`ಡ್ರಗ್ಸ್ ಜಾಲ ತಡೆಯಲು ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯ’- ಎನ್‌ಸಿಒಆರ್‌ಡಿ ಉಪವಿಭಾಗದ ಸಭೆಯಲ್ಲಿ ಎ.ಸಿ.ಗಿರೀಶ್‌ ನಂದನ್

0

ಪುತ್ತೂರು: ಮಾದಕ ವಸ್ತು ಡ್ರಗ್ಸ್ ಚಟಗಳು ಯುವ ಸಮುದಾಯವನ್ನು ಹೆಚ್ಚಾಗಿ ಕಾಡುತ್ತಿದೆ. ಇದನ್ನು ತಡೆಯಲು ಶಾಲಾ ಕಾಲೇಜುಗಳಲ್ಲಿ ಒಂದು ದಿನಕ್ಕೆ ಸೀಮಿತವಾಗಿ ಜಾಗೃತಿ ಸಭೆ ನಡೆಯದೆ ನಿರಂತರವಾಗಿರಬೇಕು. ಎನ್‌ಸಿಸಿ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಘಟಕಗಳನ್ನು ಬಳಸಿಕೊಂಡು ಎಚ್ಚರ ಮೂಡಿಸುವ ಕೆಲಸ ಆಗಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಗಿರೀಶ್‌ನಂದನ್ ತಿಳಿಸಿದ್ದಾರೆ.

ಪುತ್ತೂರು ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜು.18ರಂದು, ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ಪರಿಣಾಮ (ಎನ್‌ಸಿಒಆರ್‌ಡಿ)ಕುರಿತು ನಡೆದ ಉಪವಿಭಾಗ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಸಮುದಾಯವನ್ನೇ ಗುರಿಯಾಗಿರಿಸಿಕೊಂಡು ಡ್ರಗ್ಸ್ ಪದಾರ್ಥ ಪೂರೈಕೆ ಮಾಡುವ ಜಾಲ ಇದೆ. ಓರ್ವ ವಿದ್ಯಾರ್ಥಿ ಡ್ರಗ್ಸ್‌ಗೆ ದಾಸನಾದರೆ ಬಳಿಕ ಆತನ ಸ್ನೇಹಿತರು ಕೂಡ ಬಲಿಯಾಗುತ್ತಾರೆ. ಮಾದಕ ಪದಾರ್ಥ ಸೇವನೆಯಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಅವರು ಹೇಳಿದರು. ಡ್ರಗ್ಸ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಒಮ್ಮೆ ಮಾತ್ರ ನಡೆಸುವುದಲ್ಲ. ಬದಲಿಗೆ ಪ್ರತಿ ತಿಂಗಳು ನಿರಂತರವಾಗಿ ನಡೆಯಬೇಕು. ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್‌ನ ಬಗ್ಗೆ ಒಂದು ಕೇಸು ವರದಿಯಾದರೂ ಆ ಶಿಕ್ಷಣ ಸಂಸ್ಥೆಗಳ ಕೆರಿಯರ್ ಹಾಳಾಗುತ್ತದೆ.ಅದನ್ನು ತಡೆಯಲು ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಎಂದ ಅವರು, ಕೆಲವೊಂದು ಸಂದರ್ಭ ವಿದ್ಯಾರ್ಥಿಯ ಕೆರಿಯರ್ ಕೂಡಾ ಹಾಳಾಗುತ್ತದೆ ಎಂದು ಸ್ವಲ್ಪ ಎಚ್ಚರಿಸಿ ಬಿಡುವುದಲ್ಲ. ಅವರ ಪೋಷಕರ ಮೂಲಕ ವಿದ್ಯಾರ್ಥಿಯ ಕೌನ್ಸಿಲಿಂಗ್ ಅಗತ್ಯವಾಗಿ ಮಾಡಬೇಕೆಂದರು.
ಅರಣ್ಯ ಇಲಾಖೆ ಗಮನಹರಿಸಬೇಕು: ಪಶ್ಚಿಮಘಟ್ಟದ ಕೆಲ ಕಾಡುಗಳಿಗೆ ತೆರಳಿ ಮಾದಕ ವಸ್ತುಗಳ ಬಳಕೆ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ಅರಣ್ಯ ಇಲಾಖೆಯು ಗಮನ ಹರಿಸಬೇಕು. ಏಕೆಂದರೆ ಅರಣ್ಯ ಇಲಾಖೆ ಹೊರತುಪಡಿಸಿ ಉಳಿದವರಿಗೆ ಪ್ರವೇಶ ಇಲ್ಲದ ಸ್ಥಳಗಳನ್ನು ಇಂತಹ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ ಎಂದು ಸಹಾಯಕ ಆಯುಕ್ತರು ಹೇಳಿದರು.
ಪ್ರಕರಣದ ಮಾಹಿತಿ ಇದ್ದರೆ ತಿಳಿಸಿ: ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಮಾತನಾಡಿ ಶಾಲಾ ಕಾಲೇಜುಗಳ ಬಳಿ, ಪೆಟ್ಟಿ ಅಂಗಡಿಗಳಲ್ಲಿ ಹೆಚ್ಚಾಗಿ ಡ್ರಗ್ಸ್ ಮಾರಾಟ ನಡೆಯುತ್ತಿದೆ.ಚೈನ್ ಮಾದರಿಯಲ್ಲಿ ಈ ವ್ಯವಹಾರ ನಡೆಯುತ್ತದೆ.ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಸಂಶಯಿತ ಚಟುವಟಿಕೆ ಕಂಡು ಬಂದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕು. ವಿದ್ಯಾರ್ಥಿಗಳು ಸ್ಟೇ ಇರುವ ಖಾಸಗಿ ವಸತಿಗೃಹಗಳಲ್ಲಿ ಮಾದಕ ವಸ್ತುಗಳ ಬಳಕೆ ಕಂಡಲ್ಲಿ ಮಾಹಿತಿ ನೀಡಬೇಕು.ಪ್ರಕರಣವನ್ನು ಗೌಪ್ಯವಾಗಿಡುವುದರಿಂದ ಅದು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಿದಂತಾಗುತ್ತದೆ ಎಂದ ಅವರು ಮಾದಕ ಪದಾರ್ಥ ಪೂರೈಕೆ, ಸೇವನೆ ಇವೆರೆಡೂ ಕಾನೂನಿನ ಪ್ರಕಾರ ಅಪರಾಧ. ಇದಕ್ಕೆ ಶಿಕ್ಷೆ ಇದೆ ಎಂದರು. ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ತಾ.ಪಂ ಯೋಜನಾಧಿಕಾರಿ ಸುಕನ್ಯ, ಸಿಡಿಪಿಒ ಶ್ರೀಲತಾ, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಎಮ್.ಎಸ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಉಪ್ಪಿನಂಗಡಿ ಠಾಣೆಯ ಎಸ್.ಐ ರುಕ್ಮ ನಾಯ್ಕ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಧನಂಜಯ ಬಿ.ಸಿ., ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ, ಯುವಜನ ಸಬಲೀಕರಣ ಇಲಾಖೆಯ ಶ್ರೀಕಾಂತ್ ಬಿರಾವು, ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐಯ ವಸಂತಿ, ವಿವೇಕಾನಂದ ಕಾಲೇಜಿನ ಡಾ.|ಅರುಣ್ ಪ್ರಕಾಶ್,ಫಿಲೋಮಿನಾ ಕಾಲೇಜಿನ ಪ್ರಜ್ವಲ್ ರಾವ್, ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್‌ನ ಫಿಸಿಯೋಲಾಜಿಸ್ಟ್ ನಮೃತಾ ವಿ.ಬಿ ಉಪಸ್ಥಿತರಿದ್ದರು.

ಪ್ರತಿ ತಿಂಗಳ 3ನೇ ಮಂಗಳವಾರ ಸಭೆ

ಮಾದಕ ದ್ರವ್ಯ ತಡೆ ಕಾರ್ಯ ಕೇವಲ ಪೊಲೀಸ್ ಇಲಾಖೆಗೆ ಸೀಮಿತವಲ್ಲ.ಎಲ್ಲಾ ಇಲಾಖೆಗಳು ಇದಕ್ಕಾಗಿ ಕೈ ಜೋಡಿಸಬೇಕು.ಇದು ವಿಸ್ತರಣೆ ಆದಲ್ಲಿ ನಮ್ಮ ಮಕ್ಕಳು ಹಾಳಾಗುವುದು ಎಂಬ ಅರಿವು ನಮಗಿರಬೇಕು. ಡ್ರಗ್ಸ್ ಚಟುವಟಿಕೆ ಪ್ರಕರಣದ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಪ್ರತಿ ತಿಂಗಳ ಮೂರನೇ ಮಂಗಳವಾರ ಉಪವಿಭಾಗ ಮಟ್ಟದಲ್ಲಿ ಈ ಸಭೆಯನ್ನು ನಡೆಸಲಾಗುವುದು ಎಂದು ಸಹಾಯಕ ಕಮಿಷನರ್ ಗಿರೀಶ್‌ನಂದನ್ ತಿಳಿಸಿದರು.

LEAVE A REPLY

Please enter your comment!
Please enter your name here