ವಿಟ್ಲ: ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಪತ್ನಿಗೆ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ.
ಬಂಟ್ವಾಳ ಡಿ.ವೈ.ಎಸ್. ಪಿ.ಕಚೇರಿಯ ಸಿಬ್ಬಂದಿಯಾಗಿದ್ದು ಪ್ರಸ್ತುತ ಎನ್. ಐ.ಎ.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ್‌ರವರು ಘಟನೆ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕುಮಾರ್ ಅವರು ಎನ್.ಐ.ಎ.ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅ ಬಳಿಕ ಪ್ರತಿದಿನ ಬಿಸಿರೋಡಿನ ಪೋಲಿಸ್ ವಸತಿಗೃಹಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಪರೂಪಕ್ಕೊಮ್ಮೆ ಪೊಲೀಸ್ ವಸತಿಗೃಹದಲ್ಲಿ ತಂಗುತ್ತಿದ್ದರು.
ಜು. 27 ರಂದು ನಾನು ಪತ್ನಿ ಹಾಗೂ ಪತ್ನಿಯ ತಂಗಿ ಜೊತೆ ರಾತ್ರಿ ವೇಳೆ ಊಟಕ್ಕೆಂದು ಬಿಸಿರೋಡಿನ ಹೋಟೆಲ್ ಒಂದಕ್ಕೆ ನಡೆದುಕೊಂಡು ಹೋಗಿ ಊಟ ಮುಗಿಸಿ ವಾಪಸ್ಸು ಬರುತ್ತಿದ್ದ ವೇಳೆ ಅಲ್ಲಿ ರಾಜೇಶ್ ವೈನ್ ನ ಮುಂಭಾಗದಲ್ಲಿ ನಿಂತುಕೊಂಡಿದ್ದ ಇಬ್ಬರು ಯುವಕರು ನನ್ನ ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದಿದ್ದರು. ನಾನು ಮನೆಯವರನ್ನು ಮನೆಗೆ ಮುಟ್ಟಿಸಿ ಬಳಿಕ ಕೇಸ್ ಒಂದರ ವಿಚಾರಣೆಗಾಗಿ ಎಸ್.ಐ.ಅವರ ಆದೇಶದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬರುತ್ತಿದ್ದಂತೆ ಮನೆಯಂಗಳದಲ್ಲಿ ನಿಂತಿದ್ದ ಇಬ್ಬರು ಆರೋಪಿಗಳು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಬೆದರಿಕೆ ಹಾಕಿದ್ದರು. ತಾನು ಪೊಲೀಸ್ ಎಂದು ಎಷ್ಟೇ ಹೇಳಿದರೂ ಕಿವಿಗೆ ಹಾಕಿಕೊಳ್ಳದ ತಂಡ ಹಲ್ಲೆಗೂ ಮುಂದಾಗಿತ್ತು.
ಈ ವೇಳೆ ಮನೆಯಂಗಳದಲ್ಲಿ ಗಲಾಟೆ ನಡೆಯುತ್ತಿರುವುದನ್ನು ತಿಳಿದು ಪತ್ನಿ ಮನೆಯಿಂದ ಹೊರ ಬಂದಾಗ ಅವರ ವಿಡಿಯೋ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕುಮಾರ್‌ರವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.