ಪುತ್ತೂರು:ವರದಕ್ಷಿಣೆ ಹಿಂಸೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮಹಿಳೆಯ ಪತಿ ಸಹಿತ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಬಕ ಗ್ರಾಮದ ವಿದ್ಯಾಪುರ ನಿವಾಸಿ ನಸೀಮಾ ಬಾನು ಎಂಬವರು ಆಕೆಯ ಪತಿ, ಕಲ್ಲಡ್ಕ ಬಾಳಿಲ ಸಿಟಿ ಪ್ಲಾಜಾ ಎಂಬಲ್ಲಿ ವಾಸವಾಗಿರುವ ಅಹಮ್ಮದ್ ಎಂಬವರ ಮಗ ಬಿ.ಕೆ.ಜೈನುಲ್ ಆಬಿದ್, ಅವರ ತಂದೆ ಅಹಮ್ಮದ್, ತಾಯಿ ಸಫಿಯಾ ಹಾಗೂ ಜೈನುಲ್ ಆಬಿದ್ ಅವರ ತಮ್ಮ ಸರ್ಫುದ್ದೀನ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.2010 ಜೂನ್ 27ರಂದು ತನಗೆ ಜೈನುಲ್ ಆಬಿದ್ ಜೊತೆ ಮದುವೆಯಾಗಿತ್ತು.ಮದುವೆ ಸಂದರ್ಭದಲ್ಲಿ 1.5 ಲಕ್ಷ ರೂ.ಮತ್ತು 20 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದರು.ಮದುವೆಯಾದ ಬಳಿಕವೂ 1 ಲಕ್ಷ ರೂ.ತರುವಂತೆ ಹೇಳಿ ಆರೋಪಿಗಳು ನನಗೆ ಹಿಂಸೆ ನೀಡುತ್ತಿದ್ದುದರಿಂದ ತಾನು ಗಂಡನ ಮನೆ ಬಿಟ್ಟು ತಾಯಿ ಮನೆಗೆ ಬಂದು ನೆಲೆಸಿದ್ದೆ.2011ರ ಸೆ.7ರಂದು ರಾತ್ರಿ ಗಂಡ ಜೈನುಲ್ ಆಬಿದ್, ಅವರ ತಮ್ಮ ಸರ್ಫುದ್ದೀನ್‌ರವರು ಕಬಕದ ನಮ್ಮ ಮನೆಗೆ ಬಂದು ನನಗೆ ಹಲ್ಲೆ ಮಾಡಿ, ಬೆದರಿಕೆಯೊಡ್ಡಿದ್ದರು ಎಂದು ನಸೀಮಾಬಾನು ಅವರು ಪೊಲೀಸರಿಗೆ ದೂರು ನೀಡಿ, ತನಗೆ ವರದಕ್ಷಿಣೆ ಹಿಂಸೆ ನೀಡಿದ ಗಂಡ,ಅತ್ತೆ,ಮಾವ ಮತ್ತು ಗಂಡನ ತಮ್ಮನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಾದ ಜೈನುಲ್ ಆಬಿದ್, ಆತನ ತಾಯಿ ಸಫಿಯಾ ಮತ್ತು ತಮ್ಮ ಸರ್ಫುದ್ದೀನ್ ಅವರನ್ನು ಖುಲಾಸೆಗೊಳಿಸಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ನಿಶಾ ಕುಮಾರಿ ವಾದಿಸಿದ್ದರು.