ನಿಡ್ಪಳ್ಳಿ ಗ್ರಾಮ ಪಂಚಾಯತ್ ಗ್ರಾಮ ಸಭೆ

0

.

ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಾಗದಿದ್ದರೆ ಗ್ರಾಮ ಸಭೆ ಯಾಕೆ..? -ಗ್ರಾಮಸ್ಥರಿಂದ ತೀವ್ರ ಆಕ್ರೋಶ

 ನಿಡ್ಪಳ್ಳಿ :ನಿಡ್ಪಳ್ಳಿ ಗ್ರಾಮ ಪಂಚಾಯತಿನ 2023- 24 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಅಧ್ಯಕ್ಷೆ ಗೀತಾ.ಡಿ ಇವರ ಅಧ್ಯಕ್ಷತೆಯಲ್ಲಿ ಆ.9 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಮೆಸ್ಕಾಂ ಗ್ರಾಮಾಂತರ ಉಪ ವಿಭಾಗ ಪುತ್ತೂರು ಇದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಸಂತ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದರು.

 ವರದಿ ವಾಚನ ಮತ್ತು ವಾರ್ಡ್ ಸಭೆಯ ಪ್ರಸ್ತಾವನೆ ಮುಗಿದ ತಕ್ಷಣ ಪಟ್ಟು ಹಿಡಿದ ಗ್ರಾಮಸ್ಥರು ಯಾವ ಯಾವ ಇಲಾಖೆಯಿಂದ ಅಧಿಕಾರಿಗಳು ಹಾಜರಾಗಿದ್ದಾರೆ ಯಾವ ಇಲಾಖೆಯಿಂದ ಹಾಜರಾಗಿಲ್ಲ ಎಂದು ಸಭೆಯ ಗಮನಕ್ಕೆ ತರಬೇಕು ಎಂದು ಪಟ್ಟು ಹಿಡಿದರು. ಗ್ರಾಮಸ್ಥರಾದ ಸತ್ಯನಾರಾಯಣ ರೈ , ಕೆ.ಎನ್.ಪಾಟಾಳಿ ಮುಂತಾದವರು ಅಗತ್ಯವಿರುವ ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ, ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಇಲ್ಲಿ ಹಾಜರಾಗದಿದ್ದರೆ ಗ್ರಾಮ ಸಭೆ ಯಾಕೆ ಎಂದು ಆಕ್ರೋಶ ವ್ಯಕ್ತ ಪಡಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.ಆಗ ಅಧ್ಯಕ್ಷರು ಮಾತನಾಡಿ ಎಲ್ಲಾ ಇಲಾಖೆಗೆ ನೋಟಿಸ್ ನೀಡಲಾಗಿದೆ ಎಂದರು. ‌

ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ ಕೆಲವು ಇಲಾಖೆಯ ಅಧಿಕಾರಿಗಳು ಈಗಾಗಲೇ ಹಾಜರಾಗಿದ್ದಾರೆ. ಸಭೆ ನಡೆಯುತ್ತಿರುವಾಗ ಉಳಿದವರು ಬಂದು ಸೇರಿಕೊಳ್ಳ ಬಹುದು ಎಂದರು. ಮಾರ್ಗದರ್ಶಿ ಅಧಿಕಾರಿಯವರು ಮಾತನಾಡಿ ಎಲ್ಲಾ ಇಲಾಖೆಗೆ ತಿಳಿಸಿದ್ದಾರೆ. ಏನೋ ಕೆಲವು ಕಾರಣಗಳಿಂದ ಕೆಲವು ಅಧಿಕಾರಿಗಳು ಬಾರದೆ ಇರಬಹುದು. ಬಾರದ ಅಧಿಕಾರಿಗಳಿಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿ ಸಭೆ ಮುಂದುವರಿಸಲಾಯಿತು.

ಗ್ರಾಮದ ಅಲ್ಲಲ್ಲಿ ಸೋಲಾರ್ ದಾರಿ ದೀಪ ಉರಿಯುತ್ತಿಲ್ಲ
ವರದಿ ಮಂಡನೆ ಆದ ತಕ್ಷಣ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಅಲಿಕುಂಞ ಮತ್ತು ಆಸೀಫ್ ರವರು ದಾರಿ ದೀಪ ದುರಸ್ತಿ ಖರ್ಚು ಎಂದು ಖರ್ಚಿನಲ್ಲಿ ತೋರಿಸಿದ್ದಿರಿ ಆದರೆ ತಂಬುತ್ತಡ್ಕ, ಕರ್ನಪ್ಪಾಡಿ ಪರಿಸರದಲ್ಲಿ ದಾರಿದೀಪ ಉರಿಯುತ್ತಿಲ್ಲ ಯಾಕೆ ಎಂದರು.ಇದುವರೆಗೆ ದುರಸ್ತಿ ಮಾಡಿದ ಖರ್ಚನ್ನು ತೋರಿಸಲಾಗಿದೆ.ಉರಿಯದಿರುವ ದೀಪಗಳನ್ನು ಮುಂದೆ ಸಮರ್ಪಕವಾಗಿ ದುರಸ್ತಿ ಮಾಡಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದಾಗ ಎಲ್ಲವನ್ನು ಗಮನ ಹರಿಸುತ್ತೇವೆ ಎಂದು ಉಪಾಧ್ಯಕ್ಷರು ಹೇಳಿದರು.

 ಖಾಯಂ ನೆಲೆಯಲ್ಲಿ ವೈದ್ಯರ ನೇಮಿಸಲು ಸರಕಾರಕ್ಕೆ ಬರೆಯುವ ಕೆಲಸ ಆಗಲಿ
ಆರೋಗ್ಯ ಇಲಾಖೆಯಿಂದ ಕಾರ್ಯಕರ್ತೆ ಕುಸುಮಾವತಿ. ಎ.ವಿ ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥ ಜಯಂತ ನಾಯ್ಕ  ಪಾಣಾಜೆ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ಬಡವರಿಗೆ ಬಹಳ ತೊಂದರೆಯಾಗಿದ್ದು ಖಾಸಗಿ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ ಆದುದರಿಂದ ಖಾಯಂ ನೆಲೆಯಲ್ಲಿ ವೈದ್ಯರನ್ನು ನೇಮಿಸಲು ಒತ್ತಾಯಿಸಿದಾಗ ಮಾತನಾಡಿದ ಕಾರ್ಯಕರ್ತೆ ಈಗಾಗಲೇ ಈಶ್ವರಮಂಗಲದ ಕೇಂದ್ರದ ಡಾ.ನಿಖಿಲ್ ಚಾರ್ಜ್ ತೆಗೆದುಕೊಂಡು ಬರುತ್ತಾರೆ. ಇಲ್ಲಿ ಬಂದವರು ಕೇವಲ ಒಂದು ವರ್ಷ ಮಾತ್ರ ಇರುತ್ತಾರೆ ಎಂದರು. ಉತ್ತರಿಸಿದ ಅಧ್ಯಕ್ಷರು ಖಾಯಂ ಆಗಿ ವೈದ್ಯರನ್ನು ನೇಮಿಸಲು ಸರಕಾರಕ್ಕೆ ಬರೆಯಲು ನಿರ್ಣಯಿಸುವ ಎಂದು ಹೇಳಿದರು.

ಶಿಕ್ಷಣ ಇಲಾಖೆಗೆ ಬರೆಯುವುದು  
ಶಿಕ್ಷಣ ಇಲಾಖೆಯ ವತಿಯಿಂದ ಸಿ.ಅರ್.ಪಿ ಪರಮೇಶ್ವರಿ ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥ ಅಸೀಫ್ ಮಾತನಾಡಿ ಗ್ರಾಮದಲ್ಲಿ 3 ಪ್ರಾಥಮಿಕ ಶಾಲೆ ಇದೆ ಆದರೆ ಒಂದು ಕೂಡ ದೈಹಿಕ ಶಿಕ್ಷಣ ಶಿಕ್ಷಕರಿಲ್ಲ ಒಂದು ಶಿಕ್ಷಕರನ್ನಾದರೂ ನೀಡಲಿ ಎಂದು ಹೇಳಿದಾಗ ಉತ್ತರಿಸಿದ ಸಿ.ಅರ್.ಪಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಕೊಡಬೇಕಾದರೆ ಶಾಲೆಯಲ್ಲಿ 200 ಮಕ್ಕಳು ಇರಬೇಕು ಎಂದರು. ನಿಮ್ಮ ಬೇಡಿಕೆಯನ್ನು ಇಲಾಖೆಯ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಈ ಬಗ್ಗೆ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸುವ ಎಂದು ಉಪಾಧ್ಯಕ್ಷರು ಹೇಳಿದರು. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

 ಸಮಾಜ ಕಲ್ಯಾಣ ಇಲಾಖೆ ವ್ಯಕ್ತಿಗತವಾದ ಇಲಾಖೆಯೆ..?
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಧಿಕಾರಿ ಸವಿತಾ.ಕೆ.ಪಿ ಮಾಹಿತಿ ನೀಡುತ್ತಿದ್ದ ವೇಳೆ ಗ್ರಾಮಸ್ಥ ಕೆ.ಎನ್.ಪಾಟಾಳಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯಿಂದ ಚೂರಿಪದವು ರಸ್ತೆ ದುರಸ್ತಿಗೆ ಅನುದಾನ ನೀಡಿ ಕೆಲಸ ಆರಂಭಿಸಿ ಅರ್ಧದಲ್ಲಿ ನಿಂತಿದೆ. ಅಲ್ಲದೆ ಕಾಲನಿ ಮುಂತಾದ ಗ್ರಾಮದ ಅಭಿವೃದ್ಧಿಗೆ ಇನ್ನೀತರ ಮೂಲ ಸೌಕರ್ಯ ಒದಗಿಸಲು ಈ ಇಲಾಖೆಯಿಂದ ಹಿಂದೆ ಅನುದಾನ ಬಿಡುಗಡೆ ಆಗುತ್ತಿತ್ತು.ಕೇವಲ ವ್ಯಕ್ತಿಗತವಾದ ಇಲಾಖೆ ಅಲ್ಲವಲ್ಲ ಎಂದು ಹೇಳಿ ಈಗ ಯಾಕೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

 ಅಂಬೇಡ್ಕರ್ ಭವನ ಕಾಮಗಾರಿ ಪೂರ್ತಿ ಗೊಳಿಸಿ
ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಆರಂಭಿಸಿ ಈಗ ಅರ್ಧದಲ್ಲಿ ನಿಂತಿದೆ. ಕಾರಣವೆನೆಂದು ಗೊತ್ತಿಲ್ಲ ಎಂದು ಗ್ರಾಮಸ್ಥ ಕೃಷ್ಣ.ಡಿ ಸಭೆಯ ಗಮನಕ್ಕೆ ತಂದರು.ತಕ್ಷಣ ಅದರ ನಿರ್ಮಾಣ ಕಾರ್ಯ ಮುಂದುವರಿಸುವಂತೆ ಒತ್ತಾಯಿಸಿದರು. ಅಲ್ಲದೆ ಅಲ್ಲಿ ಕಾದಿರಿಸಿದ ಉಳಿದ ಜಾಗದಲ್ಲಿ ಅಂಬೇಡ್ಕರ್ ಹೆಸರಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಿ ಎಂದು ಹೇಳಿದಾಗ ಆ ಬಗ್ಗೆ ಇಲಾಖೆಗೆ ಬರೆಯುವ ಎಂದು ಉಪಾಧ್ಯಕ್ಷರು ಹೇಳಿದರು.

 ಇಲ್ಲಿ ಸಬ್ ಸ್ಟೇಷನ್ ಮಾಡುವ ಉದ್ದೇಶ ಇದೆ
ಮೆಸ್ಕಾಂ ಇಲಾಖೆಯಿಂದ ಬೆಟ್ಟಂಪಾಡಿ ಶಾಖೆಯ ಜೆ.ಇ ಪುತ್ತುರವರು ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ  ಕೆಲವು ದಿನಗಳಿಂದ ಗ್ರಾಮದಲ್ಲಿ ಆಗಾಗ ಒಂದು ತಾಸು ವಿದ್ಯುತ್ ಕಡಿತ ಗೊಳ್ಳುತ್ತಿದೆ.ಮಳೆಗಾಲದಲ್ಲಿಯೆ ಈ ರೀತಿ ಲೋಡ್ ಶೆಡ್ಡಿಂಗ್ ಆದರೆ ಹೇಗೆ ಎಂದು  ಗ್ರಾಮಸ್ಥ ಗಂಗಾಧರ ಸಿಎಚ್ ಪ್ರಶ್ನಿಸಿದರು. ಉತ್ತರಿಸಿದ ಜೆ.ಇ ಈಗ ಹೆಚ್ಚಿನ ವಿದ್ಯುತ್ ಬಳಕೆಯಿಂದ ಸರಬರಾಜಿನಲ್ಲಿ ಸ್ವಲ್ಪ ಅಡಚಣೆ ಉಂಟಾಗಿದ್ದು ದಿನ ಒಂದು ಗಂಟೆ ಈ ರೀತಿ ಆಗುತ್ತಿದ್ದು ಮುಂದಿನ ದಿನದಲ್ಲಿ ಸರಿ ಹೋಗುತ್ತದೆ ಎಂದರು. ಕೆಲವು ದಿನ ಮುಂಜಾನೆ ಹೋಗುತ್ತದೆ ಇದರಿಂದ ಶಾಲೆ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಸತ್ಯನಾರಾಯಣ ರೈ ಹೇಳಿದರು.ಇಲ್ಲಿ ಸಬ್ ಸ್ಟೇಷನ್ ಮಾಡುವ ಹಿಂದಿನ ಪ್ರಸ್ತಾಪ ಏನಾಗಿದೆ ಎಂದು ಗ್ರಾಮಸ್ಥ ಗಂಗಾಧರ ಸಿ.ಎಚ್ ಕೇಳಿದಾಗ ಬೆಟ್ಟಂಪಾಡಿ ಅಥವಾ ನಿಡ್ಪಳ್ಳಿ ಪರಿಸರದಲ್ಲಿ ಸುಮಾರು ಒಂದು ಎಕ್ರೆ ಸರಕಾರಿ ಜಾಗ ಸಿಕ್ಕಿದರೆ ಸಬ್ ಸ್ಟೇಷನ್ ಮಾಡುವ ಉದ್ದೇಶ ಇಲಾಖೆ ಹೊಂದಿದೆ.ಹೀಗಾದರೆ ಈ ಪರಿಸರದಲ್ಲಿ ವಿದ್ಯುತ್ ಸಮಸ್ಯೆ ಸರಿಯಾದಿತು ಎಂದು ಜೆ.ಇ ಹೇಳಿದರು.  ಇಲಾಖೆಗೆ ಸಂಬಂಧಿಸಿದ ದೂರುಗಳಿದ್ದರೆ 1912 ಕರೆ ಮಾಡ ಬಹುದು ಎಂದು ಹೇಳಿದರು.

  ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಒಂದು ವರ್ಷದಿಂದ  ಸಂಗ್ರಹಿಸಿದ್ದ ಪ್ಲಾಸ್ಟಿಕ್ ಕಸಗಳು ಇದ್ದು ಅದನ್ನು ವಿಲೇವಾರಿ ಮಾಡುವಂತೆ ಶಿಕ್ಷಕಿ ಚಂದ್ರಕಲಾ ಒತ್ತಾಯಿಸಿದರು ಇದಕ್ಕೆ ಉತ್ತರಿಸಿದ ಪಿಡಿಒ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

      ಜಲಜೀವನ್ ಮಿಷನ್ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹಳೆಯ ಪೈಪು ಲೈನ್ ಗಳಿಗೆ ಇವರು ಪೈಪುಗಳನ್ನು ಜೋಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಅಲ್ಲದೆ ನೀರು ಕೂಡ ಸರಿಯಾಗಿ ಬರುತ್ತಿಲ್ಲ ಮಾತ್ರವಲ್ಲ ಕಾಮಗಾರಿ ಪೂರ್ತಿಯಾಗದೆ ಬಾಕಿ ಆಗಿದೆ ಎಂದರು. ಜಲಜೀವನ್ ಮಿಷನ್ ಕೇಂದ್ರ ಸರಕಾರದ ಯೋಜನೆಯಾಗಿದ್ದು ಇದರ ಬಗ್ಗೆ ಗಮನ ಹರಿಸಿ  ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಅವ್ಯವಹಾರ ನಡೆಸಿದ್ದರೆ ಈ ಬಗ್ಗೆ ಸೂಕ್ತ ಕ್ರಮಕ್ಕೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡುವ ಎಂದು ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್ ಸಭೆಗೆ ತಿಳಿಸಿದರು. 

 ಪಂಚಾಯಿತ್ ಉಪಾಧ್ಯಕ್ಷ ವೆಂಕಟ್ರಮಣ ಬೋರ್ಕರ್, ಸದಸ್ಯರಾದ ಅವಿನಾಶ್ ರೈ, ಬಾಲಚಂದ್ರ ನಾಯ್ಕ ,ಸತೀಶ್ ಶೆಟ್ಟಿ, ತುಳಸಿ, ನಂದಿನಿ ಅರ್.ರೈ, ಸೀತಾ ಉಪಸ್ಥಿತರಿದ್ದರು.

   ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಡಿಪಿಒ ಕಚೇರಿ ಮೆಲ್ವೀಚಾರಕಿ ಜಲಜಾಕ್ಷಿ, ಪಾಣಾಜೆ ಪಶುವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಂ.ಪಿ. ಪ್ರಕಾಶ್, ಪೊಲೀಸ್ ಅಧಿಕಾರಿ ಗಿರೀಶ್, ಅರಣ್ಯ ಇಲಾಖೆಯ ಗಸ್ತು ಅರಣ್ಯ ಪಾಲಕ ನಿಂಗರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪವಿತ್ರ ಸಿಂದ್ಯಾಳ ಮಾಹಿತಿ ನೀಡಿದರು.

 ಪಿಡಿಒ ಸಂಧ್ಯಾಲಕ್ಷ್ಮಿ ಸ್ವಾಗತಿಸಿ, ಸಿಬ್ಬಂದಿ ರೇವತಿ ವರದಿ ವಾಚಿಸಿದರು.ಸಿಬ್ಬಂದಿ ಸಂಶೀನಾ ವಾರ್ಡ್ ಸಭೆಯ ಪ್ರಸ್ತಾವನೆ ಮಾಡಿದರು.ಸಿಬ್ಬಂದಿಗಳಾದ ವಿನೀತ್ ಕುಮಾರ್, ಜಯಕುಮಾರಿ ಸಹಕರಿಸಿದರು. ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು. 

ಗೈರು ಹಾಜರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ
ಪ್ರಮುಖ ಇಲಾಖೆಗಳಾದ ಕಂದಾಯ, ಕೃಷಿ, ತೋಟಗಾರಿಕೆ,ಪಿಡಬ್ಲೂಡಿ ಇಂಜಿನಿಯರ್ ಇಲಾಖೆ, ಆಹಾರ ಇಲಾಖೆ   ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮಾರ್ಗದರ್ಶಿ ಅಧಿಕಾರಿ ವಸಂತ ಕುಮಾರ್  ಸಭೆಗೆ ತಿಳಿಸಿದರು.

LEAVE A REPLY

Please enter your comment!
Please enter your name here