ಪುತ್ತೂರು: ದೇಶದ 77ನೇ ಸ್ವಾತಂತ್ರ್ಯೋತ್ಸವ ನಡೆಸುವ ನಿಟ್ಟಿನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪೂರ್ವಭಾವಿ ಸಭೆಯು ಆ.5ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು.
ಸ್ವಾತಂತ್ರ್ಯೋತ್ಸವದಲ್ಲಿ ಪ್ರತಿ ವರ್ಷ ನಡೆಯುವಂತೆ ಸಹಾಯಕ ಆಯುಕ್ತರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಲಿದ್ದಾರೆ. ಶಾಸಕರು, ಪೊಲೀಸ್ ಉಪ ಅಧೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ, ಗೃಹ ರಕ್ಷಕ, ಎನ್.ಸಿ.ಸಿ ವಿದ್ಯಾರ್ಥಿಗಳಿಂದ ಪೆರೇಡ್ ನಡೆಸುವುದು, ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರ ಗೀತೆ, ಸುದಾನ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ ನಡೆಸುವುದು ಬಳಿಕ ಪುರಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಇಬ್ಬರು ಮಾಜಿ ಯೋಧರು ಹಾಗೂ ಎಸ್.ಎಸ್.ಎಲ್.ಸಿ., ಪಿಯುಸಿಯ ತಲಾ ಮೂರು ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ನಂತರ ನಡೆಯುವ ಕಾರ್ಯಕ್ರಮದಲ್ಲಿ ಸಂತ ವಿಕ್ಟರ್ ಬಾಲಿಕರ ಪ್ರೌಢಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ, ಅಂಬಿಕಾ ವಿದ್ಯಾಲಯ ಹಾಗೂ ಸಂತ ಪಿಲೋಮಿನಾ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸ್ವಾತಂತ್ರ್ಯೋತ್ಸವ ದೇಶದ ಹಬ್ಬ. ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಪುತ್ತೂರು ಜಾತ್ರಾ ಸಮಯದಲ್ಲಿ ಎಲ್ಲಾ ಅಂಗಡಿ ಮಳಿಗೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವಂತೆ ಸ್ವಾತಂತ್ರ್ಯೋತ್ಸವಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಎಲ್ಲಾ ಸರಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಎಂದರು ತಿಳಿಸಿದರು.
ಗಾಂಧೀಕಟ್ಟೆಯಲ್ಲಿ ಈಗಿರುವ ಧ್ವಜಸ್ಥಂಭ ಸಮಸ್ಯೆಯಿದ್ದು ಅದನ್ನು ಸ್ಥಳಾಂತರಿಸುವಂತೆ ಗಾಂಧೀಕಟ್ಟೆ ಸಮಿತಿಯ ಸಯ್ಯದ್ ಕಮಲ್ ತಿಳಿಸಿದರು. ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿಯೂ ಸ್ವಾತಂತ್ರ್ಯೋತ್ಸವ ನಡೆಯಬೇಕು. ಆದರೂ ನಿಡ್ಪಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಧ್ವಜಸ್ಥಂಭವಿಲ್ಲ. ಅಲ್ಲಿ ಧ್ವಜಸ್ಥಂಭ ನಿರ್ಮಿಸಬೇಕು ಎಂದು ಕೃಷ್ಣಪ್ರಸಾದ್ ಆಳ್ವ ತಿಳಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕಾರ್ಯದರ್ಶಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಕಾರ್ಯಕ್ರಮದ ರೂಪುರೇಷೆ ಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶಿಲ್ದಾರ್ ಜೆ.ಶಿವಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.