ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಾಲಾ ಪಾಲಕರ ದಿನಾಚರಣೆ

0

ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಾಲಾ ಪಾಲಕರ ದಿನಾಚರಣೆಯ ಅಂಗವಾಗಿ, ದಿವ್ಯ ಬಲಿಪೂಜೆಯನ್ನು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಜು.27ರಂದು ಅರ್ಪಿಸಲಾಯಿತು. ಶಾಲಾ ಪಾಲಕರ ದಿನಾಚರಣೆಯ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸಭಾಂಗಣದಲ್ಲಿ ಆ.2ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂದನೀಯ ಫಾ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ “ಪ್ರತಿಯೊಬ್ಬರಿಗೂ ಜೀವನದಲ್ಲಿ ಜವಾಬ್ದಾರಿಗಳಿವೆ. ಅದನ್ನು ಸರಿಯಾಗಿ ನಿರ್ವಹಿಸಿದರೆ ನಮ್ಮ ಜೀವನವು ಪೂರ್ಣವಾಗುತ್ತದೆ. ಪರರಲ್ಲಿ ದೇವರನ್ನು ಕಾಣಬೇಕು. ಪರಸೇವೆ ಹಾಗೂ ಪ್ರೀತಿಸುವ ಮನೋಭಾವವನ್ನು ಬೆಳೆಸಬೇಕು” ಎಂದು ಕರೆ ನೀಡಿ ಶಾಲಾ ಪಾಲಕ ಸಂತ ವಿಕ್ಟರ್ ಹಾಗೂ ಶಾಲಾ ಸಂಸ್ಥಾಪಕ ಮೊ| ಆಂಟನಿ ಪತ್ರಾವೊರವರನ್ನು ಸ್ಮರಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಆಂಗ್ಲ ಉಪನ್ಯಾಸಕ ವಂ. ಫಾ. ಸ್ಟ್ಯಾನಿ ಪಿಂಟೊ ಮಾತನಾಡಿ “ಭಗವಂತನ ಮೇಲೆ ವಿಶ್ವಾಸವನ್ನು ಇಡಬೇಕು. ಜೀವನದಲ್ಲಿ ಶಿಸ್ತು, ಪ್ರೀತಿ ಹಾಗೂ ತ್ಯಾಗಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಶಾಲಾ ಶಿಕ್ಷಣದ ಜೊತೆ ಜೀವನದ ಪಾಠವೂ ಅವಶ್ಯಕ. ಮೌಲ್ಯಯುತ ಶಿಕ್ಷಣವನ್ನು ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.


ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ ಮಾತನಾಡಿ “ಹೆತ್ತವರು ಹಬ್ಬಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಆಗ ಹಬ್ಬಗಳ ಆಚರಣೆಯ ಮಹತ್ವದ ಬಗ್ಗೆ ಅರಿವು ಉಂಟಾಗುತ್ತದೆ ಎಂದರು.


ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಉದಯಕುಮಾರಿ ಮಾತನಾಡಿ “ಜೀವನದಲ್ಲಿ ಮುಂದೆ ಬರಲು ಹಲವಾರು ಅವಕಾಶಗಳು ಬರುತ್ತವೆ. ಸಿಗುವಂತಹ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು” ಎಂದು ಹೇಳುತ್ತಾ ಹಬ್ಬಕ್ಕೆ ಶುಭ ಹಾರೈಸಿದರು. ಹೆಣ್ಮಕ್ಕಳ ಸುರಕ್ಷಾ ಸಮಿತಿ ಸಂಯೋಜಕಿ ಶ್ವೇತಾ,ಶಾಲಾ ನಾಯಕಿ ಫಾತಿಮಾ ಕಾಸಿಂ ಹಾಗೂ ಸ್ವಚ್ಛಾಗ್ರಹ ಹಾಗೂ ಗ್ರಾಹಕರ ಸಂಘದ ಅಧ್ಯಕ್ಷೆ ಶಿಝಾ ನಾಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯನ್ನು ಅಭಿನಂದಿಸಲಾಯಿತು. ನಂತರ ಶಾಲೆಯ ವಿವಿಧ ಚಟುವಟಿಕೆಗಳಲ್ಲಿ, ವಿವಿಧ ಪ್ರತಿಭಾನ್ವಿತ ಪರೀಕ್ಷೆಗಳಲ್ಲಿ ಆಯ್ಕೆಯಾದ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನವನ್ನು ವಿತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊರವರು ಸ್ವಾಗತಿಸಿ, ಶಾಲಾ ಶಿಕ್ಷಕಿ ಲೆನಿಟಾ ಮೊರಾಸ್ ವಂದಿಸಿ, 10ನೇ ತರಗತಿ ವಿದ್ಯಾರ್ಥಿನಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲಾ ಶಿಕ್ಷಕಿ ಪಲ್ಲವಿ ಭಟ್ ಸಹಕರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು. ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಹಲೀಮಾ ಶೈಮಾ ಹಾಗೂ ಕುಮಾರಿ ಹುನೈಫಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here