ಪುತ್ತೂರು: ಪುತ್ತೂರು ತಾಲೂಕಿನ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿ ಕನ್ನಡವನ್ನು ಪ್ರಥಮ ಭಾಷೆ, ದ್ವಿತೀಯ ಭಾಷೆ,ತೃತೀಯ ಭಾಷೆ ಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡದಲ್ಲಿ ಶೇ.100 ಅಂಕವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭೆ ಎಂಬ ನಾಮಂಕಿತದಿಂದ ಗೌರವಿಸಿ ಅಭಿನಂದಿಸುವ ಕಾರ್ಯಕ್ರಮವು ಜು.29 ಶನಿವಾರ ಮಧ್ಯಾಹ್ನ 2:30 ಕ್ಕೆ ಪುತ್ತೂರು ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದಾರೆ. ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ವಿದ್ಯಾರ್ಥಿಗಳಿಗೆ ಅಭಿನಂದಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಗ್ರಾಮ ಸಾಹಿತ್ಯ ಸಂಭ್ರಮದ ಮಹಾ ಪೋಷಕ ಮಿತ್ರಂಪಾಡಿ ಜಯರಾಮ ರೈ , ಕಸಾಪ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ ಸಹೋದರಿ ಶ್ರೀದೇವಿ ಹಾಗೂ ಪುತ್ತೂರಿನ ಖ್ಯಾತ ವಕೀಲರಾಗಿದ್ದ ದಿ.ಸದಾಶಿವರಾಯರ ಪುತ್ರ ಎಂ ಶಾಂತರಾಮ್ ರಾವ್ ಅವರು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ‘ಕೆನ್ನೆಡಿಗಳು, ಒಂದು ಕಥಾನಕ’ ಎಂಬ ಕೃತಿಯನ್ನು ಹಿರಿಯ ಸಾಹಿತಿಗಳಾದ ಡಾ.ತಾಳ್ತಜೆ ವಸಂತ ಕುಮಾರ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಐ.ಎ.ಎಸ್, ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ವಿವೇಕಾನಂದ ಐ.ಎ.ಎಸ್ ಕೇಂದ್ರ- ಯಶಸ್ ಇದರ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀ ದರ್ಶನ್ ಗರ್ತಿಕೆರೆಯರು ನಡೆಸಲಿದ್ದಾರೆ.
ಪುತ್ತೂರು ತಾಲೂಕಿನ ಒಟ್ಟು 31 ಶಾಲೆಯ ಸುಮಾರು 174 ವಿದ್ಯಾರ್ಥಿಗಳು ಈ ಕನ್ನಡ ಪ್ರತಿಭೆ ಪ್ರಶಸ್ತಿಗೆ ಭಾಜನರಾಗಲಿದ್ದಾರೆ ಎಂದು ಪುತ್ತೂರು ಕ.ಸಾ.ಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.