ನೆಲ್ಯಾಡಿ: ಮಳೆನೀರು ಕೊಯ್ಲು ಕುರಿತು ಪ್ರಾತ್ಯಕ್ಷಿಕೆ, ತರಬೇತಿ

0

ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ಪ.ಪೂ.ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸ್ವಯಂಸೇವಕರಿಗೆ ಕಾಲೇಜಿನ ಸಂಚಾಲಕರಾದ ರೆ.ಫಾ. ನೋಮಿಸ್ ಕುರಿಯಕೋಸ್ ಹಾಗೂ ಪ್ರಾಚಾರ್ಯ ಏಲಿಯಾಸ್ ಎಂ.ಕೆ.ರವರ ಮಾರ್ಗದರ್ಶನದಲ್ಲಿ ಮಳೆ ನೀರು ಕೊಯ್ಲು ಕುರಿತು ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಯಿತು.


ವಿಶ್ವ ದಾಖಲೆ ಪ್ರಶಸ್ತಿ ಪಡೆದ ಕೊಕ್ಕಡದ ಡೇವಿಡ್ ಜೈಮಿರವರ ಮನೆಗೆ ಭೇಟಿ ನೀಡಿದ ಘಟಕದ ಸ್ವಯಂಸೇವಕರು ನೀರು ಇಂಗಿಸುವಿಕೆಯ ಬಗ್ಗೆ ತರಬೇತಿ ಮತ್ತು ಮಾಹಿತಿ ಪಡೆದುಕೊಂಡರು. ಮಳೆಗಾಲದಲ್ಲಿ ಭೂಮಿಗೆ ನೀರು ಇಂಗಿಸುವಿಕೆ ಮತ್ತು ಮಳೆ ನೀರಿನ ಕೊಯ್ಲು ಬಹಳ ಅವಶ್ಯಕತೆ ಎಂದು ಹೇಳಿದ ಡೇವಿಡ್ ಜೈಮಿ ಅವರು, ತಮ್ಮ ಮನೆಯ ಛಾವಣಿಗೆ ಬಿದ್ದ ನೀರನ್ನು ಸಂಗ್ರಹಿಸಿ ತಮ್ಮ ಬಾವಿಗೆ ಇಂಗಿಸುವ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿದರು. ತಮ್ಮ ಜಾಗದಲ್ಲಿರುವ ಮರಗಳ ಮೇಲಿಂದ ಇಳಿಯುವ ನೀರನ್ನು ಸಂಗ್ರಹಿಸಿ ಪೈಪುಗಳ ಸಹಾಯದಿಂದ ಇಂಗು ಗುಂಡಿಗಳಿಗೆ ಇಂಗಿಸುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ವಿವರಿಸಿದರು. ಕುಡಿಯುವ ನೀರಿನ ಬಾವಿಗೆ ನೀರು ಇಂಗಿಸುವಾಗ ನೀರನ್ನು ಸೋಸುವುದಕ್ಕಾಗಿ ಫಿಲ್ಟರ್ ಸಂಶೋಧನೆ ಮಾಡಿದ ಅವರು ಅದರ ಉಪಯೋಗವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮಳೆಗಾಲದಲ್ಲಿ ಹರಿದು ಹೋಗಿ ವ್ಯರ್ಥವಾಗುವ ನೀರನ್ನು ನಿಲ್ಲಿಸಬೇಕು ಮತ್ತು ನಿಂತ ನೀರನ್ನು ಇಂಗಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.


ಕಾಲೇಜಿನ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ವಿಶ್ವನಾಥ ಶೆಟ್ಟಿ ಕೆ ಸ್ವಾಗತಿಸಿದರು. ಸೀನಿಯರ್ ಚೇಂಬರ್ ಇಂಟರನ್‌ನ್ಯಾಷನಲ್ ನೆಲ್ಯಾಡಿ ಲಿಜನ್‌ನ ಅಧ್ಯಕ್ಷ ನಾರಾಯಣ ಬಲ್ಯ, ದೈಹಿಕ ಶಿಕ್ಷಣ ನಿರ್ದೇಶಕ ಮೊಹಮ್ಮದ್ ಹ್ಯಾರಿಸ್, ಎನ್‌ಎಸ್‌ಎಸ್ ಘಟಕದ ನಾಯಕ ಮೋಹನ್, ನಾಯಕಿ ಕಾವ್ಯ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here