ಪುತ್ತೂರು:4 ವರ್ಷಗಳ ಹಿಂದೆ ಮುಕ್ವೆ ಮಸೀದಿ ಬಳಿ ಮಾರುತಿ ಒಮ್ನಿ ಹಾಗೂ ಪಿಕಪ್ ಜೀಪ್ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಪಿಕಪ್ ಚಾಲಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2019ರ ಜ.22ರಂದು ಬೆಳಿಗ್ಗೆ ಮುಕ್ವೆ ಮಸೀದಿ ಬಳಿ ಮಾರುತಿ ಒಮ್ನಿಗೆ ಪಿಕಪ್ ಜೀಪ್ ಡಿಕ್ಕಿಯಾಗಿ ಒಮ್ನಿಯಲ್ಲಿದ್ದ ಶಾಂತಿಗೋಡು ಗ್ರಾಮದ ವೀರಮಂಗಲ ಸಿದ್ದನಗುರಿ ನಿವಾಸಿ, ಹೋಳಿಗೆ ತಯಾರಿಸಿ ಮಾರಾಟ ಮಾಡುವ ವೃತ್ತಿಯವರಾಗಿದ್ದ ಕೃಷ್ಣ ಭಟ್ (56ವ)ರವರು ಮೃತಪಟ್ಟಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಪಿಕಪ್ ಚಾಲಕ, ನರಿಮೊಗರು ನೆರಿಗೇರಿ ನಿವಾಸಿ ಹೊನ್ನಪ್ಪ ಗೌಡ(56ವ)ಎಂಬವರಿಗೆ ಪುತ್ತೂರು ನ್ಯಾಯಾಲಯ 1 ವರ್ಷ 4 ತಿಂಗಳು ಜೈಲು ಶಿಕ್ಷೆ ವಿಧಿಸಿ, ರೂ.8 ಸಾವಿರ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ:
ಹೋಳಿಗೆ ತಯಾರಿಸಿ ಪುತ್ತೂರಿನ ವಿವಿಧ ಬೇಕರಿಗಳಿಗೆ ವಿತರಣೆ ಮಾಡುವ ಕಾಯಕ ನಡೆಸುತ್ತಿದ್ದ ಕೃಷ್ಣ ಭಟ್ ಅವರು ಎಂದಿನಂತೆ ಜ.22ರಂದು ಬೆಳಿಗ್ಗೆ ಹೋಳಿಗೆ ಮಾರಾಟ ಮಾಡುವ ಸಲುವಾಗಿ ತನ್ನ ಪುತ್ರ ಅವಿನಾಶ್ ಅವರ ಜತೆ ಓಮ್ನಿಯಲ್ಲಿ ಪುತ್ತೂರು ಕಡೆಗೆ ಬರುತ್ತಿದ್ದ ವೇಳೆ ಮುಕ್ವೆ ಮಸೀದಿ ಬಳಿ ಪುತ್ತೂರು ಕಡೆಯಿಂದ ಪುರುಷರಕಟ್ಟೆ ಕಡೆಗೆ ಹೊನ್ನಪ್ಪ ಗೌಡ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಪಿಕಪ್ ಮತ್ತು ಒಮ್ನಿ ನಡುವೆ ಡಿಕ್ಕಿ ಸಂಭವಿಸಿತ್ತು.ಡಿಕ್ಕಿಯ ರಭಸಕ್ಕೆ ಓಮ್ನಿ ನಜ್ಜುಗುಜ್ಜಾಗಿದ್ದು,ಓಮ್ನಿಯಲ್ಲಿದ್ದ ಕೃಷ್ಣಭಟ್ ಹಾಗೂ ಒಮ್ನಿ ಚಾಲನೆ ಮಾಡುತ್ತಿದ್ದ ಅವರ ಪುತ್ರ ಅವಿನಾಶ್ ಅವರು ಗಂಭೀರ ಗಾಯಗೊಂಡಿದ್ದರು.ಕೃಷ್ಣ ಭಟ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಪುತ್ತೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಪುತ್ರ ಅವಿನಾಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪಿಕಪ್ ವಾಹನ ಚಾಲಕ ಹೊನ್ನಪ್ಪ ಗೌಡ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.