ಸಹಕಾರಿ ರತ್ನ ಸವಣೂರು ಸೀತಾರಾಮ ರೈರವರ ನೇತೃತ್ವದಲ್ಲಿ ಪ್ರಶಾಂತ್ ಮಹಲ್‌ನಲ್ಲಿ ಆಟಿಡೊಂಜಿ ದಿನ

0

ಹಿರಿಯರ ಆಹಾರ ಪದ್ಧತಿ ಆರೋಗ್ಯಕ್ಕೆ ಹಿತಕಾರಿ ಮದ್ದಾಗಿತ್ತು-ಆ್ಯಂಕರ್ ನವೀನ್ ಶೆಟ್ಟಿ

ಪುತ್ತೂರು:ಆಟಿ ತಿಂಗಳು ಎಂದರೆ ಮಾಂತ್ರಿಕ ತಿಂಗಳು. ಆಟಿ ತಿಂಗಳಿಗೆ ಅದರದ್ದೇ ಆದ ಪ್ರಾಶಸ್ತ್ಯವಿತ್ತು. ಆಟಿ ತಿಂಗಳಿನಲ್ಲಿ ವಿಜ್ಞಾನವಿತ್ತು. ಆಯುರ್ವೇದ ಸತ್ವವಿತ್ತು. ಇಂದು ನಾವು ಆಚರಿಸುತ್ತಿರುವ ಆಟಿ ಅಂದಿನ ತುಳುನಾಡಿನ ಹಿರಿಯರ ಬದುಕಾಗಿತ್ತು ಜೊತೆಗೆ ಹಿರಿಯರ ಆಹಾರ ಪದ್ಧತಿ ಅದು ಮನುಷ್ಯನ ಆರೋಗ್ಯಕ್ಕೆ ಹಿತಕಾರಿಯಾದಂತಹ ಮದ್ದಾಗಿತ್ತು ಎಂದು ನಮ್ಮ ಟಿ.ವಿ ಚಾನೆಲಿನ ಆ್ಯಂಕರ್ ನವೀನ್ ಶೆಟ್ಟಿ ಎಡ್ಮೆರ್‌ ಹೇಳಿದರು.


ಜು.29 ರಂದು ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಸಭಾಂಗಣದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ್ ರೈ ಸವಣೂರು ಇವರ ಮುಂದಾಳತ್ವದಲ್ಲಿ ಜರಗಿದ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ, ಆಟಿದ ಆಟಗಳು, ವಿವಿಧ ಬಗೆಯ ತಿಂಡಿ ತಿನಸುಗಳು, ಸಭಾ ಕಾರ್ಯಕ್ರಮ ಮುಂತಾದ ವೈವಿಧ್ಯಗಳನ್ನೊಳಗೊಂಡ `ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಅವರು ಆಟಿಯ ಆಚರಣೆಯ ಮಹತ್ವದ ಕುರಿತು ಮಾತನಾಡಿದರು.

ತುಳುನಾಡಿನ ವಿಶೇಷ ಆಚರಣೆಗಳನ್ನು ಮೂಢನಂಬಿಕೆಯ ಹೆಸರಿನಲ್ಲಿ ಒಂದೊಂದಾಗಿ ನಿಲ್ಲಿಸುತ್ತಾ ಬಂದರೆ ಮುಂದೆ ನಮ್ಮ ನೆಲದ ಸಂಸ್ಕೃತಿ, ನಮ್ಮ ತುಳುವ ಸಂಸ್ಕೃತಿ, ತುಳುವರ ನಂಬಿಕೆ ನಾಶವಾಗುತ್ತಾ ಬರುತ್ತದೆ. ಆಟಿಯ ತಿನಿಸುಗಳಲ್ಲಿ ವಿಶೇಷವಾದ ಸತ್ವಯುತವಾದ ಆಹಾರಗಳನ್ನು ಸೇವಿಸುತ್ತೇವೆ. ಆ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸುಖ ಸಂಪತ್ತು ಇರುವವರು ಸಾಧನೆ ಮಾಡಲಾರರು. ಆದರೆ ಜೀವನದಲ್ಲಿ ಬಡತನ, ಹಸಿವನ್ನು ಹೊಂದಿರುವವರು ಸಾಧನೆಯನ್ನು ಮಾಡಲು ಸಾಧ್ಯ ಎಂದ ಅವರು ಆಟಿ ತಿಂಗಳ ಪ್ರತಿ ಹತ್ತು ದಿನಗಳಲ್ಲಿ ಹೊಟ್ಟೆಯಲ್ಲಿನ ಕಲ್ಮಶಗಳನ್ನು ಹೊರ ಹಾಕುವ, ಹೊಟ್ಟೆಯನ್ನು ಸದಾ ಜೀರ್ಣಾವಸ್ಥೆಯಲ್ಲಿಡುವ, ಜೀವಕ್ಕೆ ಸತ್ವ ಕೊಡುವ ಆಹಾರವನ್ನು ಸೇವಿಸುವುದು ಹಿರಿಯರ ರೂಢಿಯಾಗಿತ್ತು ಎಂದು ಅವರು ಹೇಳಿದರು.

ಆಟಿ ಆಹಾರಗಳು ಔಷಧೀಯ ರೂಪದಲ್ಲಿ ಆರೋಗ್ಯ ವೃದ್ಧಿಸುತ್ತದೆ-ನರೇಂದ್ರ ರೈ ದೇರ್ಲ:
ಕನ್ನಡ ಪ್ರಾಧ್ಯಾಪಕ, ಅಂಕಣಕಾರ ನರೇಂದ್ರ ರೈ ದೇರ್ಲರವರು ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿ, ಕೊರೊನಾ ನಂತರದ ದಿನಗಳಲ್ಲಿ ಮನುಷ್ಯನಲ್ಲಿ ತಾಳ್ಮೆ, ಸಹನೆ, ಪ್ರೀತಿಸುವ, ಕೇಳುವತನ ಕಡಿಮೆಯಾಗಿದೆ. ಇವತ್ತು ಮನುಕುಲ ಒಂದಲ್ಲ ಒಂದು ರೀತಿಯಲ್ಲಿ ಕ್ಷೋಭೆಗೆ ಒಳಗಾಗಿದೆ. ನಾವು ಇವತ್ತು ವಿಷ ಮಿಶ್ರಿತವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಇದ್ದೇವೆ. ವಿದೇಶಿಯರು ಏಕರೂಪದ ಆಹಾರ ಪದಾರ್ಥಗಳನ್ನು ಸೇವಿಸಿದರೆ ನಮ್ಮಲ್ಲಿ ವೈವಿಧ್ಯಮಯವಾದ ಆಹಾರವನ್ನು ಸೇವಿಸುತ್ತೇವೆ. ಆದರೆ ಆಟಿಯ ಮಹತ್ವವನ್ನು ಮೆಲುಕು ಹಾಕಿದರೆ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದು ಈ ಆಹಾರಗಳು ಔಷಧೀಯ ರೂಪದಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಎಂದರು.

ಹಿರಿಯರ ವಿಶೇಷ ಆಚರಣೆಯ ಮೆಲುಕು ಹಾಕುವ ಕಾರ್ಯಕ್ರಮ-ಸೀತಾರಾಮ್ ರೈ:
ಅಧ್ಯಕ್ಷತೆ ವಹಿಸಿದ ಸಹಕಾರಿ ರತ್ನ ಸವಣೂರು ಸೀತಾರಾಮ್ ರೈರವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ರೀತಿಯ ಔಷಧೀಯ ಗುಣಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದರೊಂದಿಗೆ ಆಟಿಯ ಕೆಲವು ಆಟಗಳನ್ನು ಆಡುವುದು ಈ ತಿಂಗಳ ವಿಶೇಷ. ಆಟಿ ತಿಂಗಳಿನ ತಿನಸುಗಳು ಆರೋಗ್ಯ ಹಾಗೂ ಹಸಿವಿಗೆ ಪ್ರಾಮುಖ್ಯವೆನಿಸುತ್ತದೆ. ಆಟಿ ಕುರಿತು ಪ್ರಸ್ತುತ ದಿನಗಳಲ್ಲಿ ಪ್ರತಿ ಜಾತಿಯವರು ಆಚರಿಸುತ್ತಾ ಬರುತ್ತಿದ್ದಾರೆ. ನಮ್ಮ ಹಿರಿಯರಿಂದ ನಡೆದುಕೊಂಡು ಬಂದಿರುವ ವಿಶೇಷ ಆಚರಣೆಗಳನ್ನು ಆಚರಿಸುತ್ತಾ ಮೆಲುಕು ಹಾಕುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಹಿರಿಯರ ಆಹಾರ ಪದ್ಧತಿಯನ್ನು ಪ್ರಸ್ತುತ ತಲೆಮಾರಿಗೆ ಪರಿಚಯಿಸಿಕೊಟ್ಟಿರುವುದು ಅರ್ಥಪೂರ್ಣ-ಜೈರಾಜ್ ಭಂಡಾರಿ:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಮಾತನಾಡಿ, ಪುತ್ತೂರಿನ ಪ್ರತಿಷ್ಠಿತ ಹೊಟೇಲ್ ಆಗಿರುವ ಸವಣೂರು ಸೀತಾರಾಮ್ ರೈ ಮಾಲಕತ್ವದ ಈ ಪ್ರಶಾಂತ್ ಮಹಲ್‌ನಲ್ಲಿ ತುಳುನಾಡಿನ ಆಟಿ ಸಂಸ್ಕೃತಿಯ ಕುರಿತು ಕಾರ್ಯಕ್ರಮ ಆಯೋಜಿಸಿ, ಹಿಂದಿನ ಹಿರಿಯರ ಆಹಾರ ಪದ್ಧತಿ, ಆಚಾರ-ವಿಚಾರವನ್ನು ಪ್ರಸ್ತುತ ತಲೆಮಾರಿಗೆ ಪರಿಚಯಿಸಿಕೊಡುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವುದು ಅರ್ಥಪೂರ್ಣ ಜೊತೆಗೆ ಶ್ಲಾಘನೀಯವಾಗಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರಸ್ತುತ ಜನಾಂಗ ಹಿರಿಯರ ಮಾತು ಕೇಳಿಕೊಂಡು ಆರೋಗ್ಯ ಸುಧಾರಿಸುವಲ್ಲಿ ಹೆಜ್ಜೆಯನ್ನಿಡಬೇಕಾಗಿದೆ ಎಂದರು.

ತುಳುವೆರ ಆಟಿ ವಿಶೇಷ ಸಂಚಿಕೆ ಬಿಡುಗಡೆ:
ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಸಂಪಾದಕತ್ವದ ಪೂವರಿ ಮಾಸ ಪತ್ರಿಕೆಯಲ್ಲಿನ ಆಟಿ ತಿಂಗಳ ವಿಶೇಷ ಸಂಚಿಕೆಯಾಗಿರುವ `ತುಳುವೆರ ಆಟಿ’ ಇದನ್ನು ಅಂಕಣಕಾರ ನರೇಂದ್ರ ರೈ ದೇರ್ಲರವರು ಅನಾವರಣಗೊಳಿಸಿದರು. ಪೂವರಿ ಪತ್ರಿಕೆಯ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹವು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಶಾಂತ್ ಮಹಲ್‌ನ ವ್ಯವಸ್ಥಾಪಕರಾದ ಮಧುಸೂದನ್ ಶೆಣೈ, ಹರೀಶ್ ಪೂಂಜ ಹಾಗೂ ಜಯರಾಂ ತಂಡದವರು ಸಂಘಟಿಸಿದರು. ಕು|ಪ್ರಜ್ನಾ ಓಡಿಳ್ನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

49 ಬಗೆಯ ಬಂಜಾರ ಊಟ..
ಆಟಿದ ಆಟಿಲ್‌ನಲ್ಲಿ ಪದೆಂಜಿ ಪೇರ್, ಪತ್ರೋಡೆ, ಬಜಿಲ್, ತೆಲಿ ಬಾಜೆಲ್, ಬಂಜಾರ ಊಟದಲ್ಲಿ ಅಂಬಡೆ, ಮಾವಿನಕಾಯಿ, ಕರಂಡೆ ಕಾಯಿಯ ಉಪ್ಪಿನಕಾಯಿ, ತಿಮರೆ/ಕುಡು/ಪೂಂಬೆ ಚಟ್ನಿ, ತೆಕ್ಜರೆದ ತಲ್ಲಿ, ತಜಂಕ್ ಪೆಲತ್ತರಿ ಸುಕ್ಕ, ಕಣಿಲೆ ಸುಕ್ಕ, ಉಪ್ಪಡ್ ಪಚ್ಚಿಲ್, ತೇಟ್ಲ ಗಸಿ, ಕಾಯ್ತಿನ ಪತ್ರೋಡೆ, ತಜಂಕ್‌ದ ಅಂಬಡೆ, ಮಂಜಲ್ ಇರೆತ ಗಟ್ಟಿ, ಬಾರೆದ ಇರೆತ ಗಟ್ಟಿ, ಪೆಲಕ್ಕಾಯಿದ ಗಟ್ಟಿ, ನೀರ್‌ದೋಸೆ, ಸೇಮೆ ಪೇರ್, ಪೆಲಕಾಯಿದ ಗಾರಿಗೆ, ನುರ್ಗೆ ತಪ್ಪುದ ಉಪ್ಪುಗರಿ, ಗಂಜಿ(ಕಜೆ ಅರಿ), ನುಪ್ಪು, ಕುಡುತ್ತ ಸಾರ್, ಉಪ್ಪುಂಚಿ, ತೌತೆ ಗಸಿ, ಕುಕ್ಕು ಪೆಜಕಾಯಿದ ಪಜ್ಜಿ ಕಜಿಪು, ಸಂಡಿಗೆ, ಪೆಲಕಾಯಿದ ಹಪ್ಪಳ, ಕಾಯ್ತಿನ ಪುಲಿಕೊಟೆ, ಬೆಯಿಪ್ಪಾಯಿನ ಪೆಲತ್ತರಿ, ಪೊತ್ತುದಿನ ಕುಡುಅರಿ, ಮೀನು ಮಾಂಸದ ಖಾದ್ಯಗಳಾದ ಎಟ್ಟಿ ಚಟ್ನಿ, ಕೊಲ್ಲತ್ತಾರು ಚಟ್ನಿ, ಕಡ್ಲೆ ಬಲ್ಯಾರ್ ಸುಕ್ಕ, ಕೋರಿ ಸುಕ್ಕ, ಕೋರಿ ರೊಟ್ಟಿ, ನುಂಗೆಲ್ ಮೀನ್ದ ಕಜಿಪು, ಸಿಹಿ ಖಾದ್ಯಗಳಾದ ಮನ್ನಿ, ಮೆಂತೆ ಗಂಜಿ, ಪದೆಂಜಿ ಸಲಾಯಿ ಪಾಯಸ, ಪೆಲಕ್ಕಾಯಿ+ಕಡ್ಲೆ ಸಲಾಯಿ ಪಾಯಸ, ಅಲೆ, ಸಂಜೆ ಚಾ, ಗೋಳಿಬಜೆ ಹೀಗೆ 49 ಬಗೆಯ ಘಮಘಮಿಸುವ ಖಾದ್ಯಗಳನ್ನೊಳಗೊಂಡಿತ್ತು.

ಆಕರ್ಷಿಸಿದ ಚೆನ್ನಮಣೆ, ನೃತ್ಯ,,,
ಕಾರ್ಯಕ್ರಮದ ಆರಂಭದಲ್ಲಿ ಹಿರಿಯರ ಆಟಿ ತಿಂಗಳ ಸುಂದರ ಆಟವಾಗಿರುವ `ಚೆನ್ನಮಣೆ’ ಆಟವನ್ನು ಮಹಿಳೆಯರು ಹಾಗೂ ಪುರುಷರು ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಒದಗಿಸಲಾಯಿತು. ಪುರುಷರಕಟ್ಟೆ ಗುರುಕುಲ ಕಲಾ ಕೇಂದ್ರದ ಮಕ್ಕಳಿಂದ ಆಕರ್ಷಿಕ ನೃತ್ಯ ಕಾರ್ಯಕ್ರಮ, ಆಟಿ ಕುರಿತ ಗಾಯನವು ಸಭಿಕರನ್ನು ಸೆಳೆಯುವಂತೆ ಮಾಡಿತ್ತು. ಪ್ರವೇಶ ದ್ವಾರ, 49 ಬಗೆಯ ಬಂಜಾರ ಊಟದ ಕೌಂಟರ್ ಅನ್ನು ತೆಂಗಿನಮರದ ತಾಳೆಗರಿಯಿಂದ ಅಲಂಕೃತಗೊಳಿಸಲಾಗಿತ್ತು.

ಸುದ್ದಿ ಯ್ಯೂಟ್ಯೂಬ್ ಚಾನೆಲ್ ಕಾರ್ಯಕ್ರಮವನ್ನು ನೇರಪ್ರಸಾರವನ್ನು ಮಾಡಿತ್ತು.

೧೯೦೦೦/- ಜಾಹಿರಾತು

LEAVE A REPLY

Please enter your comment!
Please enter your name here