ಬಿರುಮಲೆಯ ಸೌಂದರ್ಯವನ್ನು ಉಳಿಸಿ, ಬೆಳೆಸುವ ಚಿಂತನೆ ನಮ್ಮದಾಗಲಿ-ಎ.ಜೆ ರೈ
ಪುತ್ತೂರು: ಸಾರ್ವಜನಿಕ ಪ್ರಾಕೃತಿಕ ಸಂಪತ್ತು ಬಿರುಮಲೆ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಬೆಟ್ಟದ ಮೇಲೆ ಅಳವಡಿಸಿರುವ ಸೌಲಭ್ಯಗಳನ್ನು ಹಾಳುಗೆಡಹುದು, ವಿರೂಪಗೊಳಿಸುವುದು ಇತ್ಯಾದಿಗಳನ್ನು ಮಾಡದೆ ಅದರ ಸೌಂದರ್ಯವನ್ನು ಉಳಿಸಿ, ಬೆಳೆಸುವ ಕಡೆಗೆ ನಮ್ಮ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿಯ ಅಧ್ಯಕ್ಷ ಎ.ಜೆ ರೈಯವರು ಹೇಳಿದರು.
ಜು.15 ರಂದು ಗುಲಾಬಿಸದನ ಮನೆಯಲ್ಲಿ ಜರುಗಿದ ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿ ಮಹಾಸಭೆಯಲ್ಲಿ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಸಮಿತಿಯು ಹಗಲಿರುಳು ಶ್ರಮಿಸುತ್ತಿದೆ. ಅದಕ್ಕೆ ಸರಕಾರದ ಸಹಕಾರ, ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಸಾರ್ವಜನಿಕರು ನೀಡುವ ದೇಣಿಗೆಗಳ ಉಪಕಾರ ಇದು ಬೆಟ್ಟದ ಸರ್ವತೋಮುಖ ಅಭಿವೃದ್ಧಿಯ ಶ್ರೀಕಾರವಾಗಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸದಸ್ಯ ಸಹಕಾರ ರತ್ನ ಪುರಸ್ಕೃತ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ರವರು ಮಾತನಾಡಿ, ಯಾವುದೇ ಪ್ರಸ್ತಾವನೆಗಳು ಶಾಸಕರ ಮುಖಾಂತರ ಸಲ್ಲಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂಬ ವಿಚಾರ ತಿಳಿಸಿ ಈ ನಿಟ್ಟಿನಲ್ಲಿ ಶಾಸಕರನ್ನು ಭೇಟಿಯಾಗುವ ವಿಚಾರವನ್ನು ಅವರು ಸಭೆಯ ಮುಂದಿಟ್ಟರು. ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿಯ ಗೌರವಾಧ್ಯಕ್ಷ ಎ.ವಿ ನಾರಾಯಣರವರು ಮಾತನಾಡಿ, ನಮ್ಮ ಸಂಸ್ಥೆ ಎಷ್ಟೇ ಪ್ರಯತ್ನಿಸಿದರೂ ಕೂಡ ಸರಕಾರದ ಸಹಕಾರವಿಲ್ಲದೆ ಸಾಧ್ಯವಿಲ್ಲ. ಅಭಿವೃದ್ಧಿ ಯೋಜನೆಗೆ ಸರಕಾರ ಹಾಗೂ ನಮ್ಮ ಸಂಸ್ಥೆಯು ಪರಸ್ಪರ ಸಹಕರಿಸಬೇಕು ಎಂದರು.
ನಿವೃತ್ತ ಸಹಾಯಕ ಪ್ರಾಧ್ಯಾಪಕ ಹಾಗೂ ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್ ಪ್ರಾರ್ಥಿಸಿ, ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಎಂ.ಎನ್ ಅಮ್ಮಣ್ಣಾಯರು ವರದಿ ವಾಚಿಸಿದರು. ಸಮಿತಿ ಸದಸ್ಯ ನಿತಿನ್ ಪಕ್ಕಳರವರು ಬಿರುಮಲೆ ನ ಬೆಟ್ಟದ ಅಭಿವೃದ್ಧಿಯ ಬಗ್ಗೆ ಪುತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ನೀಲ ನಕಾಶೆಯ ವಿವರಗಳನ್ನು ತಿಳಿಸಿ ವಂದಿಸಿದರು. ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಲ್ಲದೆ ಅಶ್ವಿನ್ ಎಲ್.ಶೆಟ್ಟಿ, ಸಂದೀಪ್ ರೈ, ವಿ.ಕೆ ಜೈನ್, ದಂಬೆಕಾನ ಸದಾಶಿವ ರೈ, ಶಿವರಾಂ ಆಳ್ವ, ಡಾ|ಶ್ರೀಶಕುಮಾರ್, ಡಾ|ಕೆ.ಎಸ್ ಭಟ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಶಾಸಕರಲ್ಲಿ ಮನವಿ:
ಶಾಸಕರು ಲಭ್ಯರಿದ್ದಾರೆ ಎಂಬ ಮಾಹಿತಿಯನ್ನು ಅರಿತ ಸಮಿತಿಯು ಕೂಡಲೇ ಶಾಸಕರನ್ನು ಭೇಟಿಯಾಗಿ ಬಿರುಮಲೆಯ ಸರ್ವತೋಮುಖ ಅಭಿವೃದ್ಧಿಗೆ ಸರಕಾರದ ಸಹಕಾರ, ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯ ವಿಚಾರಗಳನ್ನು ತಿಳಿಸಿ ಸಹಕರಿಸಬೇಕು ಎಂದು ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯು ಕೇಳಿಕೊಂಡರು. ಶಾಸಕರು ಶೀಘ್ರವೇ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಆಫೀಸಿನಿಂದ ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದ ರೂ.5 ಲಕ್ಷ ಅನುದಾನದ ಬಿಡುಗಡೆ, ಪುತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಂದಾಜು ರೂ.2.8 ಕೋಟಿ ಅಭಿವೃದ್ಧಿಯ ಪ್ರಸ್ತಾವನೆ ಸಲ್ಲಿಸಿದ ವಿಚಾರ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷ ಎ.ಜೆ ರೈಯವರು ಸಮಗ್ರ ಚಿತ್ರಣ ನೀಡಿದರು.