ಸ್ಕ್ಯಾನಿಂಗ್ ವರದಿಯಲ್ಲಿ ಅಪೆಂಡಿಕ್ಸ್ ಲಕ್ಷಣವಿದೆಯೆಂದು ಹೇಳಿ ವೈದ್ಯರಿಂದ ಬೇಜವಾಬ್ದಾರಿ ಚಿಕಿತ್ಸೆ ಆರೋಪ- ತಾ| ಆರೋಗ್ಯಾಧಿಕಾರಿಗೆ ದೂರು

0

ಸುಳ್ಳು ಆರೋಪದ ವಿರುದ್ಧ ಐಎಂಎ ಸಲಹೆ ಪಡೆದು ಕೋರ್ಟ್ ಮೆಟ್ಟಿಲೇರುವುದು ಖಂಡಿತ ಆಸ್ಪತ್ರೆ ವೈದ್ಯರ ಪ್ರತಿಕ್ರಿಯೆ

ಪುತ್ತೂರು:ಮಗುವಿನ ಹೊಟ್ಟೆನೋವಿಗೆ ಸಂಬಂಧಿಸಿ ಸ್ಕ್ಯಾನಿಂಗ್ ವರದಿಯಂತೆ ಅಪೆಂಡಿಕ್ಸ್ ಲಕ್ಷಣವೆಂದು ಹೇಳಿ ವೈದ್ಯರೋರ್ವರು ಬೇಜವಾಬ್ದಾರಿ ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಿ ತಾಲೂಕು ಆರೋಗ್ಯಾಧಿಕಾರಿಯವರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.


ಸ್ಕ್ಯಾನಿಂಗ್ ವರದಿಯಾಧರಿಸಿ ಆಸ್ಪತ್ರೆಯ ವೈದ್ಯರು ಮಗುವಿಗೆ ಅಪೆಂಡಿಕ್ಸ್ ಲಕ್ಷಣವಿದೆಯೆಂದು ಹೇಳಿದ್ದರಿಂದ ಫ್ಯಾಮಿಲಿ ವೈದ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ, ಅಪೆಂಡಿಕ್ಸ್‌ನ ಯಾವುದೇ ಲಕ್ಷಣವಿಲ್ಲವೆಂದು ತಿಳಿಸಿದ ಪರಿಣಾಮ ಬೇರೆ ಎರಡು ಕಡೆ ಸ್ಕ್ಯಾನಿಂಗ್ ಮಾಡಿಸಿದಾಗ ವರದಿಯಲ್ಲಿ ಇದಾವುದೇ ಲಕ್ಷಣ ಕಂಡು ಬಾರದ ಹಿನ್ನೆಲೆಯಲ್ಲಿ ಆರಂಭದಲ್ಲಿ ವೈದ್ಯರು ಬೇಜವಾಬ್ದಾರಿ ಚಿಕಿತ್ಸೆ ನೀಡಿದ್ದಾರೆಂದು ಆರೋಪಿಸಿ ಪುತ್ತೂರು ಚೇತನಾ ಆಸ್ಪತ್ರೆಯ ವೈದ್ಯ ಡಾ. ಶ್ರೀಕಾಂತ್ ರಾವ್ ಅವರ ವಿರುದ್ಧ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.


ಇದು ದೂರಿನ ವಿವರ:
ಬೆಳ್ತಂಗಡಿ ತಾಲೂಕಿನ ಪುತ್ತಿಲ ನಿವಾಸಿ ಸುಜಿರು ಮಹಮ್ಮದ್ ಫೈಝಲ್ ಎಂಬವರು ತಾಲೂಕು ಆರೋಗ್ಯಾಧಿಕಾರಿಯವರಿಗೆ ದೂರು ನೀಡಿದವರು.ನನ್ನ 4 ವರ್ಷ 1 ತಿಂಗಳ ಮಗಳು ಫಾತಿಮತ್ ಫಹ್‌ಲಾ ಅವಳಿಗೆ ಜು.13ರಂದು ಹೊಟ್ಟೆ ನೋವು ಕಾಣಿಸಿಕೊಂಡಿತ್ತು.ಜು.14ರಂದು ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಡಾ.ಶ್ರೀಕಾಂತ್ ಅವರನ್ನು ಭೇಟಿಯಾಗಿ ಹೊಟ್ಟೆನೋವಿನ ವಿಚಾರ ತಿಳಿಸಿದಾಗ ಅವರು ತಮ್ಮ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಲು ತಿಳಿಸಿದ್ದರು.ಆಸ್ಪತ್ರೆಯ ವೈದ್ಯ ಡಾ.ಚಂದ್ರಶೇಖರ್ ಅವರು ಸ್ಕ್ಯಾನಿಂಗ್ ಮಾಡಿ ಅಪೆಂಡಿಕ್ಸ್ 9.ಎಂ.ಎಂ ಇದೆ ಎಂದು ವರದಿ ನೀಡಿದ್ದರು.ಅದರಂತೆ ಡಾ.ಶ್ರೀಕಾಂತ್ ರಾವ್ ಅವರು,ನಿಮ್ಮ ಮಗಳಿಗೆ ಅಪೆಂಡಿಕ್ಸ್ ಇದೆ.ತಕ್ಷಣ ಆಪರೇಶನ್ ಮಾಡಬೇಕು.ಇಲ್ಲದಿದ್ದಲ್ಲಿ ಮಗಳ ಜೀವಕ್ಕೆ ಅಪಾಯವಿದೆ’ ಎಂದಾಗ ನನ್ನ ಫ್ಯಾಮಿಲಿ ವೈದ್ಯರನ್ನು ಸಂಪರ್ಕಿಸಿದ್ದು,ಅಪೆಂಡಿಕ್ಸ್‌ನ ಯಾವುದೇ ಲಕ್ಷಣವಿಲ್ಲ.ಬೇರೆ ಕಡೆ ಸ್ಕ್ಯಾನಿಂಗ್ ಮಾಡಿ ನೋಡಿ ಎಂಬ ಅವರ ಸಲಹೆಯಂತೆ ಪುತ್ತೂರು ಸಿಟಿ ಆಸ್ಪತ್ರೆ ಮತ್ತು ದಿವ್ಯಾ ಸ್ಕ್ಯಾನಿಂಗ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಅಪೆಂಡಿಕ್ಸ್‌ನ ಯಾವುದೇ ಲಕ್ಷಣಗಳು ಕಾಣದೆ ಇದ್ದಾಗ ಆರಂಭದ ಸ್ಕ್ಯಾನಿಂಗ್ ವರದಿ ಮೇಲ್ನೋಟಕ್ಕೆ ವೈದ್ಯಕೀಯ ಜಾಲ ಎಂದು ಕಂಡು ಬಂದಂತೆ ನಾವು ಸಾಮಾಜಿಕ ಕಾರ್ಯಕರ್ತ ಆಲಿ ಪರ್ಲಡ್ಕ ಮತ್ತು ಇಫಾರh ಬನ್ನೂರು ಅವರೊಂದಿಗೆ ಚೇತನಾ ಆಸ್ಪತ್ರೆಯ ಡಾ.ಶ್ರೀಕಾಂತ್ ರಾವ್ ಅವರನ್ನು ಸಂಪರ್ಕಿಸಿದಾಗ ಉಡಾಫೆ ಉತ್ತರ ನೀಡಿದ್ದಾರೆ.ಈ ನಿಟ್ಟಿನಲ್ಲಿ ನಮಗೆ ನೀವು ನ್ಯಾಯ ಕೊಡಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.


ದೂರು ಪರಿಶೀಲನೆಯಲ್ಲಿದೆ:
ಆಸ್ಪತ್ರೆಯಲ್ಲಿ ಬೇಜವಾಬ್ದಾರಿ ಚಿಕಿತ್ಸೆ ನೀಡಿದ್ದರೆಂದು ಆರೋಪಿಸಿ ಮಹಮ್ಮದ್ ಫೈಝಲ್ ಎಂಬವರಿಂದ ದೂರು ಬಂದಿದೆ.ಈ ಕುರಿತು ದೂರು ಪರಿಶೀಲನಾ ಹಂತದಲ್ಲಿದೆ.ವೈದ್ಯಕೀಯ ರಂಗದಲ್ಲಿ ಅದರದ್ದೇ ಆದ ಮಾನದಂಡವಿದೆ.ಅದನ್ನೆಲ್ಲಾ ನೋಡಿಕೊಂಡು ಪರಿಶೀಲನೆ ಮಾಡುತ್ತಿದ್ದೇನೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರು ಜು. ೧೭ರಂದು ಪ್ರತಿಕ್ರಿಯೆ ನೀಡಿದ್ದರು.


ಸುಳ್ಳು ಆರೋಪದ ವಿರುದ್ಧ ಐಎಂಎ ಸಲಹೆ ಪಡೆದು ಕೋರ್ಟ್ ಮೆಟ್ಟಿಲೇರುವುದು ಖಂಡಿತ-ಡಾ.ಶ್ರೀಕಾಂತ್ ರಾವ್, ಡಾ.ಜೆ.ಸಿ.ಅಡಿಗ:
ಇದೇ ಜುಲೈ 15ರಂಂದು ಬೆಳಿಗ್ಗೆ ಮಹಮ್ಮದ್ ಫೈಝಲ್ ಮೂರುಗೋಳಿಯವರು ತನ್ನ 4 ವರ್ಷ ಪ್ರಾಯದ ಪುತ್ರಿ ಫಾತಿಮತ್ ಫಹ್‌ಲಾ ಅವರನ್ನು ಕರೆದುಕೊಂಡು ಬಂದಿದ್ದರು.ರಾತ್ರಿಯಿಡೀ ಹೊಟ್ಟೆನೋವಿನಿಂದ ನರಳುತ್ತಿದ್ದ ಮಗುವಿನ ಸ್ಕ್ಯಾನಿಂಗ್ ಅನ್ನು ಡಾ.ಚಂದ್ರಶೇಖರ್ ಅವರು ಮಾಡಿದಾಗ ಅಪೆಂಡಿಸೈಟಿಸ್ ಸುಮಾರು 9 ಎಮ್.ಎಮ್ ಊದಿಕೊಂಡಿತ್ತು.ಸಾಮಾನ್ಯವಾಗಿ ಮಕ್ಕಳಿಗೆ ತೀವ್ರವಾಗಿ ಹೊಟ್ಟೆನೋವು ಬರುತ್ತಿದ್ದರೆ ನಮ್ಮ ಅನುಭವದಂತೆ ಮೂತ್ರನಾಳದ ಕಲ್ಲುಗಳು ಅಥವಾ ಅಪೆಂಡಿಸೈಟಿಸ್ ಸ್ಕ್ಯಾನಿಂಗ್‌ನಲ್ಲಿ ಕಾಣಸಿಗುತ್ತದೆ.ಅದಕ್ಕೆ ಸಾಮಾನ್ಯವಾಗಿ ನಾವು ಹೊಟ್ಟೆಗೆ ಆಂಟಿಬಯೋಟಿಕ್ ಕೊಟ್ಟು ನೋಡುತ್ತೇವೆ.ನೋವು ಜಾಸ್ತಿಯಾದಾಗ ದಾಖಲಾತಿ ಮಾಡಿ ಆಂಟಿಬಯೋಟಿಕ್ ಇಂಜಕ್ಷನ್ ಕೋರ್ಸ್ ಕೊಟ್ಟು ನೋಡುತ್ತೇವೆ.ಸುಮಾರು 10ರಲ್ಲಿ 9 ಮಕ್ಕಳು ಈ ಚಿಕಿತ್ಸೆಯಿಂದ ಗುಣಮುಖರಾಗುತ್ತಾರೆ ಎಂದು ಚೇತನಾ ಆಸ್ಪತ್ರೆಯ ವೈದ್ಯರಾದ ಡಾ.ಶ್ರಿಕಾಂತ್ ರಾವ್ ಮತ್ತು ಡಾ.ಜೆ.ಸಿ.ಅಡಿಗ ಅವರು ಹೇಳಿದ್ದಾರೆ.


ಈ ಮಗುವಿಗೆ ಆಂಟಿಬಯೋಟಿಕ್ ಔಷಧ ಬರೆದು ಕೊಟ್ಟಿರುತ್ತೇವೆ.ನೋವು ತೀವ್ರವಾದರೆ ಆಂಟಿಬಯೋಟಿಕ್ ಇಂಜಕ್ಷನ್ ಬೇಕಾಗಬಹುದು ಎಂದು ಹೇಳಿದ್ದೇನೆ.ಅಪೆಂಡಿಸೈಟಿಸ್ ಸುಮಾರು 12, 13 ಎಂ.ಎಂ. ಆದರೆ ಸೋರುವ ಸಾಧ್ಯತೆ ಜಾಸ್ತಿಯಾಗುತ್ತದೆ.ತೀವ್ರ ತರವಾದ ಇನ್‌ಫೆಕ್ಷನ್ ಇದ್ದರೆ ಸೋರುವ ಚಾನ್ಸ್ ಜಾಸ್ತಿ.ಕಳೆದ 6 ತಿಂಗಳಲ್ಲಿ ತಡವಾಗಿ ಬಂದ ಮೂವರು ಮಕ್ಕಳಿಗೆ ಅಪೆಂಡಿಸೈಟಿಸ್ ಸೋರಿ ಹೋಗಿ ಮಂಗಳೂರಿಗೆ ಕಳುಹಿಸಬೇಕಾಯಿತು.ಗುಣವಾಗಲು ಬಹಳ ಕಷ್ಟವಾಗಿತ್ತು ಎಂದು ಡಾ. ಶ್ರೀಕಾಂತ್ ರಾವ್, ಡಾ.ಜೆ.ಸಿ.ಅಡಿಗ ತಿಳಿಸಿದ್ದಾರೆ.


ಬಲವಾದ ಕಾರಣವಿಲ್ಲದೆ ಆಪರೇಶನ್ ಮಾಡುವುದಿಲ್ಲ:
ನಮ್ಮ ಆಸ್ಪತ್ರೆಯಲ್ಲಿ ಬಲವಾದ ಕಾರಣವಿಲ್ಲದೆ ಅಪೆಂಡಿಸೈಟಿಸ್ ಆಪರೇಶನ್ ಮಾಡುವುದಿಲ್ಲ.ಅಪೆಂಡಿಕ್ಸ್ ರೋಗ ಕೆಲವೊಮ್ಮೆ ಸ್ಕ್ಯಾನಿಂಗ್‌ನಲ್ಲಿ ಸಿಗದೆ ಸೋರಿ ಹೋಗಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ.ಇದರಿಂದಾಗಿ ಟ್ರೀಟ್‌ಮೆಂಟ್ ಆರಂಭಿಸಿದರೆ ಲಾಭವೇ ಹೊರತು ನಷ್ಟವಿಲ್ಲ.ಸಣ್ಣ ಮಕ್ಕಳಿಗೆ ಅಪೆಂಡಿಸೈಟಿಸ್ ಉಲ್ಬಣವಾದರೆ ನಾವು ಮಂಗಳೂರಿಗೆ ಕಳುಹಿಸುತ್ತೇವೆ. ಪೋಷಕರ ಮೇಲೆ ನಮ್ಮದು ಯಾವುದೇ ಒತ್ತಡವಿಲ್ಲ. ಅವರು ಚಿಕಿತ್ಸೆಗೆ ಎಲ್ಲಿಗೆ ಬೇಕಾದರೂ ಕರಕೊಂಡು ಹೋಗಬಹುದು.


ಡಾ.ಚಂದ್ರಶೇಖರ್ ಅನುಭವಿ ಸ್ಕ್ಯಾನಿಂಗ್ ತಜ್ಞರು:
ಡಾ.ಚಂದ್ರಶೇಖರ್ ಅವರು ಅನುಭವಿ ಸ್ಕ್ಯಾನಿಂಗ್ ತಜ್ಞರಾಗಿದ್ದು, ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಎ.ಜೆ.ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.ಮಕ್ಕಳ ಮೂತ್ರನಾಳದ ಕಲ್ಲುಗಳು, ಪಿತ್ತನಾಳ ಕಲ್ಲುಗಳು, ಅಪೆಂಡಿಸೈಟಿಸ್ ಮೊದಲಾದ ಮಕ್ಕಳಲ್ಲಿ ಹೊಟ್ಟೆ ನೋವು ಉಂಟು ಮಾಡುವ ರೋಗಗಳಿಗೆ ಯಶಸ್ವಿಯಾಗಿ ಪತ್ತೆ ಹಚ್ಚಿ ಕೊಡುತ್ತಾರೆ.ನಮ್ಮಲ್ಲಿ ಬರುವ, ಹೊಟ್ಟೆನೋವಿನಿಂದ ತೊಂದರೆಗೊಳಗಾಗುವ ಮಕ್ಕಳು ಗುಣಮುಖರಾಗುವುದೇ ಅದಕ್ಕೆ ಸಾಕ್ಷಿ.


ಕೇಳುವ ತಾಳ್ಮೆಯಿಲ್ಲದವರಿಂದ ತಪ್ಪು ಹೊರಿಸುವ ಅಜೆಂಡಾ:
ಮರುದಿನ ಶನಿವಾರದಂದು ಮಹಮ್ಮದ್ ಫೈಝಲ್‌ರವರು ಇಫಾಝ್ ಬನ್ನೂರು ಹಾಗು ಅಲಿ ಪರ್ಲಡ್ಕ ಅವರೊಂದಿಗೆ ಆಸ್ಪತ್ರೆಗೆ ವಿಚಾರಿಸಲು ಬಂದಾಗ ಅವರಿಗೆ ಕೆಳಗಡೆ ವಾರ್ಡ್‌ಗೆ ಕರೆದು ಕೊಂಡು ಹೋಗಿ 3 ಮಂದಿ ಅಪೆಂಡಿಸೈಟಿಸ್ ಮತ್ತು ಕಲ್ಲುಗಳ ಲಕ್ಷಣಗಳಿರುವ ಮಕ್ಕಳನ್ನು ತೋರಿಸಿ ವಿವರಿಸಿದೆ.ನಾನು ಹೇಳಿದ ಯಾವ ವಿಷಯವನ್ನೂ ಕೇಳುವ ತಾಳ್ಮೆ ಅವರಿಗಿರಲಿಲ್ಲ. ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ತಪ್ಪು ಹೊರಿಸುವ ಅಜೆಂಡಾ ಇದ್ದ ಹಾಗೆ ಕಾಣುತ್ತಿತ್ತು.


ಪ್ರಾಮಾಣಿಕ ಸೇವೆ ನೋವುಂಟಾಗಿದೆ:
ಸುಮಾರು 37 ವರ್ಷಗಳಿಂದ ಪ್ರಾಮಾಣಿಕ ಹಾಗು ಜನಸ್ನೇಹಿಯಾಗಿ ರೋಗಿಗಳ ರೋಗಗಳನ್ನು ಉಪಶಮನ ಮಾಡುತ್ತಿರುವ ಆಸ್ಪತ್ರೆಯ ಕುರಿತು ಮಾನಹಾನಿ ಸಂದೇಶ ರವಾನಿಸುತ್ತಿರುವುದು ನಮಗೆ ತಿಳಿದು ಬಂದಿದೆ.ಇದೊಂದು ಸುಳ್ಳು ಆರೋಪವಾಗಿದ್ದು, ವೈದ್ಯರ ಸೇವೆಯನ್ನು ಕುಂದಿಸುವುದು ಸರಿಯಲ್ಲ.ಸುಳ್ಳು ಆಪಾದನೆ ನಮ್ಮ ಪ್ರಾಮಾಣಿಕ ಸೇವೆಗೆ ನೋವುಂಟು ಮಾಡಿದೆ. ಪೋಷಕರು ಸತ್ಯಾ ಸತ್ಯತೆಯನ್ನು ಅರಿಯದೆ ಮತ್ತು ಸರಿಯಾಗಿ ಸಮಾಲೋಚಿಸದೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಡಾ.ಶ್ರೀಕಾಂತ್ ರಾವ್ ಮತ್ತು ಡಾ.ಜೆ.ಸಿ.ಅಡಿಗ ಅವರು ಹೇಳಿದ್ದಾರೆ.


ಮಗುವಿನ ಅಪೆಂಡಿಸೈಟಿಸ್ ಸ್ಕ್ಯಾನಿಂಗ್ ಸಾಕ್ಷಿ ನಮ್ಮಲ್ಲಿದೆ:
ಮಗುವಿನ ಅಪೆಂಡಿಸೈಟಿಸ್ ಸ್ಕ್ಯಾನಿಂಗ್ ಸಾಕ್ಷಿ ನಮ್ಮಲ್ಲಿದೆ.ಆಸ್ಪತ್ರೆಯ ತೇಜೋವಧೆ ಮಾಡಿ, ಮಾನಸಿಕ ಹಿಂಸೆ ಕೊಟ್ಟು ಮತ್ತು ಆರ್ಥಿಕ ನಷ್ಟ ಉಂಟು ಮಾಡಿ ಹಿಂಸೆ ಮಾಡಿದ ಈ ಮೂವರ ವಿರುದ್ಧ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಲೇರುವುದು ಖಂಡಿತ.ಈ ಕುರಿತು ಭಾರತೀಯ ವೈದ್ಯಕೀಯ ಸಂಘದಲ್ಲಿ ಸಮಾಲೋಚನೆ ಮಾಡಿಕೊಂಡು ಅವರ ಸಲಹೆಯ ಮೇರೆಗೆ ಕೋರ್ಟ್ ಮೆಟ್ಟಲೇರಲಿದ್ದೇವೆ.ಸಾಕಷ್ಟು ಅನುಭವವಿಲ್ಲದವರು ಬೇಕಾಬಿಟ್ಟಿ ಮೀಡಿಯಾದಲ್ಲಿ ತಪ್ಪು ಸಂದೇಶ ಕಳುಹಿಸಿ ಸಮಾಜದಲ್ಲಿ ಶಾಂತಿ ಕದಡುವುದು ನಿಲ್ಲಬೇಕು ಎಂದು ಚೇತನಾ ಆಸ್ಪತ್ರೆಯ ಡಾ.ಶ್ರೀಕಾಂತ್ ರಾವ್ ಮತ್ತು ಡಾ.ಜೆ.ಸಿ.ಅಡಿಗ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here