ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಬೆಳೆವಿಮೆ ಯೋಜನೆ ವಿಮಾ ಕಂತು ಸ್ವೀಕರಿಸಬೇಕು; ಆಗ್ರಹ
ರಾಮಕುಂಜ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವಿಮಾ ಕಂತು ಪಾವತಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಅವಕಾಶವಿದೆ. ಆದರೆ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳು ಕಂತು ಸ್ವೀಕರಿಸುತ್ತಿಲ್ಲ ಎಂಬ ವಿಚಾರ ಆ.5ರಂದು ನಡೆದ ರಾಮಕುಂಜ ಗ್ರಾ.ಪಂ.ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡಿತು.
ಸಭೆ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ವಿಮಾ ಕಂತು ಪಾವತಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಅವಕಾಶವಿದೆ. ಆದರೆ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಮಾ ಕಂತು ಸ್ವೀಕರಿಸುತ್ತಿಲ್ಲ. ಸಹಕಾರ ಸಂಘಗಳಲ್ಲಿ ಬೆಳೆವಿಮೆ ಕಂತು ಪಾವತಿಗೆ ರೂಪೇ ಕಾರ್ಡ್‌ನ ಅವಶ್ಯಕತೆ ಇದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇದರ ಅವಶ್ಯಕತೆಯಿರುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳೂ ಬೆಳೆವಿಮಾ ಕಂತು ಸ್ವೀಕರಿಸಿದಲ್ಲಿ ಸಹಕಾರ ಸಂಘಗಳಿಗೆ ಆಗುವ ಹೊರೆ ಕಡಿಮೆಯಾಗಲಿದ್ದು, ರೈತರಿಗೂ ಅನುಕೂಲವಾಗಲಿದೆ ಎಂದು ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ಹೇಳಿದರು. ಗ್ರಾಮ ಪಂಚಾಯತ್‌ಕ್ಕೊಂದು ಸಹಕಾರ ಸಂಘ ಸ್ಥಾಪಿಸುವ ಸರಕಾರದ ನಿಲುವಿನ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಿತು.
ನ್ಯೂವರ್ಸನ್ ಅಪ್‌ಡೇಟ್ ಮಾಡಿಸಿ:
ಹಳೆನೇರೆಂಕಿ ಅಂಚೆ ಕಚೇರಿಯಲ್ಲಿ ಈ ಹಿಂದೆ ಆಧಾರ್‌ಕಾರ್ಡ್‌ಗೆ ಇ-ಕೆವೈಸಿ ಅಪ್‌ಡೇಟ್ ಮಾಡಲಾಗುತ್ತಿತ್ತು. ಅಲ್ಲಿನ ಸಿಬ್ಬಂದಿ ಮನೆ ಮನೆಗೆ ತೆರಳಿ ಅಪ್‌ಡೇಟ್ ಮಾಡುತ್ತಿದ್ದರು. ಇದು ಬಹಳಷ್ಟು ಜನರಿಗೆ ಅನುಕೂಲವಾಗಿತ್ತು. ಆದರೆ ಈಗ ನ್ಯೂ ವರ್ಸನ್ ಅಪ್‌ಡೇಟ್ ಆಗದೇ ಇರುವುದರಿಂದ ಸಮಸ್ಯೆಯಾಗಿದೆ. ಇಲ್ಲಿನ ಗ್ರಾಮಸ್ಥರು ಅಧ್ಯಕ್ಷರಿಂದ ಪತ್ರ ಪಡೆದುಕೊಂಡು ಬೇರೆ ಅಂಚೆ ಕಚೇರಿಗಳಿಗೆ ಹೋಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಹಳೆನೇರೆಂಕಿ ಅಂಚೆ ಕಚೇರಿಯಲ್ಲಿಯೇ ಇ-ಕೆವೈಸಿ ಅಪ್‌ಡೇಟ್‌ಗೆ ಸಂಬಂಧಿಸಿದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ಹೇಳಿದರು.
ಅಲುಗಾಡುತ್ತಿರುವ ಶಾಲೆಯ ಬಾಗಿಲು:
ಹಳೆನೇರೆಂಕಿ ಹಾಗೂ ಕುಂಡಾಜೆ ಸರಕಾರಿ ಶಾಲೆಯ ಬಾಗಿಲುಗಳು ಅಲುಗಾಡುತ್ತಿದ್ದು ಇದರ ದುರಸ್ತಿಗೆ ಪಂಚಾಯತ್‌ನಿಂದ ಕ್ರಮ ಕೈಗೊಳ್ಳಬೇಕೆಂದು ಶಾಲೆಯ ಶಿಕ್ಷಕರು ಮನವಿ ಮಾಡಿದರು. ಕುಂಡಾಜೆ ಶಾಲೆಯ ಸಹಶಿಕ್ಷಕಿ ಪ್ರೇಮ ಅವರು ಮಾತನಾಡಿ, ಶಾಲೆಯ ಶೌಚಾಲಯಕ್ಕೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಶಾಲೆಯಲ್ಲಿ ಬಡವಿದ್ಯಾರ್ಥಿಗಳೇ ಇದ್ದು ಅವರ ಪೋಷಕರಿಂದ ಹಣ ಹೊಂದಿಸಿ ನೀರಿನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಪಂಚಾಯತ್‌ನಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷೆ ಮಾಲತಿ, ಪಿಡಿಒ ಲಲಿತಾ ಅವರು ತಿಳಿಸಿದರು. ಹಳೆನೇರೆಂಕಿ ಸರಕಾರಿ ಶಾಲೆಯೂ ಪ್ರಸ್ತುತ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದೆ. ಶಾಲೆಗೆ ಕೊಠಡಿ, ರಂಗಮಂದಿರದ ಅವಶ್ಯಕತೆ ಇದ್ದು ಹೆಚ್ಚಿನ ಅನುದಾನ ಒದಗಿಸಿಕೊಡುವಂತೆ ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ ಅವರು ಹೇಳಿದರು.
ರಾಮಕುಂಜ ಶಾಲೆಯ ಕೈ ತೊಳೆಯುವ ಘಟಕಕ್ಕೆ ಹಾನಿ:
ರಾಮಕುಂಜ ಸರಕಾರಿ ಶಾಲೆಯಲ್ಲಿ ಹೊಸದಾಗಿ ಮಾಡಿದ್ದ ಕೈ ತೊಳೆಯುವ ಘಟಕದ ಸಿಮೆಂಟ್‌ಗಳನ್ನು ಯಾರೋ ಕಿತ್ತುಹಾಕಿ ಹಾನಿಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವು ಎಂದು ಸಿಆರ್‌ಪಿಯೂ ಆಗಿರುವ ಶಾಲೆಯ ಮುಖ್ಯಶಿಕ್ಷಕ ಮಹೇಶ್ ಅವರು ಹೇಳಿದರು. ಶಾಲಾ ಅವಧಿಯ ಬಳಿಕ ಶಾಲಾ ಆವರಣಕ್ಕೆ ಪ್ರವೇಶ ನಿರ್ಬಂಧಿಸಲು ಎಸ್‌ಡಿಎಂಸಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಲತಿ ಎನ್.ಕೆ.ಅವರು ಮಾತನಾಡಿ, ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಂಚಾಯತ್‌ಗೆ ಬರುವ ಸೀಮಿತ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಅನುದಾನ ಶಾಲೆಗಳಿಗೆ ನೀಡುತ್ತಿದ್ದೇವೆ ಎಂದರು. ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಲಲಿತಾ ಅವರು ಸ್ವಾಗತಿಸಿ, ಕೆಡಿಪಿ ಸಭೆಯ ಉದ್ದೇಶದ ಕುರಿತು ತಿಳಿಸಿದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ವ್ಯವಸ್ಥಾಪಕ ಆನಂದ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಉಮಾವತಿ, ಆರೋಗ್ಯ ಸಹಾಯಕಿ ಜಲಜ, ರಾಮಕುಂಜ ಹಾ.ಉ.ಸಹಕಾರಿ ಸಂಘದ ಕಾರ್ಯದರ್ಶಿ ಚಿತ್ತರಂಜನ್, ಪಶು ಆಸ್ಪತ್ರೆಯ ಸಿಬ್ಬಂದಿ ಸೂಸಮ್ಮ ಮತ್ತಾಯಿ ಅವರು ಮಾಹಿತಿ ನೀಡಿದರು.
ಗ್ರಾ.ಪಂ.ಸದಸ್ಯರಾದ ಕೇಶವ ಗಾಂಧಿಪೇಟೆ, ಬಿ.ಸೂರಪ್ಪ ಬರಮೇಲು, ಸುಚೇತಾ, ಸುಜಾತ ಕೆ., ಭವಾನಿ, ಆಯಿಷಾಶರೀಫ್, ಮೆಸ್ಕಾಂ ಪವರ್‌ಮ್ಯಾನ್‌ಗಳಾದ ವಿಶ್ವನಾಥ, ಸಿದ್ದಪ್ಪ ಬಸ್ಸಪ್ಪ, ಷಣ್ಮುಖ ಹೆಚ್.ಹೆಚ್., ಆರೋಗ್ಯ ಸಹಾಯಕಿ ಲಲಿತ, ಗ್ರಾಮ ಸಹಾಯಕ ಲಿಂಗಪ್ಪ ಗೌಡ, ಅಂಗನವಾಡಿ ಕಾರ್ಯಕರ್ತೆ ಯಮುನಾ ಕೆ., ಗ್ರಂಥಾಲಯ ಮೇಲ್ವಿಚಾರಕಿ ಜಾನಕಿ ಕೆ., ಪುನರ್‌ವಸತಿ ಕಾರ್ಯಕರ್ತೆ ಚೇತನಾ ಕೆ., ಹಳೆನೇರೆಂಕಿ ಹಾ.ಉ.ಸ.ಸಂಘದ ಕಾರ್ಯದರ್ಶಿ ಕಾವ್ಯಶ್ರೀ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.
ಜಾನುವಾರು/ಆಡುಗಳನ್ನು ರಸ್ತೆಗೆ ಬಿಡದಂತೆ ಮನವಿ:
ಪಿಡಿಒ ಲಲಿತಾ ಅವರು ಮಾತನಾಡಿ, ಜಾನುವಾರು, ಆಡುಗಳು ರಸ್ತೆಯಲ್ಲಿ ಓಡಾಡುತ್ತಿದ್ದು ವಾಹನ ಓಡಾಟಕ್ಕೆ ಅಡ್ಡಿಯಾಗಿ, ಅಪಘಾತಕ್ಕೂ ಕಾರಣವಾಗುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದಲೂ ಗ್ರಾಮ ಪಂಚಾಯಿತಿಗೆ ಸೂಚನೆ ಬಂದಿದೆ. ಆದ್ದರಿಂದ ಜಾನುವಾರು, ಆಡುಗಳನ್ನು ಸಾಕಾಣಿಕೆ ಮಾಡುವವರು ರಸ್ತೆಗೆ ಬಿಡಬಾರದು. ರಸ್ತೆಯಲ್ಲಿ ಜಾನುವಾರುಗಳು ಓಡಾಡುತ್ತಿರುವುದು ಕಂಡುಬಂದಲ್ಲಿ ಅವುಗಳನ್ನು ಗೋಶಾಲೆಗೆ ಒಪ್ಪಿಸಲಾಗುವುದು ಎಂದು ಹೇಳಿದರು.