ನಕಲಿ ದಾಖಲೆ, ಸೀಲ್, ದಾಖಲೆ ಪತ್ರಗಳ ತಯಾರಿ ಪ್ರಕರಣ ಆರೋಪಿ ವಿಶ್ವನಾಥ್ ಬಿ.ವಿ.ರವರಿಂದ ದಾಖಲೆ, ಸೀಲ್‌ಗಳ ಜಪ್ತಿ

0

ಪುತ್ತೂರು: ಸ್ಥಳೀಯ ಗ್ರಾ.ಪಂ.ಗಳು ಮತ್ತು ನಗರಸಭೆಯ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್, ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ನೀಡುತ್ತಿದ್ದ ಪ್ರಕರಣದ ಆರೋಪಿಯಾಗಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ವಿಶ್ವನಾಥ್ ಬಿ.ವಿ.ಅವರನ್ನು, ಈ ಜಾಲದಲ್ಲಿ ಇನ್ಯಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಆರೋಪಿಯಿಂದ ಇನ್ನಷ್ಟು ನಕಲಿ ಸೀಲ್‌ಗಳು, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.


ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್. ಅವರು ನೀಡಿದ ದೂರಿನಂತೆ, ಅವರ ನೇತೃತ್ವದಲ್ಲಿ ಜು.11ರಂದು ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸರು ಪಡೀಲ್‌ನ ಎಂ.ಎಸ್ ಕಾಂಪ್ಲೆಕ್ಸ್‌ನಲ್ಲಿರುವ ಬಿ.ಬಿ.ಇಲೆಕ್ಟ್ರಿಕಲ್ಸ್ ಆಂಡ್ ಪ್ಲಂಬರ್‍ಸ್ ಕಚೇರಿಗೆ ದಾಳಿ ನಡೆಸಿದ್ದರು.ಆವೇಳೆ ಅಲ್ಲಿ, ವಿವಿಧ ಗ್ರಾ.ಪಂಗಳು ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್ ಹಾಗು ನಕಲಿ ದಾಖಲೆ ಪತ್ರಗಳು ಇರುವುದು ಬೆಳಕಿಗೆ ಬಂದಿತ್ತು.ವಿಶ್ವನಾಥ ಅವರು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿ, ಕಚೇರಿಯಲ್ಲಿದ್ದ ನಕಲಿ ಸೀಲು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು, ಕಚೇರಿಗೆ ಬೀಗ ಜಡಿದಿದ್ದರು. ಜು.12ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೆ ಮೂರು ದಿನಗಳವಧಿಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.ಆರೋಪಿ ವಿಶ್ವನಾಥ್‌ರನ್ನು ಜು.13ರಂದು ಪುತ್ತೂರು ನಗರಸಭೆ ವ್ಯಾಪ್ತಿಯ ವಿವಿಧ ಕಡೆಗಳಿಗೆ ಪೊಲೀಸರು ಕರೆದೊಯ್ದಿದ್ದಾರೆ. ಈ ಸಂದರ್ಭ ನಕಲಿ ಸೀಲ್‌ಗಳು, ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ.ಈ ಜಾಲದಲ್ಲಿ ಇನ್ನೂ ಹಲವರು ಇರಬಹುದೆಂಬ ಸಂಶಯದೊಂದಿಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಕಲಿ ಸೀಲ್ ಮಾಡಿಕೊಟ್ಟವರು ಮತ್ತು ನಕಲಿ ದಾಖಲೆಪತ್ರಗಳನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಂಡವರೂ ವಿಚಾರಣೆಗೊಳಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಪ್ರತಿ ಗ್ರಾ.ಪಂ.ಗಳಿಗೆ ತೆರಳಿ ಈ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಸೀಲ್ ಮತ್ತು ನಗರಸಭೆಯ ಸೀಲ್ ಅನ್ನು ದುರುಪಯೋಗ ಪಡಿಸಿ ಸಾರ್ವಜನಿಕರಿಗೆ ಗ್ರಾ.ಪಂ.ನಿಂದ ಆಗುವ ಸೇವೆ ದುರುಪಯೋಗವಾಗುವಂತಾಗಿತ್ತು. ಈ ಕುರಿತು ನಾವು ದಾಖಲೆ ಪರಿಶೀಲಿಸಿದಾಗ ನಕಲಿ ದಾಖಲೆ ಸೃಷ್ಟಿಯ ವಿಚಾರ ಬೆಳಕಿಗೆ ಬಂದಿದೆ.ಈಗಾಗಲೇ ಗ್ರಾ.ಪಂ ವ್ಯಾಪ್ತಿಗಳಲ್ಲಿ ಅನಧಿಕೃತ ಕಟ್ಟಡಗಳು ಕಟ್ಟಿದಾಗ ಅದಕ್ಕೆ ಲೈಸನ್ಸ್ ಕೊಡಲು ಆಗುವುದಿಲ್ಲ. ಇಲ್ಲಿ 9/11, ಕನ್ವರ್ಷನ್ ಅಗತ್ಯ. ಇವೆಲ್ಲ ಆಗಲು ಕನಿಷ್ಟ 60 ದಿವಸ ಬೇಕು.ಆದರೆ ಇಲ್ಲಿ ನಕಲಿ ದಾಖಲೆಯನ್ನು ಒಂದು ದಿವಸದಲ್ಲಿ ಮಾಡಿ ಕೊಡುತ್ತಿದ್ದರು. ಇದರಿಂದ ಸರಕಾರಕ್ಕೆ ನಷ್ಟ ಉಂಟಾಗುತ್ತಿತ್ತು.ಬೋರ್‌ವೆಲ್ ತೆಗೆಯುವ ವಿಚಾರದಲ್ಲೂ ನಗರಸಭೆ, ಗ್ರಾ.ಪನಿಂದ ಯಾವುದೇ ಎನ್.ಒ.ಸಿ ಕೊಡುತ್ತಿಲ್ಲವಾದರೂ ನಕಲಿ ದಾಖಲೆ ಸೃಷ್ಠಿ ಮಾಡುವ ಕಚೇರಿಯಲ್ಲಿ ಎನ್.ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ ಆಗುತ್ತಿತ್ತು.ಬೇಕಾಬಿಟ್ಟಿ ಬೊರ್‌ವೇಲ್ ಕೂಡಾ ಕೊರೆಸಲಾಗುತ್ತಿತ್ತು. ಇವೆಲ್ಲ ಅಧಿಕಾರಿಗಳಿಗೆ ಕೆಟ್ಟ ಹೆಸರು ಬರುವಂತಾಗಿದೆ- ನವೀನ್ ಕುಮಾರ್ ಭಂಡಾರಿ ಎಚ್., ಕಾರ್ಯನಿರ್ವಾಹಕಾಧಿಕಾರಿ, ತಾ.ಪಂ

LEAVE A REPLY

Please enter your comment!
Please enter your name here