ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಅಧಿಕೃತ ಸುತ್ತೋಲೆ-ವಿಮಾಕಂತು ಪಾವತಿಸಲು ಜುಲೈ 31 ಕಡೆಯ ದಿನ

0

ಕಾವು: ಅಂತೂ ಇಂತೂ ಕೊನೆಗೂ ಬೆಳೆವಿಮೆ ಯೋಜನೆಗೆ ಅಧಿಕೃತ ಆದೇಶ ಹೊರಬಿದ್ದಿದ್ದು, ವಿಮಾಕಂತು ಪಾವತಿಸಲು ಜುಲೈ 31 ಕಡೆಯ ದಿನವಾಗಿದೆ. ಈ ಹಿಂದೆ ಪ್ರತಿ ವರ್ಷ ಜೂನ್ 30 ಕಡೆಯ ದಿನವಾಗಿತ್ತು, ಈ ಬಾರಿ ಜೂನ್ 30 ಕಳೆದರೂ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿರಲಿಲ್ಲ, ಹಾಗಾಗಿ ಕೃಷಿಕರಲ್ಲಿ ಬೆಳೆವಿಮೆ ಯೋಜನೆಯ ಬಗ್ಗೆ ಗೊಂದಲ ಉಂಟಾಗಿತ್ತು, ಅಂತಿಮವಾಗಿ ಬೆಳೆವಿಮೆ ಯೋಜನೆಗೆ ಆದೇಶ ಹೊರಡಿಸಲಾಗಿತ್ತಾದರೂ ದ.ಕ ಜಿಲ್ಲೆಯನ್ನು ಮಾತ್ರ ಕೈಬಿಡಲಾಗಿತ್ತು, ಟೆಂಡರ್ ಪ್ರಕ್ರಿಯೆಯಲ್ಲಿ ಆದ ಸಮಸ್ಯೆಯಿಂದ ದ.ಕ ಜಿಲ್ಲೆಗೆ ಆದೇಶ ಹೊರಡಿಸಲಾಗಿರಲಿಲ್ಲ, ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅಧಿಕೃತ ಆದೇಶ ಹೊರಡಿಸಿದ್ದು, ವಿಮಾಕಂತು ಪಾವತಿಸಲು ಮಾತ್ರ ಜುಲೈ 31 ಕಡೆಯ ದಿನವಾಗಿದೆ.


ಸಹಕಾರ ಸಂಘಗಳಿಗೆ ಆದೇಶ:
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕಿನಿಂದ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆಯೋಜನೆಯ ಸುತ್ತೋಲೆ ಬಂದಿದ್ದು, ಸುತ್ತೋಲೆಯಲ್ಲಿ ದ.ಕ ಜಿಲ್ಲೆಗೆ ಅಡಿಕೆ ಮತ್ತು ಕಾಳುಮೆಣಸಿಗೆ ಮಾತ್ರ ವಿಮಾಕಂತು ಪಾವತಿಸಲು ಅವಕಾಶವಿದ್ದು, ಅಡಿಕೆ ಎಕ್ರೆಗೆ ರೂ. 2590 ಮತ್ತು ಕಾಳುಮೆಣಸಿಗೆ ಎಕ್ರೆಗೆ ರೂ.951/- ನಿಗದಿಪಡಿಸಲಾಗಿದೆ. ಬೆಳೆ ಸಾಲ ಹೊಂದಿರುವ ಕೃಷಿಕರು ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ವಿಮಾಕಂತು ಪಾವತಿಸಬಹುದು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿಮಾಕಂತು ಪಾವತಿಸಲು ರೈತರ ಪಹಣಿ ಆಧಾರ್‌ನೊಂದಿಗೆ ಕಡ್ಡಾಯವಾಗಿ ಜೋಡಣೆಯಾಗಿರಬೇಕು ಅಂದರೆ”FRUITS ID”ಹೊಂದಿರಬೇಕು. ಮತ್ತು ಕಡ್ಡಾಯವಾಗಿ ಬೆಳೆ ವಿವರ ಕಂದಾಯ ಇಲಾಖೆಯ ಭೂಮಿ ದಾಖಲೆಯಲ್ಲಿ (ಮುಂಗಾರು ರೈತರ ಬೆಳೆ ಸಮೀಕ್ಷೆ 2023) ನಮೂದಾಗಿರಬೇಕು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here