21 ಗ್ರಾ.ಪಂ ಪೈಕಿ ಪೂರ್ಣಕಾಲಿಕ ಪಿಡಿಓ ಇರುವುದು ಬರೀ 6 ಗ್ರಾ.ಪಂಗಳಲ್ಲಿ ಮಾತ್ರ
ಯೂಸುಫ್ ರೆಂಜಲಾಡಿ
ಕಡಬ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್‌ಗಳು ಅಭಿವೃದ್ಧಿ ಅಧಿಕಾರಿಗಳ(ಪಿಡಿಓ) ಅಭಾವ ಎದುರಿಸುತ್ತಿದೆ. ಐದು ವರ್ಷಗಳ ಹಿಂದೆ ಕಡಬ ತಾಲೂಕು ಆಗಿ ಘೋಷಣೆಯಾಗಿದ್ದು ಅಲ್ಲಿ ವಿವಿಧ ಇಲಾಖೆಗಳು ಖಾಲಿ ಇರುವ ಬಗ್ಗೆ ಪ್ರತಿಭಟನೆ ಕೂಡಾ ನಡೆದಿದೆ. ಈತನ್ಮಧ್ಯೆ ಗ್ರಾಮ ಪಂಚಾಯತ್‌ಗಳಲ್ಲಿ ಪಿಡಿಓ ಇಲ್ಲದೇ ಇರುವುದು ಕೂಡಾ ಸಮಸ್ಯೆಯಾಗಿ ಪರಿಣಮಿಸಿದೆ.
ಅನೇಕ ಪಂಚಾಯತ್‌ಗಳಲ್ಲಿ ಪ್ರಭಾರ ರೀತಿಯಲ್ಲಿ ಪಿಡಿಓಗಳು ಕಾರ್ಯನಿರ್ವಹಿಸುತ್ತಿದ್ದರೆ ಇನ್ನೂ ಅನೇಕ ಪಂಚಾಯತ್‌ಗಳಲ್ಲಿ ಪಿಡಿಓಗಳೇ ಇಲ್ಲ. ಇದು ಗ್ರಾಮದ ಸಮಗ್ರ ಅಭಿವೃದ್ಧಿ ಮತ್ತು ಸಕಾಲಿಕ ಕಾರ್ಯಚಟುವಟಿಕೆಗಳಿಗೆ ತೊಡಕಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕಡಬ ತಾಲೂಕಿನಲ್ಲಿ ಒಟ್ಟು 21 ಗ್ರಾಮ ಪಂಚಾಯತ್‌ಗಳಿದ್ದು 42 ಗ್ರಾಮಗಳಿವೆ. ಇದೀಗ ಆಲಂಕಾರು ಗ್ರಾ.ಪಂಗೆ ವರ್ಗಾವಣೆಯಿಂದ ಭರ್ತಿ ಆಗಿದ್ದು ಸವಣೂರು, ಎಡಮಂಗಲ, ಪೆರಾಬೆ, ಶಿರಾಡಿ, ಗೋಳಿತೊಟ್ಟು, ಸುಬ್ರಹ್ಮಣ್ಯ ಮೊದಲಾದ ಗ್ರಾ.ಪಂಗಳಲ್ಲಿ ಪಿಡಿಓಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಳಂದೂರು ಹಾಗೂ ಕಡ್ಯ ಕೊಣಾಜೆ ಗ್ರಾ.ಪಂನ ಪಿಡಿಓ ಜಿ.ಪಂಗೆ ನಿಯೋಜನೆಗೊಂಡಿದ್ದು ಕಾಣಿಯೂರು ಹಾಗೂ ಬಲ್ಯ ಗ್ರಾ.ಪಂ ಪಿಡಿಓ ತಾ.ಪಂಗೆ ನಿಯೋಜನೆಗೊಂಡಿದ್ದಾರೆ. ಕೌಕ್ರಾಡಿ ಗ್ರಾ.ಪಂ ಪಿಡಿಓ ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಐತ್ತೂರು ಹಾಗೂ ನೆಲ್ಯಾಡಿ ಗ್ರಾ.ಪಂ ಪಿಡಿಓ ವರ್ಗಾವಣೆಗೊಂಡಿದ್ದಾರೆ. ರಾಮಕುಂಜ ಮತ್ತು ಮರ್ದಾಳ ಗ್ರಾ.ಪಂ ಪಿಡಿಓ ನಿವೃತ್ತಿ ಹಿನ್ನೆಲೆಯಲ್ಲಿ ಅಲ್ಲಿ ಖಾಲಿ ಇದೆ. ಬಿಳಿನೆಲೆ, ಕೊಯಿಲ, ಕೊಂಬಾರು, ನೂಜಿಬಾಳ್ತಿಲ, ಗ್ರಾ.ಪಂಗಳಲ್ಲಿ ಪಿಡಿಓ ಇಲ್ಲದೇ ಖಾಲಿ ಇದೆ.
ಒಟ್ಟಿನಲ್ಲಿ ಕಡಬ ತಾಲೂಕಿನ ಬಹುತೇಕ ಗ್ರಾ.ಪಂಗಳಲ್ಲಿ ಪೂರ್ಣಕಾಲಿಕ ಪಿಡಿಓ ಕೊರತೆ ಉಂಟಾಗಿದ್ದು ಸಂಬಂಧಪಟ್ಟವರು ಇದನ್ನು ಗಂಭೀರವಾಗಿ ಪರಿಗಣಿಸಿ ಪಿಡಿಓಗಳನ್ನು ನೇಮಕ ಮಾಡಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.
ಪೂರ್ಣಕಾಲಿಕ ಪಿಡಿಓ ನೇಮಕಕ್ಕೆ ಆಗ್ರಹ
ಅನೇಕ ಗ್ರಾ.ಪಂಗಳಲ್ಲಿ ಪಿಡಿಓ ಇಲ್ಲದಿದ್ದರೆ, ಇನ್ನೂ ಅನೇಕ ಗ್ರಾ.ಪಂಗಳಲ್ಲಿ ಪ್ರಭಾರ ನೆಲೆಯಲ್ಲಿ ಪಿಡಿಓಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲವು ಪಂಚಾಯತ್‌ಗಳಲ್ಲಿ ಕಾರ್ಯದರ್ಶಿಗಳೇ ಎಲ್ಲವನ್ನೂ ನಿಭಾಯಿಸಬೇಕಾದ ಪರಿಸ್ಥಿತಿ. ಪಿಡಿಓಗಳ ಕೊರತೆಯಿಂದ ಗ್ರಾ.ಪಂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎನ್ನುವ ಆರೋಪಗಳು ಕೇಳಿ ಬಂದಿದ್ದು ಪಿಡಿಓಗಳಿಲ್ಲದ ಗ್ರಾ.ಪಂಗಳಿಗೆ ಪೂರ್ಣಕಾಲಿಕ ಪಿಡಿಓಗಳನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಿಡಿಓ ನೇಮಕಕ್ಕೆ ಪ್ರಯತ್ನ
ಕಡಬ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್‌ಗಳಲ್ಲಿ ಪೂರ್ಣಕಾಲಿಕ ಪಿಡಿಓಗಳ ಕೊರತೆ ಇದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಬರೆಯಲಾಗಿದೆ. ಖಾಲಿ ಇರುವ ಗ್ರಾಮ ಪಂಚಾಯತ್‌ಗಳಿಗೆ ಪಿಡಿಓಗಳ ನೇಮಕಕ್ಕೆ ಪ್ರಯತ್ನಿಸಲಾಗುವುದು.
-ನವೀನ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ