ಸವಣೂರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆ

0

*ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ-ಕ್ರಮಕ್ಕೆ ಒತ್ತಾಯ

*ಜಾನಪದ ಕ್ರೀಡೆ ಕೋಳಿ ಅಂಕಕ್ಕೆ ಅವಕಾಶಕ್ಕೆ ಮನವಿ

*ಸವಣೂರಿಗೆ ಪಶುವೈದ್ಯ ಕೇಂದ್ರಕ್ಕೆ ಬೇಡಿಕೆ

ಸವಣೂರು: ಸರಕಾರದಿಂದ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗುತ್ತಿದ್ದು, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಬರೆದುಕೊಳ್ಳುವ ಕುರಿತು ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗಿರಿಶಂಕರ್‌ ಸುಲಾಯ ಅವರು,ಅಂಗನವಾಡಿ ಕೇಂದ್ರಗಳಿಂದ ಮಕ್ಕಳಿಗೆ ,ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ ಆಹಾರದ ಜತೆಗೆ ನೀಡಲಾಗುತ್ತಿರುವ ಮೊಟ್ಟೆಯು ಕೆಟ್ಟು ಕೊಳೆತಿರುತ್ತದೆ. ಇಂತಹ ನಿರ್ಲಕ್ಯ ವಹಿಸುವ ವಿತರಕರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕು.ಅಲ್ಲದೇ ಅಂಗನವಾಡಿಗಳಿಗೆ ಸ್ಥಳೀಯವಾಗಿ ಮೊಟ್ಟೆ ಖರೀದಿಗೆ ಅವಕಾಶ ನೀಡಬೇಕು ಎಂದರು.

ಜಾನಪದ ಕ್ರೀಡೆ ಕೋಳಿ ಅಂಕಕ್ಕೆ ಬೇಕು ಅವಕಾಶ
ಕರಾವಳಿಯ ಜಾನಪದ ಕ್ರೀಡೆ ಹಾಗೂ ಧಾರ್ಮಿಕ ಹಿನ್ನೆಲೆಯಿರುವ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಸರಕಾರಕ್ಕೆ ಬರೆದುಕೊಳ್ಳುಬೇಕು ಎಂದು ಸದಸ್ಯ ಸತೀಶ್‌ ಅಂಗಡಿಮೂಲೆ ಹೇಳಿದರು.ಧಾರ್ಮಿಕ ಹಿನ್ನೆಲೆಯಿರುವುದರಿಂದ ಜಾತ್ರೋತ್ಸವ ,ನೇಮೋತ್ಸವ ಹಾಗೂ ವಿಶೇಷ ದಿನಗಳಂದು ಈ ಹಿಂದಿನಿಂದಲೂ ಕೋಳಿ ಅಂಕ ನಡೆಯುತ್ತಿತ್ತು. ಈಗ ಕಾನೂನಿನ ನೆಪವೊಡ್ಡಿ ಕೋಳಿ ಅಂಕ್ಕೆ ಅವಕಾಶ ಸಿಗುತ್ತಿಲ್ಲ. ಕಂಬಳದಂತೆಯೇ ಕೋಳಿ ಅಂಕ ನಡೆಸಲು ಅವಕಾಶ ನೀಡಬೇಕು ಈ ಕುರಿತು ಸರಕಾರಕ್ಕೆ ಬರೆದುಕೊಳ್ಳಬೇಕು ಎಂದರು.
ಸದಸ್ಯ ಭರತ್‌ ರೈ ಕಲಾಯಿ ಮಾತನಾಡಿ,ಜಾನಪದ ಕ್ರೀಡೆ ಕಂಬಳದ ಹಾಗೇ ಕೋಳಿ ಅಂಕಕ್ಕೂ ಐತಿಹಾಸಿಕ ಹಿನ್ನೆಲೆ ಇದೆ.ಕರಾವಳಿಯ ವಿವಿದ ಕಡೆ ಕಲಾಕೃತಿಗಳಲ್ಲಿ ಕೋಳಿ ಅಂಕವನ್ನೂ ಚಿತ್ರಿಸಲಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಕುದುರೆ ರೇಸ್‌ ನಂತಹ ಕ್ರೀಡೆಗೆ ಅವಕಾಶ ಇದೆ. ಈ ನಿಟ್ಟಿನಲ್ಲಿ ಕೋಳಿ ಅಂಕಕ್ಕೂ ಅವಕಾಶ ನೀಡಲಿ ಎಂದರು.

ಸವಣೂರಿಗೆ ಪಶುವೈದ್ಯ ಕೇಂದ್ರ ಬೇಕು
ಸದಸ್ಯ ರಫೀಕ್‌ ಎಂ.ಎ. ಅವರು ಸವಣೂರಿನಲ್ಲಿ ಪಶುವೈದ್ಯ ಕೇಂದ್ರ ತೆರೆಯಬೇಕು.ಈ ಕುರಿತು ಸರ್ಕಾರಕ್ಕೆ ಬರೆದುಕೊಳ್ಳಬೇಕು ಎಂದರು. ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳಲ್ಲಿ ಹಲವು ಮಂದಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಹೈನುಗಾರರಿಗೆ ಸಮಸ್ಯೆಯಾದರೆ ದೂರದ ಪುತ್ತೂರಿಗೆ ಹೋಗಬೇಕಾದ ಸ್ಥಿತಿ ಇದೆ ಎಂದರು.
ಸದಸ್ಯ ತಾರಾನಾಥ ಬೊಳಿಯಾಲ ಮಾತನಾಡಿ, ಮಾಡಾವು ಮಲೆಯಲ್ಲಿ ಹಲವು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಅಲ್ಪಸಂಖ್ಯಾತ ನಿಗಮದ ಅನುದಾನ ನೀಡುವಂತೆ ಇಲಾಖೆಗೆ ಬರೆದುಕೊಳ್ಳಬೇಕು. ಪಾಲ್ತಾಡಿ ಅಂಗನವಾಡಿ ಕೇಂದ್ರದ ದುರಸ್ತಿಗೆ ಅನುದಾನ ನೀಡುವಂತೆ, ಪಾಲ್ತಾಡಿ ಹಿ.ಪ್ರಾ.ಶಾಲೆಯ ಅಕ್ಷರ ದಾಸೋಹ ಕೊಠಡಿಯ ಮೇಲ್ಚಾವಣಿ ಸೋರುತ್ತಿದ್ದು, ಹೊಸದಾಗಿ ಕಟ್ಟಡ ಮಂಜೂರಾತಿಗೆ ಸರ್ಕಾರಕ್ಕೆ ಬರೆದುಕೊಳ್ಳಬೇಕು. ಅಂಕತ್ತಡ್ಕದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡುವಂತೆ ಹೇಳಿದರು.

ಸವಣೂರಿಗೆ ಪ್ರತ್ಯೇಕ ಘನತ್ಯಾಜ್ಯ ವಿಲೇವಾರಿ ಘಟಕ ಬೇಕು
ಸದಸ್ಯ ಸತೀಶ್‌ ಅಂಗಡಿಮೂಲೆ ಮಾತನಾಡಿ, ಸವಣೂರು ಗ್ರಾಮಕ್ಕೆ ಪ್ರತ್ಯೇಕ ಘನತ್ಯಾಜ್ಯ ವಿಲೇವಾರಿ ಘಟಕ ಮಂಜೂರು ಮಾಡುವಂತೆ ಸರಕಾರಕ್ಕೆ ಬರೆದುಕೊಳ್ಳಬೇಕು. ಈಗಿರುವ ಘನತ್ಯಾಜ್ಯ ಘಟಕ ಪಾಲ್ತಾಡಿ ಗ್ರಾಮದ ನಾಡೋಳಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪಾಲ್ತಾಡಿ ಪ್ರತ್ಯೇಕ ಗ್ರಾ.ಪಂ.ಆಗುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಸವಣೂರುಗೆ ಪ್ರತ್ಯೇಕ ಘನತ್ಯಾಜ್ಯ ಘಟಕ ಬೇಕು ಎಂದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ನೊಂದಾವಣೆಗೆ ಮೊಬೈಲ್‌ ಸಂಖ್ಯೆಗೆ ಸಂದೇಶ ಬಂದ ನಂತರ ಅದರಲ್ಲಿ ಸೂಚಿಸಿದ ಸ್ಥಳದಲ್ಲಿ ನೊಂದಾಯಿಸಬೇಕೆಂಬ ನಿಯಮ ಇದ್ದು, ಇದನ್ನು ಸರಳೀಕರಿಸಿ ಇತರ ಯೋಜನೆಗೆ ಅರ್ಜಿ ಸಲ್ಲಿಸುವ ರೀತಿಯಲ್ಲೇ ಮಾಡುವಂತೆ ಸರ್ಕಾರಕ್ಕೆ ಬರೆದುಕೊಳ್ಳುವಂತೆ ಸತೀಶ್‌ ಅಂಗಡಿಮೂಲೆ ಹೇಳಿದರು.
ಪಾಲ್ತಾಡಿಯ ವಿವಿಧ ಕಾಲನಿಗಳ ಅಭಿವೃದ್ದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡುವಂತೆ ಸರ್ಕಾರಕ್ಕೆ ಬರೆದುಕೊಳ್ಳುವಂತೆ ಭರತ್‌ ರೈ ಹೇಳಿದರು.

ಎಲ್ಲಾ ಕಸ ಸಂಗ್ರಹವಾಗಲಿ
ಗ್ರಾ.ಪಂ.ವತಿಯಿಂದ ಸಂಜೀವಿನಿ ಒಕ್ಕೂಟದ ಮೂಲಕ ಒಣತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಸಿ ತ್ಯಾಜ್ಯವನ್ನೂ ಸಂಗ್ರಹಿಸುವಂತಾಗಲಿ ಎಂದು ಸದಸ್ಯ ಎಂ.ಎ.ರಫೀಕ್‌ ಹೇಳಿದರು.

ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಸರಕಾರಕ್ಕೆ ಅಭಿನಂದನೆ
ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆಯನ್ನು ಜಾರಿಗೆ ತಂದ ಸರಕಾರಕ್ಕೆ ರಫೀಕ್‌ ಎಂ.ಎ.ಅಭಿನಂದನೆ ಸಲ್ಲಿಸಿದರು.

ಶಿಕ್ಷಕರ ವರ್ಗಾವಣೆ ,ಬದಲಿ ವ್ಯವಸ್ಥೆಯ ಬಳಿಕ ರಿಲೀವ್‌ ಮಾಡಲಿ
ವಿವಿಧ ಶಾಲೆಗಳ ಶಿಕ್ಷಕರ ವರ್ಗಾವಣೆಯಾಗುತ್ತಿದೆ. ಆದರೆ ವರ್ಗಾವಣೆಯಾದ ಶಿಕ್ಷಕರ ಸ್ಥಾನಕ್ಕೆ ಬದಲಿ ಶಿಕ್ಷಕರು ಬಂದ ಮೇಲೆ ರಿಲೀವ್‌ ಮಾಡಬೇಕು. ಇಲ್ಲದಿದ್ದಲ್ಲಿ ಮಕ್ಕಳಿಗೆ ಸಮಸ್ಯೆಯಾಗುತ್ತದೆ. ಅಲ್ಲದೇ ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿರುತ್ತಾರೆ. ಅವರು ವರ್ಗಾವಣೆಯಾದರೆ ಮಕ್ಕಳ ಭವಿಷ್ಯವೇನು? ಎಂದು ಸದಸ್ಯ ರಫೀಕ್‌ ಹೇಳಿದರು. ಮಾಂತೂರು ಅಂಗನವಾಡಿ ಕಾರ್ಯಕರ್ತೆ ವರ್ಗಾವಣೆಯಾಗಿದ್ದಾರೆ. ಬದಲಿ ಕಾರ್ಯಕರ್ತೆಯರು ಬಂದ ಮೇಲೆ ಅವರನ್ನು ರಿಲೀವ್‌ ಮಾಡಬೇಕು. ಇಲ್ಲದಿದ್ದಲ್ಲಿ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂದರು. ಮೊಗರು ಶಾಲಾ ಕೊಠಡಿಯು ಬಿರುಕು ಬಿಟ್ಟಿದೆ. ಈ ಕುರಿತು ಮಾಧ್ಯಮಗಳಲ್ಲೂ ವರದಿಯಾಗಿದೆ. ಆದರೆ ಶಿಕ್ಷಣ ಇಲಾಖೆಯ ಒಬ್ಬನೇ ಒಬ್ಬ ಅಧಿಕಾರಿ ಶಾಲೆಗೆ ಭೇಟಿ ನೀಡಿಲ್ಲ. ಅಧಿಕಾರಿಗಳ ಬೇಜಾವಾಬ್ದಾರಿ ವರ್ತನೆ ಸರಿಯಲ್ಲ ಎಂದು ರಫೀಕ್‌ ಹೇಳಿದರು. ಎಲ್ಲಾ ಶಾಲೆಯ ಸಮೀಪವಿರುವ ಮುಖ್ಯರಸ್ತೆಯಲ್ಲಿ ಸ್ಪೀಡ್‌ ಗವರ್ನರ್‌ ಅಳವಡಿಸಬೇಕು ಎಂದರು.

ಮಾಂತೂರು ಅಂಬೇಡ್ಕರ್‌ ಭವನದ ಬಳಿ ಇರುವ ಖಾಲಿ ಜಾಗದಲ್ಲಿ ಮಕ್ಕಳ ಪಾರ್ಕ್‌ ನಿರ್ಮಿಸಬೇಕು, ಇಡ್ಯಾಡಿಯಿಂದ ವೀರಮಂಗಲ ಸಂಪರ್ಕ ಸೇತುವೆ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಇಡ್ಯಾಡಿ-ವೀರಮಂಗಲ ರಸ್ತೆಯನ್ನು ಅಭಿವೃದ್ದಿಪಡಿಸಲು ಅನುದಾನ ನೀಡುವಂತೆ ಶಾಸಕರಿಗೆ ಬರೆದುಕೊಳ್ಳಬೇಕು. ಗ್ರಾ.ಪಂ.ನ ಹಳೆಯ ಕಟ್ಟಡವನ್ನು ತೆರವು ಮಾಡಬೇಕು. ಅಲ್ಪಸಂಖ್ಯಾತರು ಹೆಚ್ಚಿರುವ ಭಾಗದ ಒಳರಸ್ತೆಗಳಿಗೆ ಇಂಟರ್‌ ಲಾಕ್ ಅಳವಡಿಕೆಗೆ ಅಲ್ಪಸಂಖ್ಯಾತ ಇಲಾಖೆಯಿಂದ ಅನುದಾನ, ಮುಂಡೋತಡ್ಕ ಅಮ್ಮನವರ ಗುಡಿಯ ಸುತ್ತುಪೌಳಿ ಹಾಗೂ ಆವರಣ ಗೋಡೆಗೆ, ಮುಂಡೋತಡ್ಕ ಪ.ಜಾ.ಕಾಲನಿ ರಸ್ತೆಯ ಕಾಂಕ್ರೀಟ್‌ ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನೀಡುವಂತೆ ಬರೆದುಕೊಳ್ಳುವಂತೆ ಎಂ.ಎ.ರಫೀಕ್‌ ಹೇಳಿದರು.

ಸರಕಾರಿ ಶಾಲೆಗಳನ್ನು ಸಂಘ ಸಂಸ್ಥೆಗಳಿಗೆ ದತ್ತು ಕೊಡಲಿ
ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಊರಿನ ಸಂಘ ಸಂಸ್ಥೆಗಳು,ದಾನಿಗಳು ಹಲವು ಕೆಲಸಗಳನ್ನು ನಡೆಸುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಶಾಲೆಗಳಿಗೆ ಶಿಕ್ಷಕರನ್ನು ನೀಡದೆ ಸಮಸ್ಯೆ ಸೃಷ್ಟಿಸುತ್ತದೆ. ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಸಂಘ ಸಂಸ್ಥೆಗಳಿಗೆ ದತ್ತು ನೀಡಲಿ ಎಂದು ಗಿರಿಶಂಕರ ಸುಲಾಯ ಹೇಳಿದರು. ಅಂಗನವಾಡಿ ಕೇಂದ್ರವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ಇಲಾಖೆ ಮುತುವರ್ಜಿ ವಹಿಸಬೇಕು. ಅಂಗನವಾಡಿ ಕೇಂದ್ರ ಬಲಿಷ್ಠವಾದರೆ ಸರಕಾರಿ ಶಾಲೆಗಳೂ ಉಳಿಯುತ್ತದೆ. ಎರಡನ್ನೂ ಜಂಟಿಯಾಗಿ ಅಭಿವೃದ್ದಿ ಮಾಡಬೇಕು ಎಂದು ಗಿರಿಶಂಕರ್‌ ಸುಲಾಯ ಹೇಳಿದರು.

ಸವಣೂರಿಗೆ ಬೇರೆ ಬ್ಯಾಂಕ್‌ ಬೇಕು
ಸವಣೂರಿಗೆ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ ಬೇಕು. ಈಗಿರುವ ಬ್ಯಾಂಕಿನಿಂದ ಗ್ರಾಹಕರಿಗೆ ಸರಿಯಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ದಿನಂಪ್ರತಿ ಬ್ಯಾಂಕಿನಲ್ಲಿ ಗ್ರಾಹಕರ ಸರತಿ ಸಾಲು ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಆರ್.ಬಿ.ಐ.ಗೆ ಪತ್ರ ಬರೆಯಬೇಕು ಎಂದು ಗಿರಿಶಂಕರ್‌ ಸುಲಾಯ ಹೇಳಿದರು.

ಅಬ್ದುಲ್‌ ರಝಾಕ್‌ ಅವರು ಮಾತನಾಡಿ, ಸವಣೂರಿನ ಬ್ಯಾಂಕಿನ ಸಮಸ್ಯೆ ಪರಿಹಾರವಾಗುವಂತಹದ್ದು ಅಲ್ಲ. ಅಧಿಕಾರಿಗಳಿಗೆ ಕನ್ನಡ ಬರುವುದಿಲ್ಲ. ಗ್ರಾಹಕರಿಗೆ ಸಮಸ್ಯೆ ತಪ್ಪಿದಲ್ಲ ಎಂದರು. ಇತರ ಸದಸ್ಯರೂ ಧನಿಗೂಡಿಸಿದರು. ಟಾಸ್ಕ್‌ ಪೋರ್ಸ್‌ ಸಭೆಗೆ ತಹಶೀಲ್ದಾರ್‌ ಅಥವಾ ಉಪತಹಶೀಲ್ದಾರ್‌ ನೋಡಲ್‌ ಅಧಿಕಾರಿಯಾಗಬೇಕು. ಕಾರ್ಯಪಡೆ ಸಭೆಗಳಿಗೆ ನೋಡಲ್‌ ಅಧಿಕಾರಿಯಾಗಿ ತಹಶಿಲ್ದಾರ್‌ ಅಥವಾ ಉಪತಹಶೀಲ್ದಾರ್‌ ಅವರನ್ನೇ ನೋಡಲ್‌ ಅಧಿಕಾರಿಯಾಗಿ ಮಾಡಬೇಕು. ಈಗ ಪ.ಪೂ.ಕಾಲೇಜಿನ ಉಪನ್ಯಾಸಕರನ್ನು ನಿಯೋಜನೆ ಮಾಡುತ್ತಿದ್ದಾರೆ. ಇದು ಸರಿಯಲ್ಲ, ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಮಸ್ಯೆಯಾಗುತ್ತದೆ. ಗ್ರಾ.ಪಂ.ನಲ್ಲಿ ನಡೆಸುವ ಕೆ.ಡಿ.ಪಿ.ಸಭೆಗಳಿಗೆ ಎಲ್ಲಾ ಅಧಿಕಾರಿಗಳು ಬರಬೇಕು. ಸುಮ್ಮನೆ ಕಾಟಾಚಾರಕ್ಕೆ ಸಭೆ ನಡೆಸುವುದು ಬೇಡ ಎಂದು ಸದಸ್ಯ ಗಿರಿಶಂಕರ ಸುಲಾಯ ಹೇಳಿದರು.

ಅಮೃತ ಸರೋವರಕ್ಕೆ ಬೇಲಿ ,ಸಿ.ಸಿ.ಕೆಮರಾ ಬೇಕು
ಅಮೃತ ಸರೋವರ ಯೋಜನೆಯಲ್ಲಿ ಅಭಿವೃದ್ದಿ ಮಾಡಲಾದ ಕೊಂಬಕೆರೆಯ ಸುತ್ತ ಬೇಲಿ ಹಾಕಬೇಕು. ಅಲ್ಲದೇ ಸಿಸಿ ಕೆಮರಾ ಅಳವಡಿಸಬೇಕು. ಅಲ್ಲದೆ ಪ್ರವಾಸೋದ್ಯಮ ನಿಟ್ಟಿನಲ್ಲಿ ಈ ಕೆರೆಯಲ್ಲಿ ಬೋಟಿಂಗ್‌ ಮಾಡಲು ಅವಕಾಶ ನೀಡಬೇಕು ಎಂದರು.

ಅಧ್ಯಕ್ಷ/ಉಪಾಧ್ಯಕ್ಷರಿಗೆ ಅಭಿನಂದನೆ
ಕಳೆದ 2.5 ವರ್ಷಗಳಲ್ಲಿ ಅಧ್ಯಕ್ಷರಾಗಿ ರಾಜೀವಿ ಶೆಟ್ಟಿ ಹಾಗೂ ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ಅವರು ಉತ್ತಮ ರೀತಿಯಲ್ಲಿ ಗ್ರಾ.ಪಂ.ನ ಆಡಳಿತ ನಡೆಸಿದ್ದು, ಯಾವುದೇ ಗೊಂದಲವಿಲ್ಲದೇ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕೆಲಸಗಳನ್ನು ನಡೆಸಿದ್ದಾರೆ ಎಂದು ಸದಸ್ಯರು ಅಭಿನಂದಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯೆಯರಾದ ಚಂದ್ರಾವತಿ ಸುಣ್ಣಾಜೆ, ಹರಿಕಲಾ ರೈ ಕುಂಜಾಡಿ, ವಿನೋದಾ ಸಿ.ರೈ ಚೆನ್ನಾವರ, ಚೆನ್ನು ಮಾಂತೂರು, ಚೇತನಾ ಪಾಲ್ತಾಡಿ, ಯಶೋಧಾ, ಸುಂದರಿ ಬಿ.ಎಸ್‌, ಆಯಿಷತ್‌ ಸಬೀನಾ, ಜಯಶ್ರೀ, ಗಿರಿಶಂಕರ ಸುಲಾಯ, ಅಬ್ದುಲ್‌ ರಝಾಕ್‌, ರಫೀಕ್‌ ಎಂ.ಎ, ಭರತ್‌ ರೈ, ಸತೀಶ್‌ ಅಂಗಡಿಮೂಲೆ, ತಾರಾನಾಥ ಬೊಳಿಯಾಲ, ಹರೀಶ್‌ ಕಾಯರಗುರಿ ಕಲಾಪದಲ್ಲಿ ಭಾಗವಹಿಸಿದರು.

ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎ.ಮನ್ಮಥ ಸ್ವಾಗತಿಸಿ, ಸಿಬ್ಬಂದಿ ದಯಾನಂದ ಮಾಲೆತ್ತಾರು ಅವರು ಸುತ್ತೋಲೆಗಳನ್ನು ಓದಿದರು. ಪ್ರಮೋದ್‌ ಕುಮಾರ್‌ ವಂದಿಸಿದರು.

LEAVE A REPLY

Please enter your comment!
Please enter your name here