ಆ.18ರೊಳಗೆ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು- ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳಿಗೆ ಎನ್‌ ಐಎ ಎಚ್ಚರಿಕೆ

0

ಉಪ್ಪಿನಂಗಡಿ : ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ತಲೆ ಮರೆಯಿಸಿಕೊಂಡಿರುವ ಆರೋಪಿಗಳ ಪೈಕಿ ಓರ್ವನಾಗಿರುವ ಉಪ್ಪಿನಂಗಡಿ ಸಮೀಪದ 34 ನೇ ನೆಕ್ಕಿಲಾಡಿಯ ಅಗ್ನಾಡಿ ಮನೆ ನಿವಾಸಿ ಮಸೂದ್ ಕೆ ಎ ಬಿನ್ ಅಬೂಬಕ್ಕರ್ ಕೆ ಎ ಎಂಬಾತನ ಮನೆಗೆ ಎನ್ ಐ ಎ ಅಧಿಕಾರಿಗಳು ಆದಿತ್ಯವಾರದಂದು ಭೇಟಿ ನೀಡಿ, ಆಗಸ್ಟ್ 18ರ ಒಳಗಾಗಿ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಎರಡನೇ ಬಾರಿಯ ಆದೇಶ ಪ್ರತಿಯನ್ನು ಮನೆಯ ಮುಂಬಾಗಿಲಿಗೆ ಅಂಟಿಸಿರುವ ಬಗ್ಗೆ ವರದಿಯಾಗಿದೆ.


ಈ ಸಂಬಂಧ ದ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅಧಿಕಾರಿಗಳು ಅಗಸ್ಟ್ 18ರ ಒಳಗಾಗಿ ನ್ಯಾಯಾಲಯಕ್ಕೆ ಶರಣಾಗತರಾಗದಿದ್ದಲ್ಲಿ ಮನೆಯನ್ನು ಜಪ್ತಿ ಮಾಡುವ ಬಗ್ಗೆ , ಹಾಗೂ ತಲೆ ಮರೆಯಿಸಿಕೊಂಡಿರುವ ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲಿ ಸೂಕ್ತ ಬಹುಮಾನವನ್ನು ನೀಡಲಾಗುವುದೆಂದು ಪ್ರಕಟಿದ್ದಾರೆ.


ಅಧಿಕಾರಿಗಳು ಆರೋಪಿಯ ಮನೆ ಹಾಗೂ 34ನೇ ನೆಕ್ಕಿಲಾಡಿಯ ಪ್ರಯಾಣಿಕರ ತಂಗುದಾಣದಲ್ಲಿ ನ್ಯಾಯಾಲಯಕ್ಕೆ ಶರಣಾಗತಿಯಾಗುವ ಸಂಬಂಧ ನೋಟೀಸನ್ನು ಅಂಟಿಸಿರುತ್ತಾರೆ. ಈ ಹಿಂದೆ ಜೂನ್ ತಿಂಗಳ 28ರಂದು ಇದೇ ರೀತಿ ಮೊದಲ ಬಾರಿ ನೋಟೀಸು ಅಂಟಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮೊದಲ ಬಾರಿಯ ನೋಟೀಸಿನಲ್ಲಿ ಕೇವಲ 2 ದಿನಗಳ ಕಾಲಾವಕಾಶ ನೀಡಿದ್ದರೆ, ಎರಡನೇ ಬಾರಿಯ ನೋಟೀಸಿನಲ್ಲಿ ಬರೋಬ್ಬರಿ 1 ತಿಂಗಳಿಗೂ ಹೆಚ್ಚಿನ ಕಾಲಾವಕಾಶವನ್ನು ನೀಡಿದ್ದಾರೆ.
ಪಿ ಎಫ್ ಐ ಸಂಘಟನೆಯ ರಾಜ್ಯ ಮಟ್ಟದ ನಾಯಕನಾಗಿರುವ ಮಸೂದ್, ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸುಳಿವು ಲಭಿಸಿದ ದಿನದಿಂದ ತಲೆ ಮರೆಯಿಸಿಕೊಂಡಿದ್ದು, ಹತ್ಯಾ ಪ್ರಕರಣದಲ್ಲಿ 5 ನೇ ಆರೋಪಿಯನ್ನಾಗಿ ದಾಖಲಾಗಿರುತ್ತದೆ. ನೋಟೀಸು ಅಂಟಿಸುವ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸರು ಎನ್ ಐ ಎ ಅಧಿಕಾರಿಗಳೊಂದಿಗೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here