ಉಪ್ಪಿನಂಗಡಿ: ಇಲ್ಲಿನ ಪಾದಾಳ ಎಂಬಲ್ಲಿ ಧರೆಯೊಂದು ಕುಸಿದಿದ್ದು, ಧರೆ ಇನ್ನಷ್ಟು ಕುಸಿದರೆ ಧರೆಯ ಮೇಲ್ಭಾಗದಲ್ಲಿರುವ ನೂಜಿ- ಆರ್ತಿಲ ರಸ್ತೆಯು ಸಂಪೂರ್ಣ ಕುಸಿತಕ್ಕೊಳಗಾಗುವ ಭೀತಿಯಿದ್ದು, ಇನ್ನೊಂದೆಡೆ ಧರೆಯ ಕೆಳಭಾಗದಲ್ಲಿರುವ ಮನೆಯೂ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ.
ಇಲ್ಲಿನ ಪಾದಾಳ ಎಂಬಲ್ಲಿ ಸುರೇಶ್ ಶೆಟ್ಟಿಯವರ ಮನೆ ಬದಿಯ ಧರೆಯು ಮಳೆಗೆ ಅದರೊಳಗಿದ್ದ ದೊಡ್ಡ ದೊಡ್ಡ ಕಲ್ಲುಗಳೊಂದಿಗೆ ಕುಸಿದು ಬಿದ್ದಿದೆ. ಇದರಿಂದಾಗಿ ಸುರೇಶ್ ಶೆಟ್ಟಿ ಅವರ ಪಂಪ್ ಶೆಡ್‌ಗೆ ಸಣ್ಣ ಪ್ರಮಾಣದ ಹಾನಿ ಸಂಭವಿಸಿದೆ. ಈ ಧರೆಯ ಮೇಲ್ಭಾಗದಲ್ಲಿ ನೂಜಿ- ಆರ್ತಿಲ ಸಂಪರ್ಕದ ಕಾಂಕ್ರೀಟ್ ರಸ್ತೆ ಇದ್ದು, ಇದರಂಚಿನ ಹತ್ತಿರದವರೆಗೆ ಈಗ ಧರೆ ಕುಸಿದಿದೆ. ಧರೆಯು ಇನ್ನಷ್ಟು ಕುಸಿದರೆ ಕಾಂಕ್ರೀಟ್ ರಸ್ತೆ ಕೂಡಾ ಇದರೊಂದಿಗೆ ಕುಸಿದು ಬೀಳುವ ಸಂಭವವಿದೆ. ಅಲ್ಲದೇ, ಸುರೇಶ್ ಶೆಟ್ಟಿಯವರ ಮನೆಗೂ ಅಪಾಯ ಸಂಭವಿಸಲಿದೆ. ಅಲ್ಲದೇ, ರಸ್ತೆ ಕುಸಿದು ಹೋದಲ್ಲಿ ಇಲ್ಲಿನ ಸುಮಾರು 10 ಮನೆಗಳಿಗೆ ಸಂಪೂರ್ಣ ಸಂಪರ್ಕ ಕಡಿತಗೊಳ್ಳಲಿದೆ. ಆದ್ದರಿಂದ ಈ ಧರೆ ಕುಸಿಯದಂತೆ ತಡೆಗೋಡೆ ನಿರ್ಮಿಸಬೇಕು ಎಂಬ ಆಗ್ರಹ ಸ್ಥಳೀಯರಿಂದ ಕೇಳಿ ಬಂದಿದೆ.