ಪಿಯು ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯಾಗಿದೆ : ಸತ್ಯಜಿತ್ ಉಪಾಧ್ಯಾಯ
ಪುತ್ತೂರು: ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪಿ ಯು ಪರೀಕ್ಷಾ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಪ್ರಾಯೋಗಿಕ ಪರೀಕ್ಷೆಗಳಿಲ್ಲದ ವಿಷಯಗಳಲ್ಲಿ 20 ಅಂಕಗಳನ್ನು ಆಂತರಿಕ ಮೌಲ್ಯಮಾಪನಕ್ಕೆ ಮೀಸಲಾಗಿದೆ. ವಿದ್ಯಾರ್ಥಿಗಳು ಚೆನ್ನಾಗಿ ತಯಾರಿ ನಡೆಸಿಕೊಂಡು ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹೇಳಿದರು.
ಅವರು ಶನಿವಾರ ಕಾಲೇಜಿನಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಪೋಷಕರನ್ನುದ್ದೇಶಿಸಿ ಮಾತನಾಡಿದರು.
ಜ್ಞಾನಾರ್ಜನೆಗಾಗಿ ಅಂಬಿಕಾ ವಿದ್ಯಾಲಯ ಸೃಷ್ಟಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಬರುವ ನೆಲೆಯಲ್ಲಿ ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಹೆತ್ತವರ ಸಹಕಾರ ಅತೀ ಅಗತ್ಯ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಂಬಿಕಾದ ಆಡಳಿತ ಮಂಡಳಿ, ಉಪನ್ಯಾಸಕರು ಶ್ರಮಿಸುತ್ತಿದ್ದಾರೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಪೋಷಕರಿಗೆ ಶುಭ ಹಾರೈಸಿದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ, ನೀಟ್, ಸಿಇಟಿ, ಎನ್‌ಡಿಎ ಮುಂತಾದವುಗಳ ಬಗ್ಗೆ ಹಾಗೂ ಪಿ.ಯು.ಸಿ. ಇಲಾಖಾ ಪರೀಕ್ಷೆಗಳ ಬಗ್ಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಶೈಕ್ಷಣಿಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯುವ ವಿಶ್ವ ಸ್ಕೌಟ್ ಸಮ್ಮೇಳನದಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯಲು ಹೊರಟ ವಿದ್ಯಾರ್ಥಿಗಳಾದ ಸತ್ಯಪ್ರಸಾದ್ ನಾಯಕ್, ಅನಿಕೇತ್ ಎನ್ ಹಾಗೂ ಅಕ್ಷಯ ಕೃಷ್ಣ ಅವರಿಗೆ ಬೆಳ್ಳಿ ಪದಕವನ್ನು ನೀಡಿ, ಸನ್ಮಾನಿಸಿ ಭಾರತದ ಹಿರಿಮೆ ಗರಿಮೆಯನ್ನು, ಸಂಸ್ಕೃತಿಯನ್ನು, ಸ್ವಾಭಿಮಾನವನ್ನು ವಿದೇಶದಲ್ಲಿಯೂ ಎತ್ತಿ ಹಿಡಿಯುವಂತೆ ಪ್ರೋತ್ಸಾಹಿಸಲಾಯಿತು.
ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಣೈ, ಉಪಪ್ರಾಚಾರ್ಯೆ ಶೈನಿ ಕೆ. ಜೆ ಹಾಗೂ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳ ಸಂಯೋಜಕ ಕೆ ಕಿಶೋರ್ ಭಟ್ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ ಮಾಹಿತಿ ನೀಡಿದರು. ಉಪನ್ಯಾಸಕ ಸತೀಶ್ ಇರ್ದೆ ಹಾಗೂ ಆದಿತ್ಯ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.