ಭಾರತ್- ಒನ್ ಸೌಹಾರ್ದ ಸಹಕಾರಿ ಸಂಘದಿಂದ ಗ್ರಾಹಕ, ಸಿಬ್ಬಂದಿಗಳಿಗೆ ಲಕ್ಷಾಂತರ ರೂ.ವಂಚನೆ ಆರೋಪ-ದೂರು

0

ಪುತ್ತೂರು:ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಪಿಎಂಸಿ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ -ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸಸ್ ಎಂಬ ಟ್ರೇಡಿಂಗ್ ವ್ಯವಹಾರ ಸಂಸ್ಥೆಗಳು ಮೆಚ್ಯೂರ್ ಆಗಿರುವ ಠೇವಣಿಗಳಿಗೆ ಸಂಬಂಧಿಸಿ ಹಣ ಹಿಂದಿರುಗಿಸದೆ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಗ್ರಾಹಕರು ಮತ್ತು ಸಿಬ್ಬಂದಿಗಳು ಸೇರಿ ಸಂಸ್ಥೆಯ ಅಧ್ಯಕ್ಷರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಆ.4ರಂದು ನಡೆದಿದೆ.ವಂಚನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘವು ಗ್ರಾಹಕರಿಗೆ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಒಳಮೊಗ್ರು ಗ್ರಾಮದ ನಿವಾಸಿಯಾದ ನಾರಾಯಣ ನಾಯ್ಕ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಂಸ್ಥೆಯ ಅಧ್ಯಕ್ಷ ಗಿರೀಶ್ ರೈ ಎಂಬವರು ಗ್ರಾಹಕರಿಂದ ಡೆಪೋಸಿಟ್ ಪಡೆದು ಅದರ ಮೆಚ್ಯೂರಿಟಿ ಆದರೂ ಹಿಂದಿರುಗಿಸದೆ ವಂಚನೆ ಮಾಡಿದ್ದಾರೆ.ಇದರ ಜೊತೆಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಷರತ್ತು ವಿಧಿಸಿ ಅವರಿಂದಲೂ ಅತ್ಯಧಿಕ ಮೊತ್ತದ ಡೆಪೋಸಿಟ್ ಪಡೆದುಕೊಂಡಿದ್ದಾರೆ.ಆದರೆ ಸಿಬ್ಬಂದಿಗಳಿಗೆ ಸರಿಯಾದ ವೇತನ ನೀಡದೆ ಸಂಸ್ಥೆಯಲ್ಲಿ ಇಟ್ಟಿರುವ ಡೆಪೋಸಿಟ್ ಹಣವನ್ನೂ ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ತಲೆಮರೆಸಿಕೊಂಡಿದ್ದ ಅಧ್ಯಕ್ಷ: ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ರೈ ಎಂಬವರು ಹಲವು ಸಮಯಗಳಿಂದ ತಲೆಮರೆಸಿಕೊಂಡಿದ್ದರು ಎಂದು ಗ್ರಾಹಕರು ಮತ್ತು ಸಿಬ್ಬಂದಿಗಳು ಅವರ ಪತ್ತೆಗಾಗಿ ಕಾಯುತ್ತಿದ್ದರು.ಆ.4ರಂದು ಅವರು ಪುತ್ತೂರು ಐಸಿಐಸಿಐ ಬ್ಯಾಂಕ್‌ಗೆ ಬಂದಿದ್ದಾರೆಂಬ ಮಾಹಿತಿ ಪಡೆದು ಅಲ್ಲಿಗೆ ಆಗಮಿಸಿದ ಹಲವು ಗ್ರಾಹಕರು ಮತ್ತು ಸಿಬ್ಬಂದಿಗಳು ಸುತ್ತುವರಿದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.


ಠಾಣೆ ಮುಂದೆ ಜಮಾಯಿಸಿದ ಜನರು:
ಬ್ಯಾಂಕ್‌ನ ಅಧ್ಯಕ್ಷ ಗಿರೀಶ್ ರೈ ಅವರನ್ನು ಠಾಣೆಗೆ ಕರೆದೊಯ್ದ ಮಾಹಿತಿ ತಿಳಿಯುತ್ತಲೇ, ಹಣ ಕಳೆದುಕೊಂಡಿದ್ದ ಹಲವು ಗ್ರಾಹಕರು ಮತ್ತು ಸಿಬ್ಬಂದಿಗಳು ಠಾಣೆಯ ಮುಂದೆ ಜಮಾಯಿಸಿ ತಾವು ಮೋಸ ಹೋಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು.

ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಿಬ್ಬಂದಿಗಳು, ಗ್ರಾಹಕರು
ಕ್ಯಾಶಿಯರ್ ಆಗಿ ಅಪಾಯಿಂಟ್‌ಮೆಂಟ್ ಮಾಡಬೇಕಾದರೆ ರೂ.5 ಲಕ್ಷ ಡೆಪೋಸಿಟ್ ಇಡಬೇಕೆಂಬ ಷರತ್ತು ವಿಧಿಸಿದಂತೆ ಕವಿತಾ ಎಂಬವರು ಪರಿಚಯಸ್ಥರ ಮೂಲಕ ರೂ.5 ಲಕ್ಷ ಮತ್ತು ತನ್ನ ಸ್ವಂತದ್ದೆಂದು ರೂ.50 ಸಾವಿರವನ್ನು ಡೆಪೋಸಿಟ್ ಇಟ್ಟಿದ್ದರು.ಹರ್ಷಿತಾ ಎಂಬವರು ಕ್ಲರ್ಕ್ ಹುದ್ದೆಗೆ ರೂ.1 ಲಕ್ಷ, ಗೋಪಾಲಕೃಷ್ಣ ಪಂಜ ಎಂಬವರು ರೂ.1 ಲಕ್ಷ, ಹರೀಶ್ ಎಂಬವರು ಅವರ ತಂಗಿಯ ಹೆಸರಿನಲ್ಲಿ ರೂ.1 ಲಕ್ಷ, ದೀಕ್ಷನ್ ಎಂಬವರು ರೂ.1 ಲಕ್ಷ, ನಾರಾಯಣ ಎಂಬವರು ಲಕ್ಷಾಂತರ ರೂಪಾಯಿ ಹೀಗೆ ಹಲವಾರು ಮಂದಿ ತಾವು ಡೆಪೋಸಿಟ್ ಇಟ್ಟು ಮೋಸಹೋಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಮುಂದೆ ಅವಲತ್ತುಕೊಂಡರು.

ಪ್ರಕರಣ ದಾಖಲು
ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸಂಗ್ರಹಿಸಿ ಹಾಗೂ ತನ್ನ ಸಿಬ್ಬಂದಿಗಳಿಗೆ ಕೂಡ ಗುರಿಯನ್ನು ನಿಗದಿಪಡಿಸಿ ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ, ಠೇವಣಿ ಸಂಗ್ರಹಿಸಿದ ಹಣವನ್ನು ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ವಾಪಸ್ ನೀಡದೇ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿರುವುದಾಗಿ ಆರೋಪಿಸಿ ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ರೈ, ಉಪಾಧ್ಯಕ್ಷರಾಗಿರುವ ವಿವಿಟ್ಟಾ ಟೆಲ್ಮಾ ಪಿಂಟೋ,ನಿರ್ದೇಶಕ ಸುದೇಶ್ ರೈ ಅಲೆಕ್ಕಾಡಿ, ಮ್ಯಾನೇಜರ್ ಸಂದೀಪ್ ಹಾಗೂ ಇತರ ನಿರ್ದೇಶಕರ ವಿರುದ್ಧ ಒಳಮೊಗ್ರು ನಿವಾಸಿ ನಾರಾಯಣ ನಾಯ್ಕ ಅವರು ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 406,420 ಜೊತೆಗೆ 34 ಐ.ಪಿ.ಸಿ ಮತ್ತು 21,22 ಃಂBANNING OF UNREGULATED DEPOSIT SCHEMES ACT 2019ನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here