ಕೆಸರುಗದ್ದೆ ಕ್ರೀಡೆಯ ಮೂಲಕ ಪರಾಂಪರಾಗತ ಸಂಸ್ಕೃತಿ ಉಳಿಯಲು ಸಾಧ್ಯ-ಭಾಗೀರಥಿ ಮುರುಳ್ಯ
ಸವಣೂರು : ಕೃಷಿಗೂ ತುಳುನಾಡ ಸಂಸ್ಕೃತಿಗೂ ಅವಿನಾಭವ ನಂಟು.ಈ ಹಿಂದೆ ಭತ್ತದ ಗದ್ದೆ ನಾಟಿಯ ಸಮಯದಲ್ಲಿ ಒಂದಷ್ಟು ವಿಚಾರ ವಿನಿಮಯ,ಸಂಸೃತಿಯ ಅನಾವರಣವಾಗುತ್ತಿತ್ತು.ಪ್ರಸ್ತುತ ಆಧುನಿಕ ಕಾಲದಲ್ಲಿ ಇಂತಹ ಪರಂಪರೆ ನಶಿಸಿ ಹೋಗಬಾರದೆಂಬ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಮಾಡುವ ಕಾರ್ಯ ಶ್ಲಾಘನೀಯ.ಕೆಸರುಗದ್ದೆ ಕ್ರೀಡೆಯ ಮೂಲಕ ಪರಾಂಪರಾಗತ ಸಂಸ್ಜೃತಿ ಉಳಿಯಲು ಸಾಧ್ಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಜು.23ರಂದು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ಸವಣೂರು ಬಸದಿ ವಠಾರದ ನಿರ್ಮಲ್ ಕುಮಾರ್ ಜೈನ್ ಅವರ ಗದ್ದೆಯಲ್ಲಿ ನಡೆದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮಕವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ನೋಟರಿ ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ,ಆಟಿ ತಿಂಗಳೆಂದರೆ ರೈತರಿಗೆ ವಿರಾಮದ ತಿಂಗಳು,ಹಿರಿಯರೂ ಕೂಡ ಈ ತಿಂಗಳಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಬಸದಿಯ ಪುಣ್ಯ ಜಾಗದ ವಠಾರದಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಒಳ್ಳೆಯ ವಿಚಾರ ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಮಾತನಾಡಿ,ಭಾರತ ಕೃಷಿ ಪ್ರಧಾನ ದೇಶವೆಂಬ ಹೆಸರು ಪಡೆದಿದೆ.ಆದರೆ ವೇಗದ ಯುಗದಲ್ಲಿ ಗದ್ದೆಗಳು ಮಾಯವಾಗಿ ವಾಣಿಜ್ಯ ಬೆಳೆಗಳು ತಲೆ ಎತ್ತಿವೆ. ವಿಜ್ಞಾನ ಎಷ್ಟೇ ಮುಂದುವರೆದರೂ ನಮ್ಮ ಹಿರಿಯರೂ ಮಾಡಿರುವ ಕಾರ್ಯ ವಿಜ್ಞಾನದಲ್ಲೂ ಮುಂದಿದೆ.ಹಿರಿಯರು ನಡೆಸುತ್ತಿದ್ದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಯುವಕ ಮಂಡಲದ ಕಾರ್ಯ ಅಭಿನಂದನೀಯ ಎಂದರು.
ಪುದುಬೆಟ್ಟು ಜಿನ ಬಸದಿಯ ಆಡಳಿತ ಮೊಕ್ತೇಸರ ಬಿ.ಶತ್ರುಂಜಯ ಆರಿಗ,ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಶುಭಹಾರೈಸಿದರು.
ಸವಣೂರು ಪ್ರಾ.ಕೃ.ಸ.ಸಂಘದಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ,ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ,ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಜನಜಾಗೃತಿ ವೇದಿಕೆಯ ಕಡಬ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಕೆ.ಸವಣೂರು ,ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ,ಗ್ರಾ.ಪಂ.ಸದಸ್ಯರಾದ ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ ,ಮಾಜಿ ಸದಸ್ಯ ಸತೀಶ್ ಬಲ್ಯಾಯ,ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀರಕ್ಷಾ ಸುಣ್ಣಾಜೆ ಪ್ರಾರ್ಥಿಸಿದರು.ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ. ಸ್ವಾಗತಿಸಿ, ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ವಂದಿಸಿದರು.ಮಾಜಿ ಕಾರ್ಯದರ್ಶಿ ರಾಜೇಶ್ ಇಡ್ಯಾಡಿ ನಿರೂಪಿಸಿದರು.
ಸಾಂಪ್ರಾದಾಯಿಕ ಮೆರುಗು ,ವಿವಿಧ ಕ್ರೀಡೆ
ಕೆಸರ್ಡೊಂಜಿ ದಿನ ಕಾರ್ಯಕ್ರಮದಲ್ಲಿ ಕಂಬಳದ ಕೋಣೆಗಳನ್ನು ಓಡಿಸುವ ಮೂಲಕ ಸಾಂಪ್ರದಾಯಿಕ ಮೆರುಗು ನೀಡಲಾಯಿತು.ಅಲ್ಲದೆ ಅತಿಥಿಗಳಿಗೆ ತೆಂಗಿನ ಗರಿಗಳಿಂದ ಮಾಡಿದ ಹೂವಿನ ಗುಚ್ಚ ನೀಡಲಾಯಿತು.
ಕೆಸರುಗದ್ದೆಯಲ್ಲಿ ವಾಲಿಬಾಲ್,ತ್ರೋಬಾಲ್ (ಮಹಿಳೆಯರಿಗೆ),ಅಪ್ಪಂಗಾಯಿ,ಕೆರುಗದ್ದೆ ಓಟ,ಅಡಿಕೆ ಹಾಳೆಯ ಜಾರುಬಂಡಿ,ಮಡಕೆ ಒಡೆಯುವುದು,ಹಗ್ಗಜಗ್ಗಾಟ,ಹ್ಯಾಂಡ್ ಬಾಲ್,ಹಿಮ್ಮುಖ ಓಟ,ಲಿಂಬೆ ಚಮಚ ಓಟ ಸೇರಿದಂತೆ ಮಕ್ಕಳಿಗೆ ಇನ್ನಿತರ ಆಟಗಳು ನಡೆಯಿತು