ಪುತ್ತೂರು: ಕನ್ನಡದ ಪ್ರಸಿದ್ಧ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರ ಸಹೋದರಿ ಶ್ರೀದೇವಿ ಹಾಗೂ ಪುತ್ತೂರಿನ ಖ್ಯಾತ ವಕೀಲರಾಗಿದ್ದ ದಿ. ಸದಾಶಿವರಾಯರ 4ನೇಯ ಪುತ್ರ ಎಂ. ಶಾಂತರಾಮ್ ರಾವ್ ಅವರು ಆಂಗ್ಲ ಭಾಷೆಯಲ್ಲಿ ಅಮೇರಿಕಾದ ಹೆಸರಾಂತ ಲೇಖಕರಾಗಿರುವ ಪೀಟರ್ ಕೊಲ್ಲಿಯರ್ ಹಾಗೂ ಡೇವಿಡ್ ಹೊರೋವಿಟ್ಸ್ ಇವರಿಬ್ಬರು ಜಂಟಿಯಾಗಿ ರಚಿಸಿದ ‘ದಿ ಕೆನ್ನೆಡಿಸ್ ಏನ್ ಅಮೇರಿಕನ್ ಡ್ರಾಮಾ’ ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ ‘ಕೆನ್ನೆಡಿಗಳು, ಒಂದು ಕಥಾನಕ’ ಎಂಬ ಕೃತಿ ಲೋಕಾರ್ಪಣೆಯು ಜುಲೈ 29 ಶನಿವಾರ ಮಧ್ಯಾಹ್ನ 2:30 ಕ್ಕೆ ಪುತ್ತೂರು ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ ಅವರು ಕೃತಿ ಲೊಕಾರ್ಪಣೆಗೊಳಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಸಹಾಯಕ ಆಯುಕ್ತ ಗಿರೀಶ್ ನಂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಮಿತ್ರಂಪಾಡಿ ಜಯರಾಮ ರೈ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ಭಾಗವಹಿಸಲಿದ್ದಾರೆ. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕೃತಿಯ ಕುರಿತು
ಅಮೇರಿಕಾ ದೇಶದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿಯೇ ಚುನಾಯಿತ ಹಾಗೂ ಪ್ರಥಮ ಕೆಥೋಲಿಕ್ ಪಂಗಡದ ಅಧ್ಯಕ್ಷನೆಂಬ ಹೆಗ್ಗಳಿಕೆ ಹಾಗೂ ಪ್ರಸಿದ್ಧಿ ಪಡೆದ ಮಹಾನ್ ನಾಯಕ ಜಾನ್.ಎಫ್ ಕೆನ್ನಡಿ. ಇವರ ಕುಟುಂಬ ಅಮೇರಿಕಾದಲ್ಲಿ ನೆಲೆಯಾಗಿ ಯಶಸ್ಸನ್ನು ಕಂಡ ರೋಚಕ ಕಥೆ ಈ ಕೃತಿಯಲ್ಲಿ ಸೊಗಸಾಗಿ ನಿರೂಪಣೆ ಗೊಂಡಿದೆ. ಅವರ ಕುಟುಂಬ ರಾಜಕೀಯವಾಗಿ ಹಾಗೂ ವ್ಯಾವಹಾರಿಕವಾಗಿ ಯಶಸ್ವಿಯಾದ ವಿವರ, ಅವರ ರಾಜಕೀಯದಲ್ಲಿನ ಏಳು ಬೀಳುಗಳು, ಕುಟುಂಬದಲ್ಲಿ ನಡೆದ ಅಚ್ಚರಿಯ ಘಟನೆಗಳು, ಅವರ ಯಶಸ್ಸು, ಅನುಭವಿಸಿದ ನೋವು, ನಲಿವು ಅವರೊಳಗಿನ ಸ್ಪರ್ಧೆ, ಪ್ರಣಯ ಪ್ರಸಂಗಗಳು, ಭೂಗತ ಜಗತ್ತಿನೊಂದಿಗೆ ಸಂಬಂಧಗಳು, ಮಾದಕ ವ್ಯಸನಕ್ಕೆ ದಾಸರಾದ ವಿಚಾರ, ಷೇರು ವ್ಯವಹಾರದಲ್ಲಿ ಜೋ. ಕೆನ್ನೆಡಿಯು (ಜಾನ್. ಎಫ್. ಕೆನ್ನಡಿಯ ತಂದೆ )ನಡೆಸಿದ ಅವ್ಯವಹಾರ ಅಲ್ಲದೆ ಅವರ ಪ್ರತಿಷ್ಠೆಗಾಗಿ ಬುದ್ದಿಮಾಂದ್ಯ ಮಗುವನ್ನು ಪ್ರಪಂಚದಿಂದ ದೂರವಿರಿಸಿದ ಮನಕಲುಕುವ ವಿಚಾರ, ಅಲ್ಲದೇ ಮುಂದಿನ ಜನಾಂಗವು ಪೇಚಿಗೆ ಸಿಲುಕಿದ ಘಟನೆಗಳ ವಿಸ್ತೃತ ವಿವರಣೆಯೇ ಈ ‘ಕೆನ್ನಡಿಗಳು ಒಂದು ಕಥಾನಕ’ ಕೃತಿಯ ಕಥಾ ವಸ್ತುವಾಗಿದೆ.
ಈ ಕೃತಿಯನ್ನು ಓದುತ್ತ ಹೋದಂತೆ ರೋಚಕತೆ ಹಾಗೂ ಓದುವ ಹಂಬಲ ಹೆಚ್ಚುತ್ತ ಹೋಗುತ್ತದೆ ಅಲ್ಲದೆ ಕೆನ್ನಡಿ ಕುಟುಂಬವು ರಾಜಕೀಯವಾಗಿ ಬೆಳೆದು ಬಂದ ಪರಿ ಹೇಗೆ? ಇತ್ಯಾದಿಗಳು ಇದರಲ್ಲಿ ಸುಂದರವಾಗಿ ಬಿಂಬಿತವಾಗಿದೆ.
ಸುಮಾರು 771 ಪುಟ ಇರುವ ಈ ಕೃತಿಗೆ ಮುನ್ನುಡಿಯನ್ನು ಕ.ಸಾ.ಪ – ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಬರೆದಿದ್ದಾರೆ.