ಪುತ್ತೂರು:ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆ(ಸಿಆರ್‌ಪಿಎಫ್)ಯಲ್ಲಿ ಸುದೀರ್ಘ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಬಡಗನ್ನೂರು ಪಟ್ಟೆ ನಿವಾಸಿ ಬಾಲಕೃಷ್ಣ ಎನ್. ನಿವೃತ್ತಿಗೊಂಡು ಆ.5ರಂದು ಹುಟ್ಟೂರಿಗೆ ಆಗಮಿಸಲಿದ್ದಾರೆ.
ಬಡಗನ್ನೂರು ಪಟ್ಟೆ ದಿ. ಮಹಾಲಿಂಗ ಪಾಟಾಳಿ ಮತ್ತು ಗಿರಿಜಾ ದಂಪತಿ ಪುತ್ರ ಬಾಲಕೃಷ್ಣರವರು ಪಟ್ಟೆ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುಳ್ಯಪದವು ಶ್ರೀ ಬಾಲಸುಬ್ರಹ್ಮಣ್ಯ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಪೆರ್ನಾಜೆ ಶ್ರೀ ಸೀತಾರಾಘವ ಪಿ.ಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ.
2003 ರಲ್ಲಿ ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆಗೆ ಸೇರ್ಪಡೆಗೊಂಡು ರಾಜಸ್ಥಾನದ ಅಜ್ಮೀರ್‌ನಲ್ಲಿ ತರಬೇತಿ ಪೂರೈಸಿದ ಬಳಿಕ ಜಮ್ಮು ಕಾಶ್ಮೀರ, ನಾಗಲ್ಯಾಂಡ್, ಛತ್ತೀಸ್‌ಗಡ, ಪಂಜಾಬ್, ಚಂಡೀಗಢ ಮತ್ತು ಅಸ್ಸಾಂಗ ಸೇದರಿದಂತೆ ಸುದೀರ್ಘ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ. ತಾನು ಸಲ್ಲಿಸಿದ ಸೇವೆಗೆ ಉತ್ಕೃಷ್ಟ ಸೇವಾ ಪದಕ ಪ್ರಶಸ್ತಿ’ಯನ್ನು ಪಡೆದುಕೊಂಡಿರುವ ಇವರು ಪತ್ನಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಗೀತಾ, ಪುತ್ರ ಮಿಥನ್ ಹಾಗೂ ಪುತ್ರಿ ಭೂಮಿಕಾರೊಂದಿಗೆ ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ವಾಸ್ತವ್ಯವಿದ್ದಾರೆ.
ಇಂದು ಹುಟ್ಟೂರಿಗೆ: ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆಯಲ್ಲಿ ಸುಧೀರ್ಘ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ಹುಟ್ಟೂರಿಗೆ ಆಗಮಿಸುತ್ತಿರುವ ಬಾಲಕೃಷ್ಣರವರಿಗೆ ಆ.5ರಂದು ಸಂಜೆ ಕಲ್ಲರ್ಪೆ ಬಳಿ ಸ್ವಾಗತಿಸಲಾಗುವುದು. ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ, ಪಟ್ಟೆ ಯುವಕ ಮಂಡಲ ಹಾಗೂ ಬಾಲಕೃಷ್ಣ ಕುಟುಂಬಸ್ಥರು ವೀರ ಯೋಧರಿಗೆ ಸ್ವಾಗತ ನಡೆಯಲಿದೆ.