ವಿದ್ಯಾರ್ಜನೆಗೈಯ್ದು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬಾಳಿ-ಸತೀಶ್ ಕೆಡೆಂಜಿ
ಪುತ್ತೂರು: ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸಂದೇಶವಾದ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬಂತೆ ಬಿಲ್ಲವ ಸಂಘವು ವಿದ್ಯಾರ್ಜನೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಎಂಬುದು ಗುರುಗಳ ಪ್ರಸಾದ ಎಂದು ತಿಳಿಯುತ್ತಾ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬಾಳಿ ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಬಿಲ್ಲವ ನಗರ ಸಮಿತಿಯ ಆಶ್ರಯದಲ್ಲಿ ಜು.15ರಂದು ಪುತ್ತೂರು-ಬಪ್ಪಳಿಗೆ ಬಿಲ್ಲವ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ ಹಾಗೂ ಎಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುತ್ತೂರು ಬಿಲ್ಲವ ಸಂಘವು ಒಗ್ಗಟ್ಟಿನ ಪ್ರತೀಕವಾಗಿದೆ. ಈ ಬಿಲ್ಲವ ಸಂಘದ 51 ಗ್ರಾಮ ಸಮಿತಿಯು ಬಹಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಇದು ನಮ್ಮ ಬಿಲ್ಲವ ಸಂಘ, ಸಮುದಾಯದ ಬಿಲ್ಲವ ಸಂಘ ಹೇಳಲು ಹೆಮ್ಮೆಯಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಬಿಲ್ಲವ ನಗರ ಸಮಿತಿ ಅಧ್ಯಕ್ಷ ಅವಿನಾಶ್ ಹಾರಾಡಿರವರು ಮಾತನಾಡಿ, ಸಂಘದಲ್ಲಿನ ಗುರುಮಂದಿರದಲ್ಲಿ ಸಮುದಾಯ ಬಾಂಧವರು ಪೂಜೆಯನ್ನು ಸಲ್ಲಿಸಬೇಕು. ತಾಲೂಕಿನಲ್ಲಿ ಬಿಲ್ಲವ 51 ಗ್ರಾಮ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತೀ ಮನೆಗೆ ಆಮಂತ್ರಣ ತಲುಪಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಪತ್ರಿಕೆಯಲ್ಲಿ ಈ ಕುರಿತು ಪ್ರಕಟಣೆ ಹಾಕುತ್ತೇವೆ. ದಯವಿಟ್ಟು ಪತ್ರಿಕೆ ಪ್ರಕಟಣೆಯನ್ನು ನೋಡಿ ಸಂಘದ ಕಾರ್ಯಕ್ರಮಗಳಿಗೆ ಆಗಮಿಸುವಂತಾಗಬೇಕು ಎಂದರು.
ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿ, ಬಿಲ್ಲವ ಬಾಂಧವರು ಪ್ರತೀ ವರ್ಷ ಗುರುಮಂದಿರದಲ್ಲಿ ಶಾಶ್ವತ ಪೂಜೆ ಮಾಡಿಸಿಕೊಳ್ಳಬೇಕು. ದಿನನಿತ್ಯ ಬೆಳಿಗ್ಗೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಈ ಗುರುಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುವಂತಾಗಬೇಕು ಎಂದರು.
ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷ ಡಾ.ಸದಾನಂದ ಕುಂದರ್ ಮಾತನಾಡಿ, ಸಮಾಜ ಒಳ್ಳೆಯದಾಗಬೇಕಾದರೆ ಅದಕ್ಕೆ ಕಾರಣ ಮನೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಮಹಿಳೆಯರು. ಪುತ್ತೂರು ಬಿಲ್ಲವ ಸಂಘಕ್ಕೆ ಒಳ್ಳೆಯ ಹೆಸರಿದ್ದು, ನಾರಾಯಣಗುರುಗಳ ಚಿಂತನೆಯನ್ನು ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ಮಾತನಾಡಿ, ತಾಲೂಕಿನ 51 ಗ್ರಾಮ ಸಮಿತಿಗಳು ಪುತ್ತೂರು ಬಿಲ್ಲವ ಸಂಘಕ್ಕೆ ಆನೆ ಬಲವಿದ್ದಂತೆ. ಜೊತೆಗೆ ಬಿಲ್ಲವ ನಗರ ಸಮಿತಿಯು ಕೂಡ ಬಿಲ್ಲವ ಸಂಘದ ಆಭ್ಯುದಯಕ್ಕೆ ಕಾರಣವಾಗಿದ್ದು, ಸಂಘದ ಬೆಳವಣಿಗೆಯಲ್ಲಿ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ, ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ಉಮೇಶ್ ಬಾಯಾರ್, ಬಿಲ್ಲವ ನಗರ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ತಾರಿಗುಡ್ಡೆರವರು ಮಾತನಾಡಿದರು. ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ, ಬಿಲ್ಲವ ನಗರ ವಲಯ ಸಂಚಾಲಕ ಕಿರಣ್ ಕುಮಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಶ್ವಿತಾ ಪ್ರಾರ್ಥಿಸಿದರು. ಬಿಲ್ಲವ ನಗರ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ಜಯರಾಮ ಪೂಜಾರಿ ಕರ್ಮಲ, ಆನಂದ ಟೈಲರ್, ಸಂಗೀತಾ, ಆನಂದ ಪೂಜಾರಿ, ಜಾರಪ್ಪ ಪೂಜಾರಿ, ಶೀನಪ್ಪ ಪೂಜಾರಿ, ಉಲ್ಲಾಸ್ ಕೋಟ್ಯಾನ್, ಜಯಲಕ್ಷ್ಮೀ ಸುರೇಶ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಬಿಲ್ಲವ ನಗರ ಸಮಿತಿ ಕಾರ್ಯದರ್ಶಿ ದೇವಿಕಾ ಬನ್ನೂರುರವರು ವರದಿ, ಲೆಕ್ಕಪತ್ರ ಮಂಡಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸನ್ಮಾನ/ಉಚಿತ ಪುಸ್ತಕ ವಿತರಣೆ..
ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಬಿಲ್ಲವ ಸಮುದಾಯದ ಅತುಲ್ ಎಂ.ಆರ್, ಜೆ.ಜೆ ಯಜ್ಞಶ್ರೀ, ಪ್ರಿತೇಶ್ ಡಿ, ದಿಶಾ ಕೆ.ರವರುಗಳಿಗೆ ಹಾಗೂ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಬಿಲ್ಲವ ಸಮುದಾಯದ ಅಶ್ವಿತಾ ಎ, ಪ್ರತೀಕ್ಷಾ ಎಸ್, ವಂದನಾ, ಹಿತೇಶ್ ಕೃಷ್ಣ ಪಿ.ಜಿ, ಚೈತನ್ಯ, ಶ್ರೇಷ್ಟ ಡಿ, ಹಿಮಾನಿ ಎ.ಸಿ, ಅಶ್ವಿತಾರವರುನ್ನು ಸನ್ಮಾನಿಸಲಾಯಿತು ಅಲ್ಲದೆ ಅಂಗನವಾಡಿಯಿಂದ ಕಾಲೇಜು ವಿದ್ಯಾಭ್ಯಾಸದವರೆಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ಅಕ್ಷಯ ಕಾಲೇಜಿನಿಂದ ಆಫರ್..
ಸಂಪ್ಯದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಡಿಪ್ಲೋಮಾ ಸಹಿತ ಐದು ಪದವಿಗಳಿದ್ದು, ಸೇರ್ಪಡೆ ಬಯಸುವ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಮಾಡಲಿದ್ದೇವೆ. ಬಿಲ್ಲವ ಸಮುದಾಯದ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ಉದ್ಧೇಶ ಒಂದಾದರೆ, ಬಿಲ್ಲವ ಸಮುದಾಯದ ವಿದ್ಯಾರ್ಥಿಗಳು ಸಮಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆಯಬೇಕು ಎಂಬುದು ಮತ್ತೊಂದು ಉದ್ಧೇಶವನ್ನು ಅಕ್ಷಯ ಕಾಲೇಜು ಹೊಂದಿದೆ.
–ಜಯಂತ್ ನಡುಬೈಲು,
ಚೇರ್‌ಮ್ಯಾನ್, ಅಕ್ಷಯ ಕಾಲೇಜು ಹಾಗೂ
ಮಾಜಿ ಅಧ್ಯಕ್ಷರು, ಪುತ್ತೂರು ಬಿಲ್ಲವ ಸಂಘ