ಹಿರೆಬಂಡಾಡಿ: ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ನಡೆಯಲಿರುವ 2023-24ನೇ ಸಾಲಿನ ಪುತ್ತೂರು ಹಾಗೂ ಕಡಬ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ “ಕ್ರೀಡಾಮೃತ-2023″ರ ಲಾಂಛನ, ಮನವಿ ಪತ್ರ ಬಿಡುಗಡೆ ಮತ್ತು ಪೋಷಕರ ಸಭೆಯ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕ್ರೀಡಾಮೃತ-2023ರ ಲಾಂಛನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.,ರವರು ಬಿಡುಗಡೆಗೊಳಿಸಿದರು. ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ನೆಹರುತೋಟರವರು ಡಿಜಿಟಲ್ ಲಾಂಛನವನ್ನು ಪರದೆಯಲ್ಲಿ ಅನಾವರಣಗೊಳಿಸಿ ಶುಭಹಾರೈಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಭವಾನಿಯವರು ಕ್ರೀಡಾಕೂಟ ಸಮಿತಿಯ ಮನವಿ ಪತ್ರ ಬಿಡುಗಡೆ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಭರಿತ, ಮೌಲ್ಯಯುತ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕಲಿಕೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರವರು ಕ್ರೀಡಾಲಾಂಛನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಕ್ರೀಡಾಕೂಟಕ್ಕೆ ಸಹಕಾರ ಯಾಚಿಸಿ, ಚಾಂಪಿಯನ್‌ಶಿಪ್ ಟ್ರೋಫಿ?ಯನ್ನು ತಾನೇ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು. ಆರ್ಥಿಕ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ದರ್ಬೆಯವರು ಮಾತನಾಡಿ, ನಮ್ಮೂರಲ್ಲಿ ಜರಗುವ ಈ ಕಾರ್ಯಕ್ರಮಕ್ಕೆ ಎಲ್ಲರೂ ತನು ಮನ ಧನದ ಸಹಕಾರ ನೀಡುವಂತೆ ವಿನಂತಿಸಿದರು.
ಶಾಲಾಭಿವೃದ್ಧಿ ಸಮಿತಿಯ ನೂತನ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳ, ಸದಸ್ಯರಾದ ಹಮೀದ್, ಹೇಮಾವತಿ, ಲಕ್ಷ್ಮೀಶ ನಿಡ್ಡೆಂಕಿ, ಗ್ರಾ.ಪಂ.ಸದಸ್ಯೆ ಗೀತಾ ದಾಸರಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಹರಿಕಿರಣ್ ಕೆ., ಸ್ವಾಗತಿಸಿ ಹೂ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ.ಯವರು ಎಲ್ಲರ ಸಹಕಾರದೊಂದಿಗೆ ಈ ಕ್ರೀಡಾಕೂಟ ಸಾಕಾರಗೊಳ್ಳಲಿ ಎಂದು ಹೇಳಿ ವಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ ಕೆ.ರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಮಲ್ಲಿಕಾ ಐ, ವಸಂತ ಕುಮಾರ್ ಪಿ, ಮನೋಹರ ಎಂ ಹಾಗೂ ಆರತಿ ವೈ ಡಿ ಸಹಕರಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.