏಕೆಂದರೆ 6 ವರ್ಷದ ಆದೇಶ ಬಂದಾಗ ಮಗುವಿಗೆ 5 ವರ್ಷ 5 ತಿಂಗಳು ಆಗಿದ್ದರೆ ಆ ಮಗುವನ್ನು ಖಾಸಗಿ ಶಾಲೆಗೆ ಯುಕೆಜಿಗೆ ದಾಖಲಾತಿ ಮಾಡಿ ಆಗಿತ್ತು. ಮುಂದೆ ಸರಕಾರ ಮಗುವಿನ ದಾಖಲಾತಿಗೆ 5 ವರ್ಷ 5 ತಿಂಗಳು ಎಂಬ ಆದೇಶ ಹೊರಡಿಸಿದಾಗ ಖಾಸಗಿ ಶಾಲೆಗಳು ತಮ್ಮ ಯುಕೆಜಿಯಲ್ಲಿದ್ದ ಮಗುವನ್ನು ನೇರವಾಗಿ 1 ನೇ ತರಗತಿಗೆ ದಾಖಲಾತಿ ಮಾಡಿಕೊಂಡಿದ್ದವು.

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಒಟ್ಟು 180 ಸರಕಾರಿ ಮತ್ತು 12 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇದರಲ್ಲಿ ಪುತ್ತೂರು ತಾಲೂಕಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಪೆರ್ನಾಜೆ ಸರಕಾರಿ ಶಾಲೆ ಹಾಗೂ ಉಪ್ಪಿನಂಗಡಿಯ ಸಂತ ಫಿಲೋಮಿನಾ ಅನುದಾನಿತ ಶಾಲೆ ಮತ್ತು ಕಡಬದಲ್ಲಿ ಹೊಸ್ಮಠ ಸರಕಾರಿ ಶಾಲೆಯಲ್ಲಿ 1ನೇ ತರಗತಿಗೆ ವಿದ್ಯಾರ್ಥಿಗಳ ಶೂನ್ಯ ದಾಖಲಾತಿ ಆಗಿದೆ.

LEAVE A REPLY

Please enter your comment!
Please enter your name here