ಪುತ್ತೂರು: ಕ.ಸಾ.ಪ- ಪುತ್ತೂರು ಅಧ್ಯಕ್ಷರ ಕಚೇರಿಯಲ್ಲಿ ಕ.ಸಾ. ಪ ಪುತ್ತೂರು ಕಾರ್ಯಕಾರಿ ಸಮಿತಿಯ ಸಮಾಲೋಚನಾ ಸಭೆಯು ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜು.30ರಂದು ನಡೆಯಿತು. ಕನ್ನಡ ಭಾಷೆ ಹಾಗೂ ಸಾಹಿತ್ಯ ಹಾಗೂ ಮುಂದೆ ನಡೆಸುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಸಾಹಿತ್ಯ ಪರಿಷತ್ತಿಗೆ ಜಮೀನು ಮಂಜುರಾಗಲು ಸೂಚನೆ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಸಹಕಾರ ನೀಡಿದ ಸಹಾಯಕ ಅಯುಕ್ತ ಗಿರೀಶ್ ನಂದನ್ , ನಗರಸಭಾ ಪೌರಾಯುಕ್ತ ಮಧು ಮನೋಹರ್, ಆರ್ ಐ ಮಹೇಶ್, ತಹಸಿಲ್ದಾರ್ ಕಚೇರಿ, ಭೂಮಾಪನ ಇಲಾಖೆ, ಗ್ರಾಮಚಾವಡಿ ಇಲಾಖೆಯ ಸಿಬ್ಬಂದಿ ವರ್ಗದವರನ್ನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್ ಸುವರ್ಣ ಸೇವೆಯನ್ನು ಸ್ಮರಿಸಲಾಯಿತು. ಜೊತೆಗೆ ಕನ್ನಡ ಭವನ ನಿರ್ಮಾಣಕ್ಕೆ ಸಹಕಾರವನ್ನು ಹಾಗೂ ಸಿ.ಎಸ್. ಆರ್ ಫಂಡ್ ಗಳ ಮೂಲಕ ಅನುದಾನವನ್ನು ನೀಡುವ ಭರವಸೆ ನೀಡಿದ ಮಾನ್ಯ ಶಾಸಕ ಅಶೋಕ ರೈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಭವನ ನಿರ್ಮಾಣ ಸಮಿತಿ ರಚಿಸುವ ಕುರಿತು ಪೂರ್ವಭಾವಿ ಸಭೆಯನ್ನು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಸಮ್ಮೇಳನದ ಪೂರ್ವಾಧ್ಯಕ್ಷರು, ತಾಲೂಕಿನಿಂದ ಆಯ್ಕೆಯಾದ ಜಿಲ್ಲಾ ಸಮ್ಮೇಳನದ ಅಧ್ಯಕ್ಷರುಗಳು, ಊರಿನ ಸಾಹಿತಿಗಳು, ಉದ್ಯಮಿಗಳು, ಈ ಹಿಂದೆ ಸಮ್ಮೇಳನವನ್ನು ನಡೆಸಲು ಅವಕಾಶ ನೀಡಿದ ವಿದ್ಯಾಸಂಸ್ಥೆಗಳು, ಆಯ್ದ ಶಾಲಾ-ಕಾಲೇಜುಗಳ ಮುಖ್ಯ ಮುಖ್ಯೋಪಾಧ್ಯಾಯರುಗಳು, ಇತ್ಯಾದಿ ಗಣ್ಯರನ್ನು ಸೇರಿಸಿ ಮಾನ್ಯ ಶಾಸಕರ ನೇತೃತ್ವದಲ್ಲಿ ಕನ್ನಡ ಭವನ ನಿರ್ಮಾಣ ಬಗ್ಗೆ ಮಾಹಿತಿ ನೀಡುವುದು ಬಳಿಕ ಪ್ರತ್ಯೇಕ ಸಭೆಯಲ್ಲಿ ಕಾರ್ಯಕಾರಿ ಸಮಿತಿಯು ನಿರ್ಧರಿಸಿದ ಊರ ಪ್ರಮುಖ ವ್ಯಕ್ತಿಗಳನ್ನು ಸೇರಿಸಿ ಕನ್ನಡ ಭವನ ನಿರ್ಮಾಣ ಸಮಿತಿಯನ್ನು ರಚಿಸುವುದು ಎಂದು ನಿರ್ಣಯಿಸಲಾಯಿತು.
ಸಮಾಲೋಚನಾ ಸಭೆಯಲ್ಲಿ ಕಸಾಪ ಪುತ್ತೂರು ಇದರ ಮಾರ್ಗದರ್ಶಕ ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತ್ ಕುಮಾರ್, ಕ ಸಾ ಪ -ದ ಕ ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.ಗೌರವ ಕಾರ್ಯದರ್ಶಿಗಳಾದ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ, ಕಾರ್ಯದರ್ಶಿಗಳಾದ ಹರಿಣಿ ಪುತ್ತೂರಾಯ ಧನ್ಯವಾದಗೈದರು.