ನೆಲ್ಯಾಡಿ: ಪಿಕಪ್ ವಾಹನದಲ್ಲಿ ತುಂಬಿಸಿದ್ದ 5 ಬಂಡಲ್ ವಿದ್ಯುತ್ ತಂತಿಗಳ ಪೈಕಿ 3 ಬಂಡಲ್ ವಿದ್ಯುತ್ ತಂತಿಗಳನ್ನು ಕಳವುಗೈದಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.25ರಂದು ರಾತ್ರಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಸಂಪನ್ನಕೇರಿ ನಿವಾಸಿ ರಾಘವೇಂದ್ರ ನಾಯ್ಕ್ ಎಂಬವರು ಜು.25ರಂದು ರಾತ್ರಿ ವೇಳೆ ನೆಲ್ಯಾಡಿಯಲ್ಲಿರುವ ಈಗಲ್ ಇಲೆಕ್ಟ್ರೀಕಲ್ ಸಂಸ್ಥೆಗೆ ಸೇರಿದ ಗೋದಾಮಿನಿಂದ 5 ಬಂಡಾಲ್ ವಿದ್ಯುತ್ ತಂತಿಗಳನ್ನು ಪಡೆದುಕೊಂಡು ಅವರ ಬೊಲೆರೋ ಪಿಕಪ್ ವಾಹನ (ಕೆಎ 47 4434)ದಲ್ಲಿ ತುಂಬಿಸಿಕೊಂಡು ಹೋಗಿದ್ದು ರಾತ್ರಿ 10.30ರ ವೇಳೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿರುವ ಅವರ ವಾಸದ ಕೊಠಡಿಯ ಎದುರು ರಾ.ಹೆದ್ದಾರಿಯ ಬದಿ ಪಿಕಪ್ ವಾಹನವನ್ನು ನಿಲ್ಲಿಸಿ ಅವರು ಅವರ ವಾಸದ ಕೊಠಡಿಗೆ ವಿಶ್ರಾಂತಿಗೆ ಹೋಗಿದ್ದರು. ಜು.26ರಂದು ಬೆಳಗ್ಗೆ 6 ಗಂಟೆಗೆ ಎದ್ದು ವಾಹನದ ಬಳಿ ಬಂದು ಪರಿಶೀಲಿಸಿದಾಗ ವಾಹನದಲ್ಲಿ ತುಂಬಿಸಿಟ್ಟಿದ್ದ 5 ಬಂಡಲ್ ವಿದ್ಯುತ್ ತಂತಿಗಳ ಪೈಕಿ 3 ಬಂಡಲ್ ವಿದ್ಯುತ್ ತಂತಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ 3 ಬಂಡಲ್ ವಿದ್ಯುತ್ ತಂತಿಗಳು ಅಂದಾಜು 350 ಕೆ.ಜಿ ತೂಕವಿದ್ದು ಅದರ ಅಂದಾಜು ಮೌಲ್ಯ 80 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ರಾಘವೇಂದ್ರ ನಾಯ್ಕ್ರವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.