ಮುಂಡೂರು ಗ್ರಾಮ ಸಭೆ

0

ನಿರ್ಣಯಗಳು ಆನುಷ್ಠಾನ ಆಗುತ್ತಿಲ್ಲ ಎಂದಾದರೆ ಗ್ರಾಮ ಸಭೆ ಮಾಡಿ ಏನು ಪ್ರಯೋಜನ-ಗ್ರಾಮಸ್ಥರ ಪ್ರಶ್ನೆ

ಪುತ್ತೂರು: ಹಿಂದಿನ ಗ್ರಾಮ ಸಭೆಯಲ್ಲಿ ಆದ ನಿರ್ಣಯಗಳು ಅನುಷ್ಠಾನ ಆಗಿಲ್ಲ ಎಂದ ಮೇಲೆ ಗ್ರಾಮ ಸಭೆ ಮಾಡುವ ಅಗತ್ಯವೇನಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ ಘಟನೆ ಮುಂಡೂರು ಗ್ರಾ.ಪಂ ಗ್ರಾಮ ಸಭೆಯಲ್ಲಿ ನಡೆಯಿತು.


ಸಭೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಅಧ್ಯಕ್ಷತೆಯಲ್ಲಿ ಆ.7ರಂದು ಮುಂಡೂರು ಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ವಿದ್ಯಾರಾಣಿ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು.


ಗ್ರಾಮಸ್ಥ ಧನಂಜಯ ಮಾತನಾಡಿ ಹಿಂದಿನ ಗ್ರಾಮ ಸಭೆಯಲ್ಲಿ ಆದ ಅನೇಕ ನಿರ್ಣಯಗಳು ಅನುಷ್ಠಾನ ಆಗಿದಾ? ಎಂದು ಕೇಳಿ ನಿರ್ಣಯ ಪ್ರತಿ ಒದಗಿಸುವಂತೆ ಕೇಳಿದರು. ಪಿಡಿಓ ಗೀತಾ ಬಿ.ಎಸ್ ಕಳೆದ ಬಾರಿಯ ನಿರ್ಣಯಗಳನ್ನು ಓದಿದಾಗ ಅದರಲ್ಲಿ ಬಹುತೇಕ ನಿರ್ಣಯಗಳು ನುಷ್ಠಾನ ಆಗದ ಬಗ್ಗೆ ತಿಳಿಯಿತು. ಈ ವೇಳೆ ಧನಂಜಯ ಮಾತನಾಡಿ ಕಾಟಾಚಾರಕ್ಕೆ ಗ್ರಾಮ ಸಭೆ ಮಾಡಬೇಕಾ? ಕಳೆದ ಬಾರಿಯ ನಿರ್ಣಯಗಳಿಗೆ ಹಿಂಬರಹ ಆದರೂ ಸಿಕ್ಕಿದಾ? ಎಂದು ಕೇಳಿದರು. ಗ್ರಾಮಸ್ಥ, ಮುಂಡೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್ ಮಾತನಾಡಿ ಈ ರೀತಿ ಆದರೆ ಗ್ರಾಮ ಸಭೆಯ ಅವಶ್ಯಕತೆಯೇ ಇಲ್ಲ ಎಂದು ಹೇಳಿದರು. ಗ್ರಾಮಸ್ಥ ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ಇದೇ ರೀತಿ ಮುಂದಕ್ಕೂ ಆದರೆ ನಾವು ಗ್ರಾಮ ಸಭೆಯನ್ನೇ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬೀದಿ ದೀಪ ಇಲ್ಲ:
ಇಬ್ರಾಹಿಂ ಮುಲಾರ್ ಮಾತನಾಡಿ ಕುರಿಯ, ಬಂಡಿಕಾನ, ಕೊಂಬಳ್ಳಿ ಮತ್ತಿತರ ಕಡೆಗಳಲ್ಲಿ ಬೀದಿದೀಪ ಇಲ್ಲ ಎಂದರು. ಗ್ರಾಮಸ್ಥ ಅಶ್ರಫ್ ಮುಲಾರ್ ಧ್ವನಿಗೂಡಿಸಿದರು. ಗ್ರಾಮಸ್ಥ, ಮುಂಡೂರು ಸಿಎ ಬ್ಯಾಂಕ್ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಮಾತನಾಡಿ ಒಂದಾ ಬೀದಿ ದೀಪ ಸರಿಪಡಿಸಿ ಇಲ್ಲವೇ ಅದನ್ನು ತೆರವುಗೊಳಿಸಿ, ಬೀದಿ ದೀಪ ಇದ್ದು ಅದು ಉರಿಯದಿದ್ದರೆ ಏನು ಪ್ರಯೋಜನ ಎಂದು ಕೇಳಿದರು.

ಮುಂಡೂರು ಶಾಲೆಯನ್ನು ಮಾದರಿ ಶಾಲೆ ಮಾಡಿ:
ಮುಂಡೂರು ಸರಕಾರಿ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆ ಮಾಡಬೇಕೆನ್ನುವ ಒತ್ತಾಯವನ್ನು ನಾವು ಹಿಂದಿನಿಂದಲೂ ಮಾಡುತ್ತಾ ಬಂದಿದ್ದೇವೆ, ಅದಕ್ಕೆ ನೀವೇನು ಮಾಡಿದ್ದೀರಿ ಎಂದು ಗ್ರಾಮಸ್ಥ ಪ್ರಸಾದ್ ಕಣ್ಮಣಿ ಅವರು ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ ಅವರಲ್ಲಿ ಕೇಳಿದರು. ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ಆ ಸಂಬಂಧ ನೀವು ಶಾಸಕರಿಗೆ, ಇಲಾಖೆಗೆ ಬರೆದಿದ್ದೀರಾ ಎಂದು ಕೇಳಿದರು. ಇಬ್ರಾಹಿಂ ಮುಲಾರ್ ಹಾಗೂ ಯಾಕೂಬ್ ಮುಲಾರ್ ಧ್ವನಿಗೂಡಿಸಿದರು. ಪ್ರಸಾದ್ ಕಣ್ಮಣಿ ಮಾತನಾಡಿ ಮುಂಡೂರು, ಕಲ್ಪಣೆ ಎಲ್ಲ ಶಾಲೆಗಳೂ ಅಭಿವೃದ್ಧಿ ಆಗಲಿ ಎಂದರು. ಸಿಆರ್‌ಪಿ ಪರಮೇಶ್ವರಿ ಉತ್ತರಿಸಿ ಈಗ ಮಾದರಿ ಶಾಲೆ ಎಂಬುವುದಿಲ್ಲ, ಕಎಪಿಎಸ್ ಸ್ಕೂಲ್ ಮಾತ್ರ ಇರುವುದು ಎಂದರು. ಗ್ರಾಮಸ್ಥ, ಮುಂಡೂರು ಸಿಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ಪ್ರತೀ ಸಲ ಇದರ ಬಗ್ಗೆ ಚರ್ಚೆ ಯಾಕೆ? ಈ ಬಗ್ಗೆ ಶಾಸಕರಿಗೆ ಬರೆಯಿರಿ ಎಂದರು. ಮುಂಡೂರು ಶಾಲೆಯಲ್ಲಿ 10ನೇ ತರಗತಿ ವರೆಗೆ ಪ್ರಾರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಮುಂಡೂರಿನಲ್ಲಿ ಪ್ರೌಢ ಶಾಲೆ ಆಗಬೇಕೆಂದು ಸಂಬಂಧಪಟ್ಟವರಿಗೆ ಬರೆಯಿರಿ ಎಂದು ಇಬ್ರಾಹಿಂ ಮುಲಾರ್ ಹೇಳಿದರು.

ಕಾಳಿಂಗಹಿತ್ಲುನಲ್ಲಿ ಟ್ಯಾಂಕ್ ಮಾತ್ರ ಇದೆ-ಲೊಕಾಯುಕ್ತಕ್ಕೆ ದೂರು ನೀಡುತ್ತೇನೆ
ಮುಂಡೂರು ಗ್ರಾಮದ ಕಾಳಿಂಗಹಿತ್ಲು ಎಂಬಲ್ಲಿ ದಲಿತ ಕಾಲನಿಗೆಂದು ಸರಕಾರದಿಂದ ನೀರಿನ ಟ್ಯಾಂಕ್ ಮಂಜೂರಾಗಿದ್ದು ಅದನ್ನು ಹಿಂದಿನ ಶಾಸಕರು ಉದ್ಘಾಟನೆ ಮಾಡಿದ್ದರು. ಆದರೆ ಅಲ್ಲಿ ಬೋರ್‌ವೆಲ್ ಇಲ್ಲ, ಪೈಪ್ ಲೈನ್ ಆಗಿಲ್ಲ, ಆದರೂ ಕೇವಲ ಟ್ಯಾಂಕ್‌ನ್ನು ಮಾತ್ರ ಉದ್ಘಾಟಿಸಿ ಹಿಂದಿನ ಶಾಸಕರು ಸ್ಥಳೀಯ ನಿವಾಸಿಗಳನ್ನು ಅವಮಾನ ಮಾಡಿದ್ದಾರೆ ಎಂದು ಗ್ರಾಮಸ್ಥ ಮಹಾಲಿಂಗ ನಾಯ್ಕ ಹೇಳಿದರು. ಅಲ್ಲಿಗೆ ಅನುದಾನ ಬಂದದ್ದು ಏನಾಗಿದೆ, ಯಾಕೆ ಹೀಗಾಯಿತು ಎಂದು ಮಹಾಲಿಂಗ ನಾಯ್ಕ ಪ್ರಶ್ನಿಸಿದರು. ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ,ಪುತ್ತಿಲ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಯಾವ ಸ್ಕೀಮ್‌ನಲ್ಲಿ ಆಗಿದೆ, ಅದರ ಪೇಮೆಂಟ್ ಆಗಿದಾ? ಅದರ ಬಗ್ಗೆಯೂ ಮಾಹಿತಿ ಬೇಕೆಂದು ಮಹಾಲಿಂಗ ನಾಯ್ಕ ಕೇಳಿದರು. ನಾನು ಕೇಳಿರುವ ಪ್ರಶ್ನೆಗೆ ಸರಿಯಾದ ಮಾಹಿತಿ ಸಿಗಬೇಕು ಇಲ್ಲದಿದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆ ಮೂಲಕ ಮಾಹಿತಿ ಪಡೆಯುತ್ತೇನೆ, ಲೋಕಾಯುಕ್ತಕ್ಕೂ ದೂರು ನೀಡುತ್ತೇನೆ ಎಂದು ಮಹಾಲಿಂಗ ನಾಯ್ಕ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಮಾತನಾಡಿ ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದರು.

ಸರಕಾರಿ ಶಾಲೆಗಳನ್ನು ಉಳಿಸಲು ಮುತುವರ್ಜೀ ವಹಿಸಿ:
ರಾಧಾಕೃಷ್ಣ ರೈ ರೆಂಜಲಾಡಿ ಮಾತನಾಡಿ ಇದ್ದ ಸರಕಾರಿ ಶಾಲೆಗಳನ್ನು ಉಳಿಸಲು ಇಲಾಖೆ ಮತ್ತು ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು. ಕಲ್ಪಣೆಯಲ್ಲಿ ಪ್ರೈಮರಿ, ಹೈಸ್ಕೂಲ್, ಹಾಸ್ಟೆಲ್ ಎಲ್ಲವೂ ಇದೆ. ಅದನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಹೆಚ್ಚಿನ ಆಸಕ್ತಿ ತೋರಬೇಕು ಎಂದರು.

ಮುಂಡೂರು ಭಾಗದವರನ್ನು ನಾಮನಿರ್ದೇಶನ ಮಾಡಿ:
ನರಿಮೊಗರು ಸ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿಯಲ್ಲಿ ಮುಂಡೂರು ಭಾಗದವರನ್ನು ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಕೆಲವರು ಆಗ್ರಹಿಸಿದರು.

ಮುಂಡೂರು ಆರೋಗ್ಯ ಉಪಕೇಂದ್ರ ಮೇಲ್ದರ್ಜೆಗೇರಿಸಿ:
ಮುಂಡೂರಿನಲ್ಲಿರುವ ಆರೋಗ್ಯ ಉಪಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಬೇಕೆಂದು ಯಾಕೂಬ್ ಮುಲಾರ್ ಆಗ್ರಹಿಸಿದರು. ಈ ಬಗ್ಗೆ ಮೇಲಧಿಕಾರಿಗಳಿಗೆ ಬರೆದುಕೊಳ್ಳಬೇಕೆಂದು ಅವರು ಹೇಳಿದರು.

ಪಶು ಸಂಗೋಪಣಾ ಇಲಾಖೆ ವಿರುದ್ಧ ಅಸಮಾಧಾನ:
ಪಶು ಸಂಗೋಪಣಾ ಇಲಾಖೆಯವರು ಇಲ್ಲಿಗೆ ಬಂದು ಮಾಹಿತಿ ನೀಡುತ್ತಾರೆ. ಆದರೆ ಅವರಲ್ಲಿಗೆ ಹೋದರೆ ಅಲ್ಲಿ ಏನೂ ಸಿಗುವುದಿಲ್ಲ, ನಿಮಗೆ ಯಾರು ಹೇಳಿದ್ದು ಎಂದು ಕೇಳುತ್ತಾರೆ ಎಂದು ಪ್ರಸಾದ್ ಕಣ್ಮಣಿ ಹೇಳಿದರು.

ಬಸ್ ಸುತ್ತು ಬಳಸಿ ಹೋಗುವುದು ಯಾಕೆ..?
ಬೆಳಗ್ಗಿನ ಹೊತ್ತು ಕೆಎಸ್‌ಆರ್‌ಟಿಸಿ ಬಸ್‌ವೊಂದು ಪುತ್ತೂರಿನಿಂದ ಮುಂಡೂರು ಮಾರ್ಗವಾಗಿ ಬಂದು ರೆಂಜಲಾಡಿ ಮೂಲಕ ಭಕ್ತಕೋಡಿಗೆ ಹೋಗಿ ಅಲ್ಲಿಂದ ಸರ್ವೆ ಮಾರ್ಗವಾಗಿ ಸುತ್ತು ಬಳಸಿಕೊಂಡು ವಾಪಸ್ ಮುಂಡೂರು ಮಾರ್ಗವಾಗಿ ಪುತ್ತೂರಿಗೆ ಹೋಗುತ್ತದೆ. ಇದು ಯಾಕೆ ಹೀಗೆ? ಇದರಿಂದ ಏನು ಪ್ರಯೋಜನ ಎಂದು ರಾಧಾಕೃಷ್ಣ ರೈ ರೆಂಜಲಾಡಿ ಕೇಳಿದರು.
ಮುಂಡೂರು ಮೂಲಕ ಬಂದು ರೆಂಜಲಾಡಿ, ಭಕ್ತಕೋಡಿಯಾಗಿ ಪುತ್ತೂರಿಗೆ ಹೋದರೆ ಎಲ್ಲರಿಗೂ ಅನುಕೂಲ ಎಂದು ಅವರು ಹೇಳಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಪುತ್ತೂರು ಕೆಎಸ್‌ಆರ್‌ಟಿಸಿ ಅಧಿಕಾರಿ ಅಬ್ಬಾಸ್ ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್ ವಿಚಾರದಲ್ಲಿ ಚರ್ಚೆ:
ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬ್ರೇಕ್ ಲೈಟ್ ಇಲ್ಲ, ಮಾತ್ರವಲ್ಲದೇ ಅನೇಕ ಬಸ್ ಡ್ರೈವರ್‌ಗಳು ರಸ್ತೆಯಲ್ಲೇ ಬಸ್ ನಿಲ್ಲಿಸಿ ಜನರನ್ನು ಹತ್ತಿಸುವುದು, ಇಳಿಸುವುದು ಮಾಡುತ್ತಾರೆ, ಇದು ಇತರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಯಾಕೂಬ್ ಮುಲಾರ್ ಹೇಳಿದರು. ಈ ಬಗ್ಗೆ ಗಮನ ಹರಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿ ಅಬ್ಬಾಸ್ ಹೇಳಿದರು.
ಮಕ್ಕಳಿಗೆ ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್ ಬರಲಿ ಎಂದು ಪ್ರಸಾದ್ ಕಣ್ಮಣಿ ಹೇಳಿದರು. ಡೋರ್‌ನಲ್ಲಿ ನೇತಾಡಿಕೊಂಡು ಹೋಗುವುದು ಕಂಡು ಬರುತ್ತಿದ್ದು ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಧನಂಜಯ ಮುಂಡೂರು ಹೇಳಿದರು. ಭಕ್ತಕೋಡಿ ಕಡೆಯಿಂದ ಬಿಂದು ಫ್ಯಾಕ್ಟರಿಗೆ ಅನೇಕ ಮಹಿಳೆಯರು ಹೋಗುತ್ತಿದ್ದು ಇದೀಗ ಅನೇಕ ಬಸ್‌ನವರು ಬಸ್ ನಿಲ್ಲಿಸದೇ ಹೋಗುತ್ತಿದ್ದಾರೆ ಎಂದು ಶಿವನಾಥ ರೈ ಮೇಗಿನಗುತ್ತು ಹೇಳಿದರು.
ನೀವು ಹೇಳಿದ ಎಲ್ಲ ವಿಚಾರಗಳ ಬಗ್ಗೆ ಸಂಬಂಧೊಟ್ಟವರ ಗಮನಕ್ಕೆ ತರುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿ ಅಬ್ಬಾಸ್ ಹೇಳಿದರು.

ರೆಂಜಲಾಡಿಯಲ್ಲಿ ಬೀದಿ ದೀಪ ಇಲ್ಲ:
ರೆಂಜಲಾಡಿಯಲ್ಲಿ ಬೀದಿ ದೀಪ ಇಲ್ಲ. ಹಲವು ಬಾರಿ ಹೇಳಿ ಪ್ರಯೋಜನ ಆಗಿಲ್ಲ. ಇನ್ನಾದರೂ ಅಲ್ಲಿಗೆ ಬೀದಿ ದೀಪ ಕೊಡಿ ಎಂದು ರಾಧಾಕೃಷ್ಣ ರೈ ಹೇಳಿದರು.

ಕಟ್ಟತ್ತಡ್ಕ ನಿವೇಶನ ಹಂಚಿಕೆ ಪ್ರಕ್ರಿಯೆ ಏನಾಗಿದೆ..?
ಸೊರಕೆ ಸಮೀಪದ ಕಟ್ಟತ್ತಡ್ಕದಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿ ಹಲವು ಸಮಯಗಳೇ ಕಳೆದರೂ ಅದಿನ್ನೂ ಕಾರ್ಯಗತವಾಗಿಲ್ಲ ಯಾಕೆ ಎಂದು ಶಿವನಾಥ ರೈ ಮೇಗಿನಗುತ್ತು ಕೇಳಿದರು. ಪಿಡಿಓ ಗೀತಾ ಬಿ.ಎಸ್ ಉತ್ತರಿಸಿ ಹಕ್ಕು ಪತ್ರ ವಿತರಣೆ ಆಗಿದೆ ಎಂದರು. ಶಿವನಾಥ ರೈ ಮಾತನಾಡಿ ಹಕ್ಕು ಪತ್ರ ವಿತರಣೆ ಆದರೆ ಸಾಕಾ ಮುಂದಿನ ಪ್ರಕ್ರಿಯೆಗಳು ಯಾವಾಗ ಆಗುತ್ತದೆ ಎಂದು ಕೇಳಿದರು. ಈ ವಿಚಾರದಲ್ಲಿ ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕೆಂದು ಅವರು ಹೇಳಿದರು.

ಗ್ರಾಮಸಭೆಯಲ್ಲಿ ಮಹಿಳೆಯರು, ವೃದ್ಧರಿಗೆ ಆದ್ಯತೆ ನೀಡಬೇಕು:
ಶಿವನಾಥ ರೈ ಮೇಗಿನಗುತ್ತು ಮಾತನಾಡಿ ಗ್ರಾಮ ಸಭೆಗೆ ಮಹಿಳೆಯರು, ವೃದ್ಧರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಬರುತ್ತಾರೆ, ಅವರಿಗೂ ಮಾತನಾಡಲು ಅವಕಾಶ ಕೊಡಿ ಎಂದು ಹೇಳಿದರು. ಆದ್ಯತೆಯ ಮೇರೆಗೆ ಅವರಿಗೆ ಅವಕಾಶ ಕೊಡಬೇಕು, ಕೊನೆಯವರೆಗೂ ಅವರನ್ನು ಕಾಯುವಂತೆ ಮಾಡಿ ಅರ್ಜಿ ಸ್ವೀಕರಿಸುವ ಬದು ಮೊದಲೇ ಅರ್ಜೀ ಸ್ವೀಕರಿಸುವ ಹಾಗೆ ಆಗಬೇಕು. ಮುಂದಕ್ಕೆ ಆ ರೀತಿ ಮಾಡಬೇಕು ಎಂದು ಸಲಹೆ ನೀಡಿದರು. ಮಾತನಾಡಿದವರೆ ಪದೇ ಪದೇ ಮಾತನಾಡುವುದರಿಂದ ಇತರರಿಗೆ ಮಾತನಾಡಲು ಅವಕಾಶ ಸಿಗುವುದಿಲ್ಲ ಎಂದು ಸಭೆಯಲ್ಲಿದ್ದ ಗ್ರಾಮಸ್ಥರೋರ್ವರು ಬೇಸರ ವ್ಯಕ್ತಪಡಿಸಿದರು.

ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರ:
`ಸುದ್ದಿ’ ಹಮ್ಮಿಕೊಂಡಿರುವ ಲಂಚ ಭ್ರಷ್ಟಾಚಾರ ವಿರುದ್ಧದ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಗ್ರಾ.ಪಂ ಸಿಬ್ಬಂದಿ ಶಶಿಧರ್ ಕೆ ಮಾವಿನಕಟ್ಟೆ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಮಸ್ಥರು ತಮ್ಮ ಕೈಗಳನ್ನು ಮುಂದೆ ಚಾಚಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಗ್ರಾ.ಪಂ ಪಿಡಿಓ ಗೀತಾ ಬಿ.ಎಸ್ ಸ್ವಾಗತಿಸಿದರು. ಕಾರ್ಯದರ್ಶಿ ಸೂರಪ್ಪ ವರದಿ ವಾಚಿಸಿದರು. ಸಿಬ್ಬಂದಿಗಳಾದ ಕೊರಗಪ್ಪ ನಾಯ್ಕ, ಶಶಿಧರ ಕೆ ಮಾವಿನಕಟ್ಟೆ, ಸತೀಶ, ಕವಿತಾ, ಮೋಕ್ಷಾ ಸಹಕರಿಸಿದರು.

LEAVE A REPLY

Please enter your comment!
Please enter your name here