ಕಡಬ: ತಹಸೀಲ್ದಾರ್ ರಮೇಶ್ ಬಾಬು ಬೀಳ್ಕೊಡುಗೆ

0

ಕಂದಾಯ ಇಲಾಖೆ ಹಸನ್ಮುಖಿ ಸೇವೆ ನೀಡುವಂತಾಗಬೇಕು

ಕಡಬ: ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಸಾರ್ವಜನಿಕರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಹಸನ್ಮುಖಿ ಸೇವೆ ನೀಡಿದಾಗ ಮಾತ್ರ ನಾವು ಮಾಡುವ ಸೇವೆ ಸಾರ್ಥಕವಾಗುತ್ತದೆ ಎಂದು ಕಡಬದಿಂದ ಗುಂಡ್ಲುಪೇಟೆಗೆ ವರ್ಗಾವಣೆಗೊಂಡ ತಹಸೀಲ್ದಾರ್ ಟಿ.ರಮೇಶ್ ಬಾಬು ಹೇಳಿದರು.


ಕಡಬ ತಾಲೂಕು ಆಡಳಿತ ಸೌಧದಲ್ಲಿ ಕಚೇರಿ ಸಿಬ್ಬಂದಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಂದಾಯ ಇಲಾಖೆಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಕೇಳಿಕೊಂಡು ಬರುವಾಗ ಅವರಿಗೆ ಕಾನೂನು ಚೌಕಟ್ಟಿನೊಳಗೆ ಕೆಲಸ ಮಾಡಿಕೊಡಬೇಕು, ಏನೇ ಮಾಡಿದರೂ ಶೇ 90 ರಷ್ಟು ಕಾರ್ಯಗಳು ಮಾತ್ರ ಮಾಡಿಕೊಡಲು ಸಾಧ್ಯ, ಇನ್ನು ಹತ್ತು ಶೇ ಸಾಧ್ಯವಾಗುವುದಿಲ್ಲ. ಆದಷ್ಟು ಕಾರ್ಯಗಳು ನಮ್ಮ ಹಂತದಲ್ಲೇ ಮುಗಿಯಬೇಕು, ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುವ ಪರಿಪಾಠವಿರಬಾರದು, ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸತಾಯಿಸುವ ಕಾರ್ಯ ಮಾಡಬಾರದು. ನಮಗೆ ಸಮಾಜ ಸೇವೆ ಮಾಡಲು ಕೊಟ್ಟ ಅವಕಾಶವನ್ನು ಒಳ್ಳೆಯ ರೀತಿಯಲ್ಲಿ ಮಾಡಿದಾಗ ದೇವರ ದಯೆ ಇರುತ್ತದೆ. ನನ್ನ ಹತ್ತು ತಿಂಗಳ ಅವಧಿಯಲ್ಲಿ ಇಲ್ಲಿನ ಎಲ್ಲಾ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಲು ಸಹಕಾರ ನೀಡಿದ್ದಾರೆ. ಅವರಗೆ ನಾನು ಚಿರಋಣಿಯಾಗಿದ್ದೇನೆ ಎಂದರು.


ಪ್ರಭಾರ ತಹಸೀಲ್ದಾರ್ ಆಗಿ ಆಗಮಿಸಿರುವ ಸುಳ್ಯ ತಹಸೀಲ್ದಾರ್ ಎಂ.ಮಂಜುನಾಥ್ ಸಭೆಯ ಅಧ್ಯಕ್ಷತೆವಹಿಸಿ ಶುಭ ಹಾರೈಸಿದರು. ಕಂದಾಯ ನಿರೀಕ್ಷಕ ಪೃಥ್ವಿರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಸೀಲ್ದಾರ್‌ಗಳಾದ ಮನೋಹರ ಕೆ.ಟಿ, ಗೋಪಾಲ್ ಕಲ್ಲುಗುಡ್ಡೆ, ಆಹಾರ ನಿರೀಕ್ಷಕ ಶಂಕರ್, ಭೂಮಾಪನಾ ಇಲಾಖೆಯ ಸೂಪರ್‌ವೈಸರ್ ಚಂದ್ರಶೇಖರ್, ಸರ್ವೆಯರ್ ಗಿರಿ ಗೌಡ, ಕಡಬ ತಾಲುಕು ಪರ್ತಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ, ಗ್ರಾಮಕರಣಿಕರಾದ ಸುನಿಲ್ ಹಾಗೂ ಬಸವರಾಜ್, ಸಿಬ್ಬಂದಿ ಉದಯಕುಮಾರ್ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಮನೋಹರ್ ಕೆ.ಟಿ ಸ್ವಾಗತಿಸಿದರು. ಗೋಪಾಲ್ ಕಲ್ಲುಗುಡ್ಡೆ ವಂದಿಸಿದರು. ಸಿಬ್ಬಂದಿ ಕೌಶಿಕ್ ಕುಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here