ಅಡಿಕೆ, ರಬ್ಬರ್‌ಗೆ ಹಳದಿ ಚುಕ್ಕೆ ರೋಗ : ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದ ಪುತ್ತೂರು ಶಾಸಕರು

0


ಪುತ್ತೂರು: ದ.ಕ ಜಿಲ್ಲೆಯಲ್ಲಿ ಅಡಿಕೆಗೆ ಮತ್ತು ರಬ್ಬರ್‌ಗೆ ಎಲೆ ಚುಕ್ಕಿ ರೋಗ ಬಂದಿದ್ದು ಇದು ಕೃಷಿಕರ ಆತಂಕಕ್ಕೆ ಕಾರಣವಾಗಿದ್ದು, ಈ ರೋಗಕ್ಕೆ ಕಾರಣ ಏನೆಂಬುದನ್ನು ಪತ್ತೆ ಮಾಡಬೇಕು ಮತ್ತು ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಶಾಸಕರು ಮಳೆಗಾಲ ಆರಂಭದಲ್ಲೇ ಹಳದಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದರಿಂದ ಈ ರೋಗ ಎಲ್ಲಾ ಕಡೆಗಳಲ್ಲೂ ಹರಡುವ ಸಾಧ್ಯತೆ ಇದೆ. ಅಡಿಕೆಗೆ ಒಂದಲ್ಲ ಒಂದು ರೋಗ ಬರುತ್ತಲೇ ಇದ್ದು ಇದು ಕೃಷಿಕರ ಆತಂಕಕ್ಕೂ ಕಾರಣವಾಗಿದೆ. ಹಳದಿ ಎಲೆ ಚುಕ್ಕಿ ರೋಗದಿಂದ ಅಡಿಕೆ ಹಾಗೂ ರಬ್ಬರ್ ಗಿಡಗಳು ಸತ್ತು ಹೋದಲ್ಲಿ ಕೃಷಿಕರಿಗೆ ನಷ್ಟವಾಗಲಿದ್ದು, ಇದಕ್ಕೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು. ವಿಟ್ಲದಲ್ಲಿರುವ ಸಿಪಿಸಿಆರ್‌ಐ ಎಂಬ ಸಂಸ್ಥೆ ಅಡಿಕೆ ವಿಚಾರದಲ್ಲಿ ಸಂಶೋಧನೆ ಮಾಡುವ ಕೇಂದ್ರ ಸರಕಾರದ ಒಂದು ಸಂಸ್ಥೆಯಾಗಿದ್ದು, ಈ ಸಂಸ್ಥೆ ಅಡಿಕೆ ಕೃಷಿಕರ ಪರವಾಗಿ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಅಡಿಕೆಗೆ ಬಂದಿರುವ ರೋಗದ ಕುರಿತು ಸಂಶೋಧನೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ಶಾಸಕರು ಸರಕಾರದ ಗಮನಕ್ಕೆ ತಂದರು.

ಗಾಯಾಳು ಕೃಷಿಕರಿಗೆ ಮಾಶಾಸನ ಕೊಡಿ
ದ.ಕ ದಲ್ಲಿ ಸಾವಿರಾರು ಕೃಷಿಕರು ಅಡಿಕೆ ಮರ, ತೆಂಗಿನ ಮರ ಮತ್ತು ಮರಗಳಿಂದ ಬಿದ್ದು ಗಂಬೀರ ಸ್ವರೂಪದ ಗಾಯಗಳಾಗಿದೆ, ಚಿಕಿತ್ಸೆಗೂ ಸ್ಪಂದನೆ ನೀಡಲು ಸಾಧ್ಯವಾಗದೆ ಅಥವಾ ಚಿಕಿತ್ಸೆ ನೀಡಿದರೂ ಗುಣಮುಖರಾಗದೆ ಮಲಗಿದ್ದಲ್ಲೇ ಇದ್ದು ಅಂಥಹ ಕೃಷಿಕರಿಗೆ ಸರಕಾರ ತಿಂಗಳಿಗೆ ಕನಿಷ್ಟ 5000 ಮಾಶಾಸನವನ್ನು ನೀಡಬೇಕು. ಮಲಗಿದ್ದಲ್ಲೇ ಇರುವ ಇಂಥಹ ಕೃಷಿಕರಿಗೆ ನಿತ್ಯ ಊಟಕ್ಕೆ, ಔಷಧಿ ಖರ್ಚಿಗೆ ಹಣವಿಲ್ಲದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಇಂತವರು ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಮಿಕ್ಕಿ ಇರಬಹುದು ಅವರೆಲ್ಲರಿಗೂ ಮಾನವೀಯತೆ ನೆಲೆಯಲ್ಲಿ ಸರಕಾರ ಮಾಶಾಸನವನ್ನು ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಎಸ್ ಪಿ ಕಚೇರಿ ಸ್ಥಳಾಂತರ ಮಾಡಿ:
ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಜಿಲ್ಲಾ ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬೇಕು. ಸ್ಥಳಾಂತರಕ್ಕಾಗಿ ಕೆಲವೊಂದು ಪ್ರಕ್ರಿಯೆಗಳು ಈಗಾಗಲೇ ನಡೆದಿದ್ದು, ಅದನ್ನು ಮುಂದಿನ ಬಜೆಟ್‌ನೊಳಗೆ ಕಾರ್ಯರೂಪಕ್ಕೆ ತರಬೇಕು ಎಂದು ಶಾಸಕರು ಆಗ್ರಹಿಸಿದರು. ಮಂಗಳೂರಿನಲ್ಲಿ ಕಮಿಷನರೇಟ್ ವ್ಯಾಪ್ತಿ ಇರುವ ಕಾರಣ ಗ್ರಾಮಾಂತರ ಭಾಗವಾದ ಪುತ್ತೂರಿಗೆ ಎಸ್ ಪಿ ಕಚೇರಿಯನ್ನು ಶಿಫ್ಟ್ ಮಾಡಬೇಕಾದ ಅವಶ್ಯಕತೆ ಇದ್ದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ಇದು ಸಹಕಾರಿಯಾಗಲಿದೆ ಎಂದು ಶಾಸಕರು ಸರಕಾರಕ್ಕೆ ಮನವಿ ಮಾಡಿದರು.

ಪುತ್ತೂರಿನಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ
ಪುತ್ತೂರಿನಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆಯಿಲ್ಲದ ಕಾರಣ ಬಡವರಿಗೆ ತುಂಬಾ ತೊಂದರೆಯಾಗಿದೆ. ಈ ಕಾರಣಕ್ಕೆ ಪುತ್ತೂರಿಗೆ ಮೆಡಿಕಲ್ ಕಾಲೇಜಿನ ಅವಶ್ಯಕತೆ ಇದ್ದು ಈಗಾಗಲೇ ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಕುರಿತು ಸರಕಾರದ ಹಂತದಲ್ಲಿ ಮಾತುಕತೆಗಳನ್ನು ನಡೆಸಲಾಗಿದೆ. ಮುಂದಿನ ಬಜೆಟ್‌ನಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಅನುದಾನವನ್ನು ಕಾಯ್ದಿರುಸುವಂತೆ ಸರಕಾರಕ್ಕೆ ಮನವಿ ಮಾಡಿದರು.

ದ ಕ ಜಿಲ್ಲೆಗೆ ಬಜೆಟ್‌ನಲ್ಲಿ ಏನೂ ಸಿಗುತ್ತಿಲ್ಲ
ಕಳೆದ 15 ವರ್ಷಗಳಿಂದ ಬಜೆಟ್‌ನಲ್ಲಿ ದ ಕ ಜಿಲ್ಲೆಗೆ ಏನೂ ವಿಶೇಷ ಅನುದಾನಗಳು ಸಿಗುತ್ತಿಲ್ಲ. ಮಂಗಳಾ ಕಾರಿಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಇದಕ್ಕೆ 1000 ಕೋಟಿ ಅನುದಾನ ಬೇಕಿದ್ದು, ಪ್ರತೀ ವರ್ಷ ತಲಾ 200 ಕೋಟಿಯಂತೆ ನೀಡಿದರೆ ಈ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ. ದ.ಕ ಜಿಲ್ಲೆಯವರು ಮಾತನಾಡುವುದು ಕಡಿಮೆ, ನಾವು ಇನ್ನೊಬ್ಬರು ಮಾತನಾಡುವುದನ್ನು ಕೇಳುವುದು ಮಾತ್ರ. ಹಾಗಾಗಿ ದ.ಕ ಜಿಲ್ಲೆಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿದರು.

ಮಾತಾಡದೆ ಇಷ್ಟು ಕಾರುಬಾರು ಮಾಡುತ್ತೀರಿ:
ದ.ಕ ಜಿಲ್ಲೆಯವರು ಮಾತನಾಡುವುದು ಕಡಿಮೆ ನಾವು ಇನ್ನೊಬ್ಬರು ಮಾತನಾಡುವುದನ್ನು ಕೇಳುವುದು ಮಾತ್ರ ಎಂದು ಶಾಸಕರು ಸಭಾಧ್ಯಕ್ಷರಲ್ಲಿ ಹೇಳಿದಾಗ “ ನೀವು ಮಾತನಾಡದೆ ಇಷ್ಟೊಂದು ಕಾರುಬಾರು ಮಾಡುತ್ತೀರಿ ಇನ್ನು ಮಾತಾಡಿದ್ರೆ ಏನು ಮಾಡಬಹುದು. ನಾವಿಬ್ಬರೂ ಒಂದೇ ಕಡೆಯಿಂದ ಬಂದವರು ನೀವಲ್ಲಿ ಕುಳಿತುಕೊಂಡಿದ್ದೀರಿ , ಉಳಿದವರು ಆ ಬದಿಯಲ್ಲಿ ವಿರೋಧ ಪಕ್ಷದಲ್ಲಿ ಕೂತಿದ್ದಾರೆ ಎಂದು ಶಾಸಕರು ಹೇಳಿದರು.

ಅಡಿಕೆಗೆ ವಿರೋಧ ಮಾಡಿದವರು ಧ್ವನಿ ಸೇರಿಸ್ತಾ ಇದ್ದಾರೆ:
ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಅಡಿಕೆಗೆ ವಿರೋಧ ಮಾಡುತ್ತಿದ್ದವರು ಈಗ ಅಡಿಕೆ ಬೆಳೆಗಾರರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ಮಾತಿನಲ್ಲೇ ಏಟು ನೀಡಿದ್ದಾರೆ. ನಾವು ವಿರೋಧ ಮಾಡಿಲ್ಲ. ಯಾರು ವಿರೋಧ ಮಾಡಿದವರು ಎಂದು ಅರಗಜ್ಞಾನೇಂದ್ರ ಅವರು ಮರು ಪ್ರಶ್ನಿಸಿದಾಗ ನೀವು ಏನು ಮಾಡಿದ್ದೀರಿ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಶಾಸಕರು ಮರುತ್ತರ ನೀಡಿದರು.

ಮುಂದಿನ 25 ವರ್ಷ ಬಿಜೆಪಿಗೆ ವಿರೋಧ ಪಕ್ಷದ ಸ್ಥಾನ
ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದಾಗ ನನಗೆ ಒಂದು ರೀತಿಯ ಭಯ ಇತ್ತು. ಗೆದ್ದ ಬಳಿಕವೂ ಈ ಭಯ ಇತ್ತು. ಈ ಯೋಜನೆಗಳನ್ನು ಹೇಗೆ ಸರಕಾರ ಕೊಡಬಹುದು ಎಂಬ ಆತಂಕವೂ ಇತ್ತು. ಆದರೆ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಇಟ್ಟ ಬಳಿಕ ನನಗೆ ಧೈರ್ಯ ಬಂತು. ಗ್ಯಾರಂಟಿ ಯೋಜನೆಯನ್ನು ರಾಜ್ಯದ ಜನತೆ ಸ್ವೀಕರಿಸಿದ್ದಾರೆ ಈ ಕಾರಣಕ್ಕೆ ಮುಂದಿನ 25 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುತ್ತದೆ. ಬಿಜೆಪಿ ವಿರೋಧ ಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಬರಲಿದೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here