ಪುತ್ತೂರು: ಈಶ್ವರಮಂಗಲ ಭಾಗಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಪರವಾಗಿ ಉದ್ಯಮಿ ಅಬ್ದುಲ್ ರಹಿಮಾನ್ ಮೇನಾಲ ಅವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಸಲ್ಲಿಸಿದ್ದಾರೆ.
ಈಶ್ವರಮಂಗಲ ಭಾಗದಿಂದ ಪುತ್ತೂರು, ಕುಂಬ್ರ, ಸುಳ್ಯ ಪ್ರದೇಶಗಳಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ದಿನನಿತ್ಯ ಹೋಗುತ್ತಿದ್ದು ಮುಖ್ಯವಾಗಿ ಬಸ್ಸನ್ನೇ ಅವಲಂಬಿಸಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಸರಿಯಾಗಿ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದು ಇದೀಗ ಶಾಲಾ ಕಾಲೇಜು ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗೀ ವಾಹನಗಳಲ್ಲಿ ತೆರಳುವಂತಾಗಿದೆ. ಆದುದರಿಂದ ಬೆಳಗ್ಗಿನ ಹೊತ್ತು 8 ಗಂಟೆಗೆ ಸರಿಯಾಗಿ ಈಶ್ವರಮಂಗಲದಿಂದ ಬಸ್ ಹೊರಡುವಂತೆ ಹಾಗೂ ಸಂಜೆ 5 ಗಂಟೆಗೆ ಪುತ್ತೂರಿನಿಂದ ಈಶ್ವರಮಂಗಲಕ್ಕೆ ಬಸ್ ಹೊರಡುವಂತೆ ವ್ಯವಸ್ಥೆ ಮಾಡಬೇಕು. ಅಲ್ಲದೇ ಹೆಚ್ಚುವರಿ ಬಸ್ ವ್ಯವಸ್ಥೆ ಕೂಡಾ ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.