ಬಲತ್ಕಾರದ ಬಂದ್, ರಸ್ತೆತಡೆಗಳ ವಿರುದ್ಧ ಪುತ್ತೂರಿನ ಜನರು ಹೋರಾಡಿ ಜಯ ಗಳಿಸಿದ್ದಾರೆ-ಪುತ್ತಿಲರೇ ದಯವಿಟ್ಟು ಬಂದ್, ರಸ್ತೆತಡೆ ಅಂದರೆ `ಜನರ ನಾಶದ ಪರ್ವ’ ಪ್ರಾರಂಭಿಸಬೇಡಿ

0

ರಸ್ತೆತಡೆ, ಬಂದ್‌ನಿಂದ ತೊಂದರೆಗೆ ಒಳಗಾಗುವವರಿಗೆ, ನಿರಪರಾಧಿಗಳಿಗೆ ಪರಿಹಾರವನ್ನು ಒದಗಿಸಿ ಅವರಿಗೆ ನ್ಯಾಯ ಒದಗಿಸುವುದು ನಿಮ್ಮ ನ್ಯಾಯದ ಕಡೆ ನಡೆಯೇ ಆಗುತ್ತದೆ. ಇಲ್ಲದಿದ್ದರೆ ಅದು ಅವರ ಮೇಲಿನ ನಿಮ್ಮ ದೌರ್ಜನ್ಯವಾಗುತ್ತದೆ.

ಸೌಜನ್ಯಳ ಪ್ರಕರಣದಲ್ಲಿ ನಿಮ್ಮ ನ್ಯಾಯದ ಕಡೆ ನಡೆಗೆ ನಮ್ಮ ಬೆಂಬಲ ಇದೆ, ಆದರೆ ಅದರಿಂದ ಜನರಿಗೆ ಅನ್ಯಾಯವಾದರೆ ನಮ್ಮ ಸಂಪೂರ್ಣ ವಿರೋಧವಿದೆ

*ಸೌಜನ್ಯಳಿಗೆ ನ್ಯಾಯ ಸಿಗಲಿ ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದಾರೆ, ದೇವಸ್ಥಾನಗಳಲ್ಲೂ ಪೂಜೆಗಳಾಗುತ್ತಿವೆ. ತನಿಖೆಗೆ ಯಾರ ವಿರೋಧವೂ ಇಲ್ಲ, ಸರಕಾರದ ಒಪ್ಪಿಗೆ ದೊರಕಿದೆ. ಹಾಗಿದ್ದರೂ ಸೌಜನ್ಯಳ ಪರ ಹೋರಾಟ ನಡೆಯಲಿ.ಆದರೆ ತಾವು ಅದಕ್ಕಾಗಿ ಇದೇ ಸೋಮವಾರ ಆ. 14ರಂದು ರಸ್ತೆತಡೆ, ಬಂದ್‌ಗೆ ಕರೆಕೊಟ್ಟಿರುವುದು ಯಾರ ವಿರುದ್ಧ, ಯಾರ ಪ್ರಯೋಜನಕ್ಕಾಗಿ? ಅದರಿಂದ ಜನರಿಗೆ ತೊಂದರೆಯಲ್ಲವೇ ಯೋಚಿಸಿ ನೋಡಿ.


*ಸೌಜನ್ಯಳು ದೌರ್ಜನ್ಯಕ್ಕೆ ಒಳಗಾಗಿ ಸತ್ತಿದ್ದಾಳೆ. ಅವಳಿಗಾದ ಅನ್ಯಾಯದ ವಿರುದ್ಧ ಹೋರಾಡುವಾಗ ಇನ್ನೊಬ್ಬರಿಗೆ, ನಿರಪರಾಧಿಗಳಿಗೆ ಅನ್ಯಾಯವಾಗಬಾರದು, ಅವರ ಮೇಲೆ ದೌರ್ಜನ್ಯ ನಡೆಯಬಾರದು. ಜನರಿಗೆ ಆಗುವ ಅನ್ಯಾಯದ, ದೌರ್ಜನ್ಯದ ವಿರುದ್ಧದ ಹೋರಾಟವಾಗಬೇಕು.


*ಸೌಜನ್ಯಳ ಪರ ಹೋರಾಟ, ನಿಮ್ಮ ನಡೆ ನ್ಯಾಯದ ಕಡೆ ಎಂದರೆ ಬಡವರಿಗೆ, ವ್ಯಾಪಾರಸ್ಥರಿಗೆ, ವ್ಯವಹಾರಸ್ಥರಿಗೆ, ದಿನಕೂಲಿ ಮಾಡುವವರಿಗೆ, ರಿಕ್ಷಾ ಮತ್ತು ಇತರ ವಾಹನದವರಿಗೆ, ಶೋಷಣೆಗೆ ಒಳಗಾದವರಿಗೆ, ಜೀವ ರಕ್ಷಣೆಯ ಸಾಗಾಟದ, ಪ್ರಯಾಣದ ಅಗತ್ಯವಿರುವವರಿಗೆ, ಯಾವುದೇ ತೊಂದರೆ ನೀಡದ ರೀತಿಯಲ್ಲಿ ನಡೆಯಬೇಕಲ್ಲವೇ?


*ಯಾಕೆಂದರೆ ರಸ್ತೆತಡೆ, ಬಂದ್‌ಗಳಿಂದ ತೊಂದರೆಗೆ ಒಳಗಾಗುವವರು ಇದ್ದಾರೆ. 10 ನಿಮಿಷ ಬಂದ್ ಆದರೂ ಜೀವ ಹಾನಿಯಾಗಬಹುದು. ಕೆಲಸ, ಹಣ ಕಳೆದುಕೊಳ್ಳಬಹುದು. ಗಂಟೆಗಟ್ಟಲೆ ಆದರೆ ಊಟ, ತಿಂಡಿಗೂ ಇಲ್ಲದ ವ್ಯವಸ್ಥೆ ಉಂಟಾಗಬಹುದು.


*ಹಿಂದುತ್ವದ ರಕ್ಷಣೆಗಾಗಿ ಜನಬೆಂಬಲ ಪಡೆದಿರುವ ನೀವು ಯಾವ ಕಾರಣಕ್ಕೂ, ಯಾವ ಹಿಂದುವಿಗೂ ಒಂದು ನಿಮಿಷವೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು ಅಲ್ಲವೇ?

ಅರುಣ್ ಕುಮಾರ್ ಪುತ್ತಿಲರೇ,
ನಿಮಗೆ ಅನ್ಯಾಯವಾಗಿದೆ ಎಂದು ಹೇಳುವಾಗ, ಅದಕ್ಕಾಗಿ ಓಟಿಗೆ ನಿಂತಾಗ ನೀವು ಯಾವುದೇ ರಸ್ತೆತಡೆ, ಬಂದ್ ನಡೆಸಲಿಲ್ಲ. ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಉಪಯೋಗಿಸಿ ನಿಮಗೆ ಆದ ಅನ್ಯಾಯವನ್ನು ಪ್ರಚಾರ ಮಾಡಿದ್ದೀರಿ. ಬೆಂಬಲ ಪಡೆದಿದ್ದೀರಿ. ಇಂದಿಗೂ ಸೌಜನ್ಯಳ ಪರ ಹೋರಾಟಕ್ಕೆ ನಿಮ್ಮ ಆ ಅಸ್ತ್ರವನ್ನು ಸಮರ್ಪಕವಾಗಿ ಬಳಸಬಹುದು. ಜನ ಬೆಂಬಲ ಪಡೆಯಬಹುದು. ಬೇರೆಯವರು ಏನಾದರೂ ಮಾಡಲಿ, ಹೇಗೆ ಬೇಕಾದರೂ ಮಾಡಲಿ, ಅವರೊಂದಿಗೆ ನಿಮ್ಮ ಸ್ಪರ್ಧೆ ಬೇಡ. ತಾವು ಜನನಾಯಕರಾಗಿರುವವರು ಇನ್ನೂ ಬೆಳೆಯಲು ಬಯಸುವವರು ಯಾವುದೇ ಕಾರಣಕ್ಕೂ ಬಂದ್, ರಸ್ತೆತಡೆಗಳ ದಾರಿಯನ್ನು ನಿಮ್ಮ ಬೆಂಬಲಕ್ಕೆ ಮತ್ತು ಶಕ್ತಿ ಪ್ರದರ್ಶನಕ್ಕೆ ಉಪಯೋಗ ಮಾಡಬೇಡಿ. ನಾನು ಹೇಳಿದ ವಿಷಯದಲ್ಲಿ ಸಂಶಯವಿದ್ದರೆ ನಿಮಗೆ ಓಟು ಹಾಕಿದ ಮತ್ತು ನಿಮ್ಮ ಬೆಂಬಲಕ್ಕೆ ನಿಂತ, ಈಗಲೂ ನಿಂತಿರುವ ಜನರ ಬಳಿ ಆ ಬಗ್ಗೆ ಅಭಿಪ್ರಾಯವನ್ನು ಪಡೆಯಿರಿ ಎಂದು ವಿನಂತಿಸುತ್ತಿದ್ದೇನೆ.


ಪುತ್ತಿಲ ಅಂದರೆ ಬಂದ್, ರಸ್ತೆತಡೆ, ಗಲಭೆ, ಗಲಾಟೆ ಎಂಬುದನ್ನು ದೂರವಿಟ್ಟು ಜನರಿಗೆ ಅನ್ಯಾಯ, ತೊಂದರೆಯಾಗದಂತೆ ಜನಪರ ಹೋರಾಟ ನಡೆಸುವ ಕಡೆ ಗಮನಹರಿಸಬೇಕಾಗಿ ಕೇಳಿಕೊಳ್ಳುತ್ತೇನೆ.


ನೀವು ಸೌಜನ್ಯಳಿಗೆ ನ್ಯಾಯ ಎಂದು ಬಂದ್, ರಸ್ತೆತಡೆಗೆ ಕರೆಕೊಟ್ಟರೆ ದೇಶದಾದ್ಯಂತ ನಡೆಯುವ ಎಲ್ಲಾ ಅಂತಹ ಕ್ರಿಯೆಗಳಿಗೆ ಪುನಃ ರಸ್ತೆತಡೆ, ಬಂದ್, ಮುತ್ತಿಗೆ ಇಂತಹ ದಾರಿಯನ್ನೇ ಹುಡುಕಬೇಕಾಗುತ್ತದೆ. ಪುತ್ತೂರಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ನಡೆಯುವ ಹಿಂದು, ಮುಸ್ಲಿಂ ಗಲಭೆಗಳಲ್ಲಿ ಧಾರ್ಮಿಕ ಸ್ಥಳಗಳ ಅಪವಿತ್ರತೆ ಕ್ರಿಯೆಗಳಲ್ಲಿ ಎಲ್ಲಾ ರೀತಿಯ ದೌರ್ಜನ್ಯಗಳ ಎದುರು ನಿಮ್ಮ ಹೋರಾಟದ ಪ್ರಾರಂಭ ರಸ್ತೆತಡೆ, ಬಂದ್‌ಗಳಿಂದಲೇ ಪ್ರಾರಂಭವಾಗಬೇಕಾಗುತ್ತದೆ. ವಾರಕ್ಕೊಂದು ಬಂದ್‌ಗಳು ನಡೆಯಬೇಕಾಗಬಹುದು. ಆದುದರಿಂದ ನೀವು ನಿಮ್ಮ ಹೋರಾಟವನ್ನು ಯಾವುದೇ ರೀತಿಯಲ್ಲಿ ಮಾಡಿ, ಆದರೆ ಜನರಿಗೆ ತೊಂದರೆಯಾಗುವ ಯಾವುದೇ ಕ್ರಿಯೆಗೆ ಜವಾಬ್ದಾರರಾಗಬೇಡಿ.


ರಸ್ತೆತಡೆ, ಬಂದ್‌ನಿಂದ ತೊಂದರೆಗೆ ಒಳಗಾಗುವವರು ಸೌಜನ್ಯಳ ಪ್ರಕರಣದಲ್ಲಿ ಅಪರಾಧಿಗಳಲ್ಲ, ಅವರ ಬೆಂಬಲಿಗರೂ ಅಲ್ಲ. ಅವರು ನಮ್ಮೂರಿನ ನಿರಪರಾಧಿ ಜನರು. ಅವರಿಗೇಕೆ ಈ ಶಿಕ್ಷೆ. ಅವರ ಬೆಂಬಲ ಬೇಕಿದ್ದರೆ ಲಿಖಿತವಾಗಿ ಪಡೆಯಿರಿ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ಅದನ್ನು ಸಂಬಂಧಪಟ್ಟ ಎಲ್ಲರಿಗೂ ತಿಳಿಸಿ, ಹೋರಾಟದ ಹೊಸ ಮಾದರಿಗೆ ದಾರಿ ತೋರಿಸಿ. ನಿಮ್ಮ ಹೋರಾಟವು ಲಂಚ, ಭ್ರಷ್ಟಾಚಾರದ, ದೌರ್ಜನ್ಯದ ವಿರುದ್ಧದ ಹೋರಾಟದ ಕಡೆಯೂ ತಿರುಗಲಿ. ಸಾವಿರಾರು ಜನರ ಕಷ್ಟ ನಷ್ಟಗಳಿಗೆ ಪರಿಹಾರ ದೊರಕಿ ಅವರಿಗೆ ಶಾಂತಿ, ನೆಮ್ಮದಿ ದೊರಕುವಂತೆ ಮಾಡುವವರಾಗಿರಿ. ನಿಮ್ಮ ಆ ಹೋರಾಟದಲ್ಲಿ ಪ್ರಯೋಜನ ಪಡೆಯುವವರಲ್ಲಿ ಶೇ.90 ಜನ ಹಿಂದುಗಳಾಗಿರುತ್ತಾರೆ ಎಂಬುದನ್ನು ನೆನಪಿಸಲು ಬಯಸುತ್ತೇನೆ.


ಅರುಣ್ ಕುಮಾರ್ ಪುತ್ತಿಲರೇ-
ಬಲತ್ಕಾರದ ಬಂದ್, ರಸ್ತೆತಡೆಗಳ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ಜನ ಬೆಂಬಲದಿಂದ ಹೋರಾಟ ನಡೆಸಿ, ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಬಲತ್ಕಾರದ ಬಂದ್ ಎಂಬ ಶಬ್ದವನ್ನು ಬಂದ್ ಮಾಡಿಸಿದೆ. ಬಂದ್ ಮತ್ತು ರಸ್ತೆ ತಡೆಗೆ ಕರೆ ಕೊಡುವವರು ಅದರಿಂದ ಆಗುವ ಹಾನಿಗೆ ಪರಿಹಾರ ನೀಡಬೇಕೆಂದು ನಾವು ಒತ್ತಾಯಿಸಿದ್ದೆವು. ಅದಕ್ಕೆ ಜನರು ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ. ಅದನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ. ಯಾರೇ ಯಾವುದೇ ಕಾರಣಕ್ಕೂ ಬಲತ್ಕಾರದ ಬಂದ್ ಮತ್ತು ರಸ್ತೆತಡೆ ಮಾಡುವುದನ್ನು ತೊಂದರೆಗೆ ಒಳಗಾಗುವ ಜನರ ಪರವಾಗಿ ನಾವು ಖಡಾ ಖಂಡಿತವಾಗಿ ವಿರೋಧಿಸುತ್ತೇವೆ ಎಂಬುದನ್ನು ವಿನಯಪೂರ್ವಕವಾಗಿ ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.

ವಿ.ಸೂ: ಆ. 14ರಂದು ಸೌಜನ್ಯಳಿಗೆ ನ್ಯಾಯಕ್ಕಾಗಿ ಪ್ರತಿಭಟನೆಯ ಅಂಗವಾಗಿ ರಸ್ತೆ ತಡೆ ಮತ್ತು ಅಂಗಡಿ ಬಂದ್‌ಗೆ ಪುತ್ತಿಲ ಪರಿವಾರದಿಂದ ಕರೆ ನೀಡಲಾಗಿದೆ. ನ್ಯಾಯದ ಹೋರಾಟಕ್ಕೆ ಬೆಂಬಲವಿದ್ದರೂ ರಸ್ತೆ ತಡೆ ಮತ್ತು ಬಂದ್‌ನ ಅವಶ್ಯಕತೆಯಿದೆಯೇ, ಅದರಿಂದ ಜನರಿಗೆ ತೊಂದರೆಯೇ, ಪ್ರಯೋಜನವೇ ? ಎಂಬ ಬಗ್ಗೆ ಜನಾಭಿಪ್ರಾಯ ನೀಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

LEAVE A REPLY

Please enter your comment!
Please enter your name here