ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಭೆ

0

ಸೆ.30,ಅ.1:ಪ್ರೊ ಕಬಡ್ಡಿ ನಡೆಸಲು ನಿರ್ಧಾರ

ಪುತ್ತೂರು: ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ವತಿಯಿಂದ ಗಣೇಶೋತ್ಸವವದ ಸಲುವಾಗಿ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ.ಉದಯ ಚೌಟರವರ ಸ್ಮರಣಾರ್ಥ ಮ್ಯಾಟ್ ಅಂಕಣದಲ್ಲಿ ನಡೆಯುವ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಮಾದರಿಯ ಪೂರ್ವಭಾವಿ ಸಭೆಯು ಜು.19 ರಂದು ದರ್ಬೆ ನಿರೀಕ್ಷಣ ಮಂದಿರದ ಬಳಿ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೆ.30, ಅ.1ರಂದು ಪ್ರೊ ಕಬಡ್ಡಿ:
ಕಿಲ್ಲೆ ಮೈದಾನದಲ್ಲಿ ಮ್ಯಾಟ್ ಅಂಕಣದಲ್ಲಿ ನಡೆಯಲಿರುವ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಅಹರ್ನಿಶಿ ಪಂದ್ಯಾಟವು 2023ನೇ ಸೆ.30 ಹಾಗೂ ಅ.1 ರಂದು ನಡೆಸಲಾಗುವುದು ಎಂದು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ವ್ಯಕ್ತವಾಯಿತು. ಕಳೆದ ಐದು ಆವೃತ್ತಿಗಳಲ್ಲೂ ಅಮೆಚೂರು ವತಿಯಿಂದ ನಡೆದ ಗ್ರಾಮೀಣ ಕ್ರೀಡೆಯಾದ ಈ ಕಬಡ್ಡಿಗೆ ನಿರೀಕ್ಷಿಸದ ರೀತಿಯಲ್ಲಿ ಜನಮನ್ನಣೆ ದೊರಕುವ ಮೂಲಕ ಕ್ರೀಡಾಭಿಮಾನಿಗಳು ಆಶೀರ್ವದಿಸಿದ್ದಾರೆ. ಇದರ ಫಲವಾಗಿ ಪ್ರೊ ಕಬಡ್ಡಿಯು ಯಾವುದೇ ಅಡಚಣೆಯಿಲ್ಲದೆ, ಕ್ರೀಡಾಭಿಮಾನಿಗಳ ಪ್ರೋತ್ಸಾಹದಿಂದ ನಿರಾತಂಕವಾಗಿ ನಡೆದಿದೆ. ನಮ್ಮನ್ನು ಅಗಲಿದ ಕಬಡ್ಡಿ ಆಟಗಾರ ದಿ.ಉದಯ ಚೌಟರವರು ಎಂದಿಗೂ ಕಬಡ್ಡಿ ಆಟವನ್ನು ನಿಲ್ಲಿಸಬಾರದು, ನನ್ನ ಪ್ರೋತ್ಸಾಹ ಎಂದಿಗೂ ಇದೆ ಎಂದು ಅವರು ಹೇಳಿದ್ದರು. ಈ ಬಾರಿಯೂ ಕ್ರೀಡಾಭಿಮಾನಿಗಳ ಪ್ರೋತ್ಸಾಹವನ್ನು ನಿರೀಕ್ಷೆ ಮಾಡುತ್ತಾ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ಕಬಡ್ಡಿ ಕ್ರೀಡಾಭಿಮಾನಿಗಳು ಆಶೀರ್ವದಿಸಬೇಕಾಗಿದೆ ಎಂದು ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ಸಭೆಯಲ್ಲಿ ಹೇಳಿದರು.


ಆಹ್ವಾನಿತ 16 ತಂಡಗಳು:
ಶನಿವಾರ ಮತ್ತು ಆದಿತ್ಯವಾರ ನಡೆಯುವ ಈ ಪಂದ್ಯಾಕೂಟದಲ್ಲಿ ಆಹ್ವಾನಿತ ಬಲಿಷ್ಟ 16 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಕಳೆದ ಆವೃತ್ತಿಗಳಲ್ಲಿ ನಡೆದಂತೆ ಈ ಬಾರಿ ಪ್ರದರ್ಶನ ಪಂದ್ಯಕ್ಕೆ ಅವಕಾಶವಿಲ್ಲ ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಯಿತು.


ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಉದ್ಯಮಿ ಶಿವರಾಂ ಆಳ್ವ, ಶಶಿಕಿರಣ್ ರೈ ನೂಜಿಬೈಲು, ರೋಶನ್ ರೈ ಬನ್ನೂರು, ಪ್ರಮುಖರಾದ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ, ಪ್ರಕಾಶ್ ಡಿ’ಸೋಜ, ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯನಾರಾಯಣ ರೈ, ಸುಧಾಕರ್ ರೈ, ಸುಧೀರ್ ರೈ, ದಾಮೋದರ್ ಕಜೆ, ಬಾಲಕೃಷ್ಣ ಪೊರ್ದಾಲ್, ಮನೋಹರ್, ಗುರುಕಿರಣ್, ಕಬಡ್ಡಿ ಕೋಚ್ ಹಬೀಬ್ ಮಾಣಿ, ರೆಫ್ರೀ ಬೋರ್ಡ್ ಸದಸ್ಯ ಪುರುಷೋತ್ತಮ್ ಕೋಲ್ಫೆ, ಝಿಯಾದ್ ರೆಂಜ, ಸದಾಶಿವ ಶೆಟ್ಟಿ ಪಟ್ಟೆ, ರಫೀಕ್ ಎಂ.ಕೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ವಂದಿಸಿದರು.

ನೂತನ ಒಳಾಂಗಣ ಕಬಡ್ಡಿ ಅಂಕಣ ಸ್ವಂತ ಜಾಗಕ್ಕೆ ಶಾಸಕರಿಗೆ ಮನವಿ..
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ತಾಲೂಕಿನ ಕಬಡ್ಡಿ ಕ್ರೀಡಾಪಟುಗಳ ಭವಿಷ್ಯಕ್ಕೋಸ್ಕರ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಕ್ರೀಡೆಯನ್ನು ಪುತ್ತೂರು ತಾಲೂಕಿನಲ್ಲಿ ಬೆಳೆಸಲು ಅದಕ್ಕೆ ಪುತ್ತೂರು ನಗರ ಪ್ರದೇಶಕ್ಕೆ ಹತ್ತಿರವಾಗಿ ನೂತನ ಒಳಾಂಗಣ ಕಬಡ್ಡಿ ಅಂಕಣ ನಿರ್ಮಿಸಲು ಸ್ವಂತ ಜಾಗದ ಜೊತೆಗೆ ಕಬಡ್ಡಿ ಮ್ಯಾಟ್ ಅವಶ್ಯಕತೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here