ಆರೋಗ್ಯದ ಮೇಲೆ ದುಷ್ಪರಿಣಾಮ-ನಾಗರಿಕರ ಆತಂಕ
ಪುತ್ತೂರು:ಕೊಳೆತ ತ್ಯಾಜ್ಯಗಳನ್ನು ನದಿಗೆ ಸುರಿಯುವುದು, ಶೌಚಾಲಯದ ನೀರನ್ನು ನದಿಗೆ ಬಿಡುವ ಘಟನೆಗಳು ನಡೆಯುತ್ತಿರುವುದು ಒಂದೆಡೆಯಾದರೆ ಬನ್ನೂರು ಡಂಪಿಂಗ್ ಯಾರ್ಡ್ನಿಂದ ಹೊರ ಬರುವ ಕಪ್ಪು ಬಣ್ಣ ಮಿಶ್ರಿತ ತ್ಯಾಜ್ಯ ನೀರು ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಕಿರು ಸೇತುವೆ ಮೂಲಕ ಹಾದು ಹೋಗುವ ತೋಡಿನಲ್ಲಿ ಕಾಣಿಸುತ್ತಿದೆ.ಈ ನೀರು ಕುಮಾರಧಾರ ಹೊಳೆಗೆ ಸೇರುತ್ತಿರುವುದರಿಂದ ನದಿ ನೀರು ಕಲುಷಿತಗೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕುರಿತು ನಾಗರಿಕರು ಆತಂಕಿತರಾಗಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶವನ್ನು ಉಲ್ಲಂಸಿ, ಡಂಪಿಂಗ್ ಯಾರ್ಡ್ನ ತ್ಯಾಜ್ಯ ನೀರನ್ನು ಪಕ್ಕದ ಸಣ್ಣ ತೋಡಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತೋಡಿನಲ್ಲಿ ಹರಿಯುವ ಕಪ್ಪು ಮಿಶ್ರಿತ ನೀರು ಹಲವು ಕೃಷಿ ತೋಟಗಳ ನಡುವೆ ಮತ್ತು ಮನೆಗಳ ಪಕ್ಕದಲ್ಲಿ ಹರಿಯುತ್ತಿರುವುದರಿಂದ ಹಲವರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಇದಕ್ಕಿಂತಲೂ ಮುಖ್ಯವಾಗಿ, ಕಪ್ಪು ಮಿಶ್ರಿತ ತ್ಯಾಜ್ಯ ನೀರು ಕುಮಾರಧಾರ ಹೊಳೆಗೆ ಸೇರುತ್ತಿದೆ.ಅಲ್ಲಿಂದ ಅದು ನೆಕ್ಕಿಲಾಡಿ ಡ್ಯಾಮ್ ಮೂಲಕ ಮತ್ತೆ ಸ್ಥಾವರಕ್ಕೆ ಬಂದು ಅಲ್ಲಿ ಶುದ್ದೀಕರಣಗೊಂಡು ಪುತ್ತೂರು ಪಟ್ಟಣಕ್ಕೆ ಸರಬರಾಜು ಆಗುತ್ತದೆ.ಇದೇ ನೀರನ್ನು ಕುಡಿಯಲು ಬಳಸುವುದರಿಂದ ಜನರಲ್ಲಿ ಇನ್ನಷ್ಟು ಆತಂಕ ಹುಟ್ಟಿಕೊಂಡಿದೆ.ನೆಕ್ಕಿಲಾಡಿ ರೇಚಕ ಸ್ಥಾವರದಲ್ಲಿ ನೀರು ಶುದ್ದೀಕರಣಗೊಂಡ ಬಳಿಕ ವಿತರಣೆಯಾಗುವುದಾದರೂ ಜನರು ಆತಂಕ ವ್ಯಕ್ತಪಡಿಸುತ್ತಿರುವುದಂತೂ ಸತ್ಯವಾಗಿದ್ದು ಈ ಕುರಿತು ಇದೀಗ ಸಾರ್ವಜನಿಕ ವಲಯಲದಲ್ಲಿಯೂ ಚರ್ಚೆ ನಡೆಯುತ್ತಿದೆ.
ಕ್ರಮಕೈಗೊಳ್ಳಲಾಗಿದೆ
ಡಂಪಿಂಗ್ ಯಾರ್ಡ್ನಲ್ಲಿ ತ್ಯಾಜ್ಯ ಸಂಗ್ರಹದ ಘಟಕ ತುಂಬಿದ್ದು ಅದನ್ನು ಬಿಡಿಸಿ ಕೊಡಲು ಈಗಾಗಲೇ ಸೂಚಿಸಿದ್ದೇನೆ.ಅಲ್ಲಿ ತ್ಯಾಜ್ಯ ನೀರು ತುಂಬಿರುವುದು ಗಮನಕ್ಕೆ ಬಂದಿದ್ದು, ಅದನ್ನು ಅಲ್ಲಿಂದ ಹೊರಗೆ ಹೋಗಲು ಬಿಡದಂತೆ ಕ್ರಮ ವಹಿಸಲಾಗಿದೆ-
ಮಧು ಎಸ್ ಮನೋಹರ್, ಪೌರಾಯುಕ್ತರು ಪುತ್ತೂರು ನಗರಸಭೆ