ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ ಉಪಚುನಾವಣೆ-ಬಿರುಸಿನ ಮತದಾನ

0

ಪುತ್ತೂರು:ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರಿಬ್ಬರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಹೊಸದಾಗಿ ಸದಸ್ಯರ ಆಯ್ಕೆಗೆ ಮತದಾನ ಪ್ರಕ್ರಿಯೆಗಳು ಜು.23ರಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭಗೊಂಡಿದ್ದು ಮತದಾನ ಬಿರುಸುಗೊಂಡಿದೆ.


ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಒಟ್ಟು ಆರು ಮಂದಿ ಅಂತಿಮ ಕಣದಲ್ಲಿದ್ದು ಎರಡೂ ಕಡೆಯೂ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಮತದಾನವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಲಿದೆ.

ನಿಡ್ಪಳ್ಳಿ ಗ್ರಾ.ಪಂನ ಉಪ ಚುನಾವಣೆಯಲ್ಲಿ ನಿಡ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುತ್ತಿದೆ. ಇಲ್ಲಿ 297 ಪುರುಷರು ಹಾಗೂ 310 ಮಹಿಳೆಯರು ಸೇರಿದಂತೆ ಒಟ್ಟು 607 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.
ಆರ್ಯಾಪು ಗ್ರಾ.ಪಂನ ಉಪ ಚುನಾವಣೆಗೆ ಕುಂಜೂರು ಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುತ್ತಿದೆ. ಇಲ್ಲಿ 634 ಪುರುಷರು, 603 ಮಹಿಳೆಯರು ಸೇರಿದಂತೆ ಒಟ್ಟು 1237 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.


2ಸ್ಥಾನ ಆರು ಮಂದಿ ಕಣದಲ್ಲಿ:
ನಿಡ್ಪಳ್ಳಿ ಗ್ರಾ.ಪಂ.ನ ನಿಡ್ಪಳ್ಳಿ ವಾರ್ಡ್ ೨ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎಂ.ಚಂದ್ರಶೇಖರ ಪ್ರಭು ಗೋಳಿತ್ತಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಎನ್. ಸತೀಶ್ ಶೆಟ್ಟಿ ಬಾಕಿತ್ತಿಮಾರ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳಂಬೆತ್ತಿಮಾರ್ ಕಣದಲ್ಲಿದ್ದಾರೆ.
ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್-೨ರ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಗದೀಶ ಭಂಡಾರಿ ಗೆಣಸಿನಕುಮೇರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜಿ.ಪುರುಷೋತ್ತಮ ಪ್ರಭು ಅಬ್ಬುಗದ್ದೆ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಕಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here