ಪಡುಬೆಟ್ಟು: ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ, ಜಾನಕಿ ಅಮ್ಮ ಪ್ರತಿಷ್ಠಾನದ ನಾಟ್ಯ ತರಬೇತಿ ಕೇಂದ್ರ ಉದ್ಘಾಟನೆ, ಸನ್ಮಾನ

0

ನೆಲ್ಯಾಡಿ: ಕೀರ್ತಿಶೇಷ ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಅವರ ಸ್ಮರಣಾರ್ಥ ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿ ನಾಟ್ಯ ತರಬೇತಿ ಕೇಂದ್ರ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ ನೆಲ್ಯಾಡಿ ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.


ನೆಲ್ಯಾಡಿಯ ಉದ್ಯಮಿ ಸುಬ್ರಹ್ಮಣ್ಯ ಆಚಾರ್ಯರವರು ಉದ್ಘಾಟಿಸಿ ಮಾತನಾಡಿ, 40 ವರ್ಷಗಳ ಹಿಂದೆ ಪಡುಬೆಟ್ಟುವಿನಲ್ಲಿ ದಿ.ಗೋಪಾಲಕೃಷ್ಣ ಶಗ್ರಿತ್ತಾಯರವರು ಆರಂಭಿಸಿದ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿ ಉಚ್ಚಾಯ ಸ್ಥಿತಿಯಲ್ಲಿತ್ತು. ಮಕ್ಕಳ ಯಕ್ಷಗಾನ ತಂಡ ರಾಜ್ಯಮಟ್ಟದಲ್ಲಿ ಹೆಸರನ್ನು ಪಡೆದಿತ್ತು. ಇದೀಗ ಗೋಪಾಲಕೃಷ್ಣ ಶಗ್ರಿತ್ತಾಯರ ಸ್ಮರಣಾರ್ಥ ಮಕ್ಕಳಿಗೆ ನಾಟ್ಯ ತರಬೇತಿ ಆರಂಭಿಸಿ ಕಳೆದ ವೈಭವವನ್ನು ಮರಳಿ ಸ್ಥಾಪಿಸುವ ಕೆಲಸವನ್ನು ಪ್ರತಿಷ್ಠಾನದ ವತಿಯಿಂದ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವಾಧ್ಯಕ್ಷ ಗುಡ್ಡಪ್ಪ ಗೌಡರವರು ಮಾತನಾಡಿ, ಈ ತರಬೇತಿ ಕೇಂದ್ರದ ಮೂಲಕ ಮತ್ತೊಮ್ಮೆ ಯಕ್ಷಗಾನದ ನಾದ ಮತ್ತು ನೀನಾದ ಎಲ್ಲರ ಮನೆ ಮತ್ತು ಮನಗಳಲ್ಲಿ ಜಾಗೃತವಾಗಲಿ ಎಂದು ಹೇಳಿದರು. ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆರವರು ಮಕ್ಕಳ ಮೇಳದ ಹಿಂದಿನ ಸವಿ ನೆನಪುಗಳನ್ನು ಮೆಲುಕು ಹಾಕಿದರು. ನಾಟ್ಯ ತರಬೇತಿ ಕೇಂದ್ರದ ನಾಟ್ಯ ಗುರು ಯೋಗೀಶ ಶರ್ಮ ಅಳದಂಗಡಿರವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರಗತಿಪರ ಕೃಷಿಕ ರಮೇಶ ಗೌಡ ನಾಲ್ಗುತ್ತು, ಶಾಲಾ ಮುಖ್ಯಗುರು ಜೆಸ್ಸಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಬೀದಿಮಜಲು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ಶಗ್ರಿತ್ತಾಯರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಕಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಶೆಟ್ಟಿ ಹೊಸಮನೆ ವಂದಿಸಿದರು. ನಂತರ ಯಕ್ಷಗಾನದ ಹಿಮ್ಮೇಳದೊಂದಿಗೆ ನಾಟ್ಯ ಗುರು ಯೋಗೀಶ ಶರ್ಮರವರು ಹಾಡುಗಾರಿಕೆಯೊಂದಿಗೆ ತರಬೇತಿಯನ್ನು ಪ್ರಾರಂಭಿಸಿದರು. 60 ಮಕ್ಕಳಿಗೆ ಯಕ್ಷಗಾನದ ಪ್ರಥಮ ಹೆಜ್ಜೆಗಳನ್ನು ಕಲಿಸಿ ತರಬೇತಿ ನೀಡಲಾಯಿತು.

LEAVE A REPLY

Please enter your comment!
Please enter your name here