ಕುಂಬ್ರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವರ್ತಕರ ಸಂಘದಿಂದ ಮೆಸ್ಕಾಂ,ಗ್ರಾಪಂಗೆ ಮನವಿ

0

ಪುತ್ತೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಂಬ್ರ ವರ್ತಕರ ಸಂಘದಿಂದ ಒಳಮೊಗ್ರು ಗ್ರಾಮ ಪಂಚಾಯತ್ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಜು.24 ರಂದು ಮನವಿಯನ್ನು ನೀಡಲಾಯಿತು. ಕುಂಬ್ರ ಪೇಟೆಯ ರಿಕ್ಷಾ ತಂಗುದಾಣದ ಬಳಿ ಇರುವ ಸೋಲಾರ್ ವಿದ್ಯುತ್ ಲೈಟ್ ಉರಿಯದೇ ಇರುವ ಕಾರಣ ರಾತ್ರಿ ವೇಳೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಸೋಲಾರ್ ಲೈಟ್ ಅನ್ನು ತಕ್ಷಣವೇ ದುರಸ್ತಿ ಮಾಡಿ ಲೈಟ್ ಉರಿಯುವಂತೆ ಮಾಡಬೇಕಾಗಿ ಕುಂಬ್ರ ವರ್ತಕರ ಸಂಘದಿಂದ ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್‌ರವರಿಗೆ ಮನವಿಯನ್ನು ನೀಡಲಾಯಿತು.


ಟೌನ್ ಫೀಡರ್ ಅವಶ್ಯಕತೆ ಇದೆ
ಕುಂಬ್ರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪೇಟೆಯಾಗಿರುವುದರಿಂದ ಕುಂಬ್ರ ಪೇಟೆಗೆ ಪ್ರತ್ಯೇಕ ಟೌನ್ ಫೀಡರ್ ಅಳವಡಿಸುವಂತೆ ಕಳೆದ 10 ವರ್ಷಗಳಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದರೂ ಇದುವರೇಗೆ ಯಾವುದೇ ಪ್ರಯೋಜನವಾಗಿಲ್ಲ ಇದೀಗ ಪೇಟೆಯಲ್ಲಿ ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟುಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಪೇಟೆಗೆ ಕೂಡಲೇ ಟೌನ್ ಫೀಡರ್ ಅಳವಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಇದಲ್ಲದೆ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ಲೋ ವೋಲ್ಟೇಜ್ ಸಮಸ್ಯೆ ಇದ್ದು ಇದರಿಂದ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.


ಮೆಸ್ಕಾಂ ಬಿಲ್ ಕೌಂಟರ್‌ಗೆ ಸಿಸಿಟಿವಿ ಅಳವಡಿಸಿ
ಕುಂಬ್ರ ಮೆಸ್ಕಾಂ ಕಛೇರಿಯಲ್ಲಿರುವ ಬಿಲ್ ಪಾವತಿ ಕೇಂದ್ರದ ಬಳಿ ಸಿಸಿಟಿವಿ ಅಳವಡಿಸಬೇಕು, ಪ್ರತಿದಿನ ಲಕ್ಷಗಟ್ಟಲೆ ಬಿಲ್ ಪಾವತಿಯಾಗುತ್ತಿದ್ದು ಎಲ್ಲಾದರೂ ಗ್ರಾಹಕರ ಹಣ ಕಳೆದುಹೋದರೆ ಅದನ್ನು ಪತ್ತೆ ಹಚ್ಚಲು ಕಷ್ಟವಾಗುತ್ತದೆ. ಇದಲ್ಲದೆ ಕೆಲಸಗಾರರ ಹಣಕಾಸಿನ ಭದ್ರತೆಯ ದೃಷ್ಟಿಯಿಂದಲೂ ಸಿಸಿಟಿವಿ ಅಳವಡಿಸಬೇಕು ಎಂದು ವರ್ತಕರ ಸಂಘದಿಂದ ಮೆಸ್ಕಾಂಗೆ ಅಧಿಕಾರಿಗಳಿಗೆ ಮನವಿ ನೀಡಲಾಯಿತು.


ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಚರಿತ್ ಕುಮಾರ್, ಉದಯ ಆಚಾರ್ಯ ಕೃಷ್ಣನಗರ, ಸೂರಜ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here