ಇಚ್ಲಂಪಾಡಿ: ಯುವರಾಜ ಬಳ್ಳಾಲ್ ನಿಧನ

0

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿಗುತ್ತು ನಿವಾಸಿ, ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಯುವರಾಜ ಬಳ್ಳಾಲ್(93ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜು.23ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.


ಕೆಲ ದಿನದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಯುವರಾಜ ಬಳ್ಳಾಲ್‌ರವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಹಿಂತಿರುಗಿದ್ದರು. ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ನಿಧನರಾದರು. ಯುವರಾಜ್ ಬಳ್ಳಾಲ್‌ರವರು ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 32 ವರ್ಷ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಶ್ರಮಿಸಿದ್ದರು. ಇಚ್ಲಂಪಾಡಿ ಬೀಡುವಿನ ಪೂರ್ವಕಾಲದ ಹೆಗ್ಗಡೆಯವರೊಂದಿಗೆ ಒಡನಾಟ ಹೊಂದಿದ್ದು ಅವರ ಅನಾರೋಗ್ಯದ ಸಂದರ್ಭದಲ್ಲಿ ಬೀಡುವಿನಿಂದ ಇತರರ ಕೈವಶವಾಗುವ ಭೂಮಿಗಳನ್ನು ಕ್ಷೇತ್ರಕ್ಕೆ ಉಳಿಸಿಕೊಳ್ಳುವಲ್ಲಿ ಶ್ರಮಿಸಿದ್ದರು. ಬೀಡುವಿನ ಪೂರ್ವಕಾಲದ ಹೆಗ್ಗಡೆಯವರ ನಿಧನದ ನಂತರ ದೇವಸ್ಥಾನದ ಪೂಜೆಯನ್ನು ಸ್ವಂತ ವೆಚ್ಚದಿಂದ ನಡೆಸಿಕೊಂಡು ಬಂದಿದ್ದರು. ಅಲ್ಲದೇ ನಿಂತು ಹೋಗಿದ್ದ ಜಾತ್ರೆಯನ್ನು ಊರವರ ಸಹಕಾರದೊಂದಿಗೆ ಪುನರಾರಂಭಿಸಲು ಕಾರಣಕರ್ತರಾಗಿದ್ದರು. ಇವರ ಈ ಸೇವೆ ಪರಿಗಣಿಸಿ 2022ರಲ್ಲಿ ನಡೆದ ಇಚ್ಲಂಪಾಡಿ ಬೀಡು ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಪ್ರತಿಷ್ಟಾ ಬ್ರಹ್ಮಕಲಶದ ಸಂದರ್ಭದಲ್ಲಿ ‘ ಶ್ರೀ ಉದ್ಯಪ್ಪ ಅರಸು ಪ್ರಶಸ್ತಿ ಪತ್ರ’ ನೀಡಿ ಗೌರವಿಸಲಾಗಿತ್ತು.


ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರಾಗಿ, ಪಂಚಾಯತ್ ಅಧ್ಯಕ್ಷರಾಗಿ, ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷರಾಗಿ, ಇಚ್ಲಂಪಾಡಿ ನೇರ್ಲ ಸರಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಇಚ್ಲಂಪಾಡಿ ಶ್ರೀ ಅನಂತನಾಥ ಸ್ವಾಮಿ ಬಸದಿ ಆಡಳಿತ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬೀಡುಬೈಲು ಅಂಗನವಾಡಿ ಕೇಂದ್ರದ ಸ್ಥಾಪಕರಾಗಿದ್ದರು. ಮೃತರು ಪುತ್ರರಾದ ಸುರೇಂದ್ರ, ವೀರೇಂದ್ರ, ಪಾರ್ಶ್ವನಾಥ ಹಾಗೂ ೬ ಮಂದಿ ಮೊಮ್ಮಕ್ಕಳು, ಇಬ್ಬರು ಮರಿಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ವಿವಿಧ ಸಂಘಟನೆಗಳ ಹಲವಾರು ಮುಖಂಡರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here