ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಕೃಷಿಕರಿಗೆ ಸಮಸ್ಯೆ- ಅರುಣ್‌ ಕುಮಾರ್‌ ಪುತ್ತಿಲ ಭೇಟಿ

0

ಉಪ್ಪಿನಂಗಡಿ: ಹೆದ್ದಾರಿ ಅಗಲೀಕರಣದ ಅಸಮರ್ಪಕ ಕಾಮಗಾರಿ ಹಾಗೂ ಒಂದೆರಡು ಮಳೆಗೆ ಮಗುಚಿ ಬಿದ್ದ ತಡೆಗೋಡೆಯಿಂದಾಗಿ ಚರಂಡಿಯ ಕೊಳಚೆ ನೀರು ಕೃಷಿ ಪ್ರದೇಶವನ್ನಾವರಿಸಿ ಹನ್ನೊಂದು ದಿನಗಳು ಕಳೆದರೂ, ಕೃಷಿ ಬೆಳೆಗಳು ಹಾನಿಯಾಗುವ ಭೀತಿಗೆ ಅಧಿಕಾರಿ ವರ್ಗ ಯಾವುದೇ ಸ್ಪಂದನೆ ನೀಡದಿದ್ದ ಹಿನ್ನೆಲೆಯಲ್ಲಿ ಸೋಮವಾರದಂದು ಅರುಣ್ ಕುಮಾರ್ ಪುತ್ತಿಲ ನೇತೃತ್ವದ ತಂಡ ಉಪ್ಪಿನಂಗಡಿಯ ನಟ್ಟಿಬೈಲು ಪ್ರದೇಶಕ್ಕೆ ಭೇಟಿ ನೀಡಿ, ಪ್ರತಿಭಟನೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಕೊಳಚೆ ನೀರು ಹರಿದು ಹೋಗುವಂತೆ ಕಾರ್ಯಾಚರಣೆಗಿಳಿದ ಘಟನೆ ವರದಿಯಾಗಿದೆ.


ಉಪ್ಪಿನಂಗಡಿಯ ಹೃದಯ ಭಾಗದಲ್ಲಿನ ಕೃಷಿ ಪ್ರದೇಶಕ್ಕೆ ಕೊಳಚೆ ನೀರು ನುಗ್ಗಿ ಪರಿಸರವಿಡೀ ದುರ್ನಾತ ಪ್ರಸಹರಿಸುತ್ತಿದ್ದು, ಕೃಷಿ ಬೆಳೆಗಳು ಹಾನಿಗೀಡಾಗುತ್ತಿದ್ದವು. ಈ ಬಗ್ಗೆ ಸರಕಾರಕ್ಕೆ ಸತತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸತತ ಹನ್ನೊಂದು ದಿನ ತೋಟದಲ್ಲಿ ನೀರು ನಿಂತು ಕೃಷಿ ಬೆಳೆಗಳು ಕೊಳೆಯಲಾರಂಭಿಸಿ ಪರಿಸರದ ಕೃಷಿಕರು ತೀವ್ರ ಕಳವಳಕ್ಕೆ ತುತ್ತಾಗಿದ್ದರು.


ಈ ಬಗ್ಗೆ ಮಾಹಿತಿ ಪಡೆದ ಅರುಣ್ ಕುಮಾರ್ ಪುತ್ತಿಲರವರು ಸೋಮವಾರದಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಡಿಕೆ ಕೃಷಿ ಹಾನಿಗೀಡಾಗುವುದನ್ನು ಮನಗಂಡ ಅವರು ಹೆದ್ದಾರಿ ಇಲಾಖಾಧಿಕಾರಿಗಳನ್ನು ಸಂಪರ್ಕಿಸಿ, ತಕ್ಷಣವೇ ಕೃಷಿ ಪ್ರದೇಶದಲ್ಲಿ ನಿಂತ ಕೊಳಚೆ ನೀರನ್ನು ಹೊರಭಾಗಕ್ಕೆ ಹರಿಯುವಂತೆ ಮಾಡದಿದ್ದರೆ ಸ್ಥಳೀಯ ಕೃಷಿಕರ ಸಹಭಾಗಿತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಗುವುದೆಂದು ಎಚ್ಚರಿಸಿದರು.


ತ್ವರಿತ ಸ್ಪಂದನೆ ತೋರಿದ ಅಧಿಕಾರಿಗಳು: ಪ್ರತಿಭಟನೆಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಮಿಂಚಿನ ವೇಗದಲ್ಲಿ ಹಿಟಾಚಿಯನ್ನು ತರಿಸಿ , ಕೃಷಿ ತೋಟದಲ್ಲಿ ನೆಲೆ ನಿಂತ ಕೊಳಚೆ ನೀರನ್ನು ಚರಂಡಿಗೆ ಹರಿದು ಹೋಗುವಂತೆ ಮಾಡಿದರು. ಹಾಗೂ ಮುಂದಿನ ಒಂದೆರಡು ದಿನಗಳಲ್ಲಿ ಇದಕ್ಕೆ ಶಾಶ್ವತ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಪುತ್ತಿಲರೊಂದಿಗೆ ಸ್ಥಳೀಯ ಮುಂದಾಳುಗಳಾದ ಹರೀಶ್ ನಾಯಕ್, ರಾಜಗೋಪಾಲ ಹೆಗ್ಡೆ, ದೀಪಕ್ ಪೈ, ಸಂದೀಪ್ ಕುಪ್ಪೆಟ್ಟಿ, ಚಿದಾನಂದ ಪಂಚೇರು , ಅನಿಲ್ ತೆಂಕಿಲ, ಪ್ರಸನ್ನ ಮಾರ್ಥ, ಉಮೇಶ್ ಗೌಡ, ಬಿ.ಎಂ. ಭಟ್, ಯೋಗೀಶ್ ನಟ್ಟಿಬೈಲು ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here