ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣದ ಜ್ಞಾನ ಇಂದಿನ ದಿನಗಳಲ್ಲಿ ಅತಿ ಅಗತ್ಯ: ಸುರೇಶ್ ಶೆಟ್ಟಿ
ಪ್ರತೀ ವಿದ್ಯಾರ್ಥಿಗೆ ಒಂದರಂತೆ 40 ಕಂಪ್ಯೂಟರ್: ರವೀಂದ್ರ ದರ್ಬೆ
ವಿಟ್ಲ: ತಂತ್ರಜ್ಞಾನ ಕ್ಷೇತ್ರದಲ್ಲಿ, ಕೃತಕ ಬುದ್ಧಿಮತ್ತೆಯು ದಿನದಿಂದ ದಿನಕ್ಕೆ ವೇಗವಾಗಿ ವಿಕಸನಗೊಳ್ಳುತ್ತಿದ್ದು, ಈ ಅವಿಷ್ಕಾರ ಮುಂದಿನ ದಿನಗಳಲ್ಲಿ, ಮಾನವನ ಜೀವನಶೈಲಿಯನ್ನು ತೀವ್ರವಾಗಿ ಬದಲಾಯಿಸಲಿದೆ ಎಂದು ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿರವರು ಹೇಳಿದರು. ಅವರು ಮಾಣಿ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೋಬೋಟಿಕ್ಸ್ ಲ್ಯಾಬನ್ನು ರೋಬೋಟ್ ಚಲಾಯಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣದ ಜ್ಞಾನ ಇಂದಿನ ದಿನಗಳಲ್ಲಿ ಅತಿ ಅಗತ್ಯವಾಗಿದೆ ಎಂದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಸಾಮಾನ್ಯ ಜ್ಞಾನವನ್ನು ನೀಡಬೇಕು, ವಿದ್ಯಾರ್ಥಿಗಳು ಪ್ರತಿದಿನ ಪುಸ್ತಕ, ದಿನ ಪತ್ರಿಕೆಗಳನ್ನು ಓದುವಂತೆ ಪ್ರೇರೇಪಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕಂಪ್ಯೂಟರ್ ಲ್ಯಾಬ್ ಮತ್ತುರೋಬೋಟಿಕ್ ಲ್ಯಾಬ್ ಕುರಿತಾಗಿ ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆಯವರು ಮಾಹಿತಿ ನೀಡಿ ವಿಶಾಲವಾದ ಕೊಠಡಿಯಲ್ಲಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬನ್ನು ನಿರ್ಮಿಸಲಾಗಿದೆ. ಇಲ್ಲಿ 40 ಕಂಪ್ಯೂಟರ್ ಗಳಿದ್ದು, ಎಲ್ಲಾ ಕಂಪ್ಯೂಟರ್ ಗಳಿಗೂ ಇಂಟರ್ನೆಟ್ ಸಂಪರ್ಕ ನೀಡಲಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಲು ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಕಂಪ್ಯೂಟರ್ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನದ ಯುಗಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು 3ನೇ ತರಗತಿಯ ಮೇಲಿನ ವಿದ್ಯಾರ್ಥಿಗಳಿಗೆ ರೋಬೋಟಿಕ್ ತರಬೇತಿ ನೀಡಲಾಗುತ್ತಿದೆ ಎಂದರು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರು, ಶಾಲಾ ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ ಜೆ, ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ, ಕಂಪ್ಯೂಟರ್ ಶಿಕ್ಷಕರಾದ ಸೌಮ್ಯ ಕೆ, ಐವನ್ ಡಿ ಕುನ್ಹ, ಜೀವಿತ ಕೆ ಮೊದಲಾದವರು ಉಪಸ್ಥಿತರಿದ್ದರು.