ಪುತ್ತೂರು: ರಾಜ್ಯಾದ್ಯಂತ ಇರುವ ಅಧಿಸೂಚಿತ ಪ್ರಮುಖ ದೇವಾಲಯಗಳಿಗೆ ಪ್ರತಿನಿತ್ಯ ಸಾವಿರಾರು ಜನ ಭಕ್ತಾದಿಗಳು /ಯಾತ್ರಿಕರು/ಪ್ರವಾಸಿಗರು ಭೇಟಿ ನೀಡುತ್ತಿರುವ ನಡುವೆ ಸರಕಾರದ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯ `ಶಕ್ತಿ ಯೋಜನೆ’ ಮೂಲಕ ಪ್ರಮುಖ ದೇವಾಲಯಗಳಿಗೆ ಬರುವ ಜನರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ದೇವಳದ ಒಳ ಮತ್ತು ಹೊರ ಆವರಣದಲ್ಲಿ ತ್ಯಾಜ್ಯ ಉತ್ಪತ್ತಿ ಹೆಚ್ಚಳವಾಗಿದೆ.ಹಾಗಾಗಿ ದೇವಾಲಯಗಳ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದೇವಾಲಯಗಳಲ್ಲಿ 3 ದಿನಗಳ ಸ್ವಚ್ಛತಾ ಕಾರ್ಯ ಅಭಿಯಾನ ಅನುಷ್ಠಾನಗೊಳಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಜು.13ರಿಂದ 14ರ ತನಕ ಅದಿಸೂಚಿತ ದೇವಾಲಯಗಳ ಒಳ ಮತ್ತು ಹೊರ ಆವರಣಗಳಲ್ಲಿ ಸ್ವಚ್ಚತಾ ಕಾರ್ಯ ಅಭಿಯಾನವನ್ನು ಅನುಷ್ಠಾನಗೊಳಿಸುವ ನಿಟ್ಟನಲ್ಲಿ ದೇವಾಲಯಗಳಲ್ಲಿ ಲಭ್ಯವಿರುವ ಸಿಬ್ಬಂದಿ ಜೊತೆಗೆ ಲಭ್ಯವಾಗತಕ್ಕ ಸ್ವಸಹಾಯ ಸಂಘಗಳು, ಎನ್.ಎಸ್.ಎಸ್, ಸ್ವಯಂ ಶ್ರಮದಾನ ತಂಡ, ಸ್ಥಳೀಯ ಸ್ವಚ್ಛತಾ ಕಾರ್ಮಿಕರು, ಆಸಕ್ತ ಶಾಲಾ ವಿದ್ಯಾರ್ಥಿಗಳ ಸಹಾಯ ಪಡೆಯಬಹುದು. ಒಂದು ವೇಳೆ ಇವುಗಳ ನೆರವು ಸಿಗದೇ ಇರುವ ಸಂದರ್ಭದಲ್ಲಿ ಲಭ್ಯವಾಗತಕ್ಕ ಹೆಚ್ಚುವರಿ ಸಿಬ್ಬಂದಿಗಳನ್ನು 3 ದಿನದ ಮಟ್ಟಿಗೆ ನಿಯೋಜಿಸಿಕೊಳ್ಳುವ ಮೂಲಕ ತಂಡ ರೂಪದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಮತ್ತು ಅದರ ಛಾಯಾ ಚಿತ್ರಗಳನ್ನೊಳಗೊಂಡ ವರದಿಯನ್ನು ಕಚೇರಿಗೆ ಇ-ಮೇಲ್ ಮೂಲಕ ಹಾಗು ಭೌತಿಕ ಪ್ರತಿಯೊಂದಿಗೆ ಕಳುಹಿಸಿಕೊಡುವಂತೆ ಆಯುಕ್ತರ ಪ್ರಕಟಣೆ ಸೂಚಿಸಿದೆ.