`ಭರವಸೆ ಈಡೇರಿಸುತ್ತೇನೆ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇನೆ’

0

ಪುತ್ತೂರಿನ ಅಭಿವೃದ್ಧಿ ಕುರಿತ ಮಾಧ್ಯಮ ಸಂವಾದದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತು

ಕೆಎಮ್‌ಎಫ್‌ಗೆ 10 ಎಕ್ರೆ ಜಾಗ ಮಂಜೂರಾತಿಗೆ ಪ್ರಸ್ತಾವನೆ
ಕುಡಿಯುವ ನೀರಿಗೆ ರೂ. 990 ಕೋಟಿ
ಪಶು ವೈದ್ಯಕೀಯ ಕಾಲೇಜು ಪ್ಯಾಕಲ್ಟಿಗೆ ರೂ.15 ಕೋಟಿ
ಮಾಣಿಯಿಂದ ಪುತ್ತೂರಿಗೆ ಚತುಷ್ಪಥ ರಸ್ತೆ
ಕೊಯಿಲದಲ್ಲಿ ಅನಿಮಲ್ ಹಬ್
ಬೆಂಗಳೂರಿನಲ್ಲಿ ಕಂಬಳ
ಉಪ್ಪಿನಂಗಡಿಯಲ್ಲಿ ರೂ.450 ಕೋಟಿಯ ಟೂರಿಸಮ್ ಯೋಜನೆ
ಬೆಳ್ಳಿಪ್ಪಾಡಿ ಕಠಾರದಲ್ಲಿ ಡ್ಯಾಮ್ ಜ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ
ಸುಸಜ್ಜಿತ ಸೌಲಭ್ಯವಿರುವ ಆಟದ ಮೈದಾನ

ಪುತ್ತೂರು: ರಾಜ್ಯದಲ್ಲಿ ಸರಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆ ಜಾರಿಯಾಗಲಿದೆ. ಅದೇ ರೀತಿ ನಾನು ಶಾಸಕನಾಗಿ ಆಯ್ಕೆಯಾದಲ್ಲಿ ಭ್ರಷ್ಟಾಚಾರದ ವಿರುದ್ಧ ಮತ್ತು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಶಾಸಕನಾಗಿ ಆಯ್ಕೆಯಾದ ದಿನದಿಂದ ಇವತ್ತಿನ ತನಕ ಎಲ್ಲಾ ಅಧಿಕಾರಿಗಳಿಗೆ ಭ್ರಷ್ಟಾಚಾರದ ಬಗ್ಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ಧೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಆ.9ರಂದು ಸಂಜೆ ಪುತ್ತೂರು ಬಪ್ಪಳಿಗೆ ಬೈಪಾಸ್ ರಸ್ತೆಯಲ್ಲಿನ ಅಶ್ಮಿ ಟವರ್‍ಸ್‌ನ ಸಭಾಂಗಣದಲ್ಲಿ ಪುತ್ತೂರಿನ ಅಭಿವೃದ್ಧಿ ಕುರಿತು ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಕುರಿತು ಶಾಸಕರು ಸಂವಾದದಲ್ಲಿ ಸಮಗ್ರ ಮಾಹಿತಿ ನೀಡಿದರು. ಭ್ರಷ್ಟಾಚಾರದ ಕುರಿತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಬಳಿಕ ಇವತ್ತು ಸರಕಾರಿ ಕಚೇರಿಗೆ ಬಡವರು ಹೋದರೆ ಅವರನ್ನು ಅಧಿಕಾರಿಗಳು ಉಪಚರಿಸುವ ರೀತಿ ನಿಯಮ ಬದಲಾಗಿದೆ. ದುಡ್ಡು ತೆಗೆದುಕೊಂಡವರು ಪುನಃ ಕೊಟ್ಟ ಉದಾಹರಣೆಯೂ ಇದೆ. ಶಾಸಕರಿಗೆ ಕರೆ ಮಾಡುತ್ತೇನೆಂದು ಹೇಳಿದ ಕೂಡಲೇ ಕೆಲಸ ಮಾಡಿ ಕೊಡುವ ಕೆಲಸವೂ ಆಗಿದೆ. ಹಿಂದಿನ ಸರಕಾರ ಭ್ರಷ್ಟಾಚಾರಕ್ಕೆ ಒಳಗಾಗುವ ಅಧಿಕಾರಿಗಳಿಂದಲೇ ಏನಾದರೂ ನಿರೀಕ್ಷೆ ಮಾಡುತ್ತಿತ್ತು. ಕೆಲವು ಅಧಿಕಾರಿಗಳು ದುಡ್ಡು ತೆಗೆದುಕೊಂಡು ನನಗೆ ತಂದು ಕೊಟ್ಟವರೂ ಇದ್ದಾರೆ. ನಾನು ಅದನ್ನು ನಿರಾಕರಿಸಿದ್ದೇನೆ. ನೀವು ಬಡವರ ಕೆಲಸ ಮಾಡಿ. ಸರಕಾರದ ಕೆಲಸ ಮಾಡಿ, ಜನರಿಗೆ ಸೇವೆ ಕೊಡುವ ಕೆಲಸ ಮಾಡಿ ಎಂದು ಹೇಳಿದ್ದೇನೆ. ಇಲ್ಲಿ ನಾನು ದುಡ್ಡು ಮಾಡಬೇಕೆಂದು ಬಂದಿಲ್ಲ. ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ ಎಂದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಕೆಎಂಎಫ್ ಘಟಕ, ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜು ಆಗುವುದರಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಗುತ್ತದೆ. ಇವೆಲ್ಲದಕ್ಕೆ ಮಾಧ್ಯಮದವರೂ ಸಹಕಾರ ನೀಡಬೇಕೆಂದು ಹೇಳಿದರು.


ಕೆಎಮ್‌ಎಫ್‌ಗೆ 10 ಎಕ್ರೆ ಜಾಗ ಮಂಜೂರಾತಿಗೆ ಪ್ರಸ್ತಾವನೆ: ಪುತ್ತೂರಿನಲ್ಲಿ ಕೆಎಂಎಫ್ ಘಟಕ ಆರಂಭಿಸಲು ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ 10 ಎಕ್ರೆ ಜಾಗ ಮಂಜೂರಾತಿಗೆ ಪ್ರಸ್ತಾವನೆ ಮಾಡಲಾಗಿದೆ. ಅದು ಜಿಲ್ಲಾಧಿಕಾರಿಯವರ ಹಂತದಲ್ಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಕುಡಿಯುವ ನೀರಿಗಾಗಿ 990 ಕೋಟಿ ರೂ.ಯೋಜನೆ: ಕುಡಿಯುವ ನೀರು ಶುದ್ದವಾಗಿರಬೇಕು. ಅದಕ್ಕಾಗಿ ಫಿಲ್ಟರ್ ಆಗಿರುವ ನೀರು ಕೊಡುವ ಚಿಂತನೆ ಮಾಡಿದ್ದೇನೆ. ಮೆಡಿಕಲ್ ಕಾಲೇಜಿಗೆ ರೂ.1ಸಾವಿರ ಅನುದಾನ ಬಜೆಟ್‌ನಲ್ಲಿ ಘೋಷಣೆಗೆ ಒತ್ತಡ ಹಾಕಿದ್ದೆ. ಆದರೆ 5 ಗ್ಯಾರಂಟಿ ಯೋಜನೆ ಜಾರಿಗೆ 56 ಸಾವಿರ ಕೋಟಿ ರೂ.,ಬೇಕಾಗಿರುವುದರಿಂದ ಈ ಬಜೆಟ್‌ನಲ್ಲಿ ಕೊಡಲಾಗುವುದಿಲ್ಲ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದರು. ಹಾಗಾಗಿ ಕುಡಿಯುವ ನೀರಿಗೆ ಅನುದಾನ ಕೋರಿದ್ದೆ. ಗ್ರಾಮೀಣ ನೀರು ಸರಬರಾಜು ಇಲಾಖೆಗೆ ಬಜೆಟ್‌ನಲ್ಲಿ ರೂ. 5ಸಾವಿರ ಕೋಟಿ ಅನುದಾನ ಘೋಷಿಸಿದ್ದು, ನಾನು ರೂ.1ಸಾವಿರ ಕೋಟಿಯ ಪ್ರಸ್ತಾವನೆ ಸಲ್ಲಿಸಿದ್ದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಯವರು 990 ಕೋಟಿ ರೂ., ಅನುದಾನ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದಾರೆ. ಈ ಯೋಜನೆಯಿಂದಾಗಿ ಪುತ್ತೂರು ಮತ್ತು ಕಡಬದ ಸ್ವಲ್ಪ ಭಾಗಕ್ಕೆ ಪ್ರಯೋಜನ ಸಿಗಲಿದೆ. ಆಲಂಕಾರು, ಬಿ.ಸಿ.ರೋಡ್, ಕೆದಿಲದಲ್ಲಿ ವೆಟ್‌ವೆಲ್‌ನಿಂದ ಶುದ್ದೀಕರಿಸಿದ ನೀರು ಪೆರುವಾಯಿ ಭಾಗಕ್ಕೆ ಹೋಗಲಿದೆ. ಆಲಂಕಾರು, ಉಪ್ಪಿನಂಗಡಿ ಭಾಗದಲ್ಲಿ ವೆಟ್‌ವೆಲ್‌ನಿಂದ ನೀರು ಸರಬರಾಜು ಆಗಿ 24 ಗಂಟೆಯೂ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಾಸಕರು ಹೇಳಿದರು.


ಕೊಯಿಲ ಪಶು ವೈದ್ಯಕೀಯ ಕಾಲೇಜು ಪ್ಯಾಕಲ್ಟಿಗೆ ರೂ. 15 ಕೋಟಿ: 125 ಕೋಟಿ ರೂ.,ಅನುದಾನದಲ್ಲಿ ಕಡಬ ತಾಲೂಕಿನ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಬಿಲ್ಡಿಂಗ್ ಆಗಿದೆ. ತಕ್ಷಣ ಅದನ್ನು ಪ್ರಾರಂಭಿಸಲು ಆರ್ಥಿಕ ಇಲಾಖೆಯ ಮೂಲಕ ರೂ. 50 ಕೋಟಿ ಅನುದಾನ ಕೊಡಿಸುವ ಕೆಲಸ ಆಗಲಿದೆ. ಆದರೆ ಅಲ್ಲಿ 240 ಪ್ಯಾಕಲ್ಟಿ ಬೇಕು. ಸದ್ಯ ೧೪೦ ಪ್ಯಾಕಲ್ಟಿಗೆ ರೂ. 15 ಕೋಟಿ ಬೇಕಾಗುತ್ತದೆ. ಅದರ ಕಡತ ಆರ್ಥಿಕ ಇಲಾಖೆಯಲ್ಲಿದೆ ಎಂದು ಶಾಸಕರು ಹೇಳಿದರು.


ಮಾಣಿಯಿಂದ ಪುತ್ತೂರಿಗೆ ಚತುಷ್ಪಥ ರಸ್ತೆ: ಮಾಣಿಯಿಂದ ಪುತ್ತೂರು ತನಕ ೪ ಲೈನ್ ರಸ್ತೆ ಆಗಬೇಕು. ಮೆಡಿಕಲ್ ಕಾಲೇಜಿಗೆ ಪೂರಕವಾಗಿ ರಸ್ತೆ ಅಭಿವೃದ್ಧಿ ಅಗತ್ಯ. ಮಾಣಿಯಿಂದ ಜಾಲ್ಸೂರು ತನಕ ರಸ್ತೆ ಅಭಿವೃದ್ಧಿಗೆ ರೂ.1 ಸಾವಿರ ಕೋಟಿ ಮತ್ತು ಜಾಲ್ಸೂರಿನಿಂದ ಸಂಪಾಜೆಯ ತನಕ ರಸ್ತೆ ಅಭಿವೃದ್ಧಿಗೆ ರೂ.1ಸಾವಿರ ಕೋಟಿಯ ಪ್ರಸ್ತಾವನೆಯಿದೆ. ಪುತ್ತೂರಿನ ಒಳಗೆ ರಸ್ತೆ ಅಭಿವೃದ್ಧಿಗೆ ಸೌತ್ ಇಂಡಿಯಾ ರೀಜಿನಲ್ ಆಫೀಸ್ ಮ್ಯಾನೇಜರ್‌ರವರ ಮೂಲಕ ನ್ಯಾಷನಲ್ ಹೈವೆಯವರಿಗೆ ಪ್ರಸ್ತಾವನೆ ಮಾಡಲಾಗಿದೆ. ಈ ಕುರಿತು ಸಂಸದರಲ್ಲಿಯೂ ಮಾತನಾಡಿದ್ದೇನೆ ಎಂದು ಶಾಸಕರು ಹೇಳಿದರು.


ಕೊಯಿಲದಲ್ಲಿ ಅನಿಮಲ್ ಹಬ್: ಯುವಕರಿಗೆ ಉದ್ಯೋಗ ಸಿಗಬೇಕೆಂಬ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಕೊಯಿಲದಲ್ಲಿ ಅನಿಮಲ್ ಹಬ್ ಮಾಡುವ ಚಿಂತನೆ ಇದೆ. ಯುವಕರು ಪೊಲೀಸ್, ಕೆಎಸ್‌ಆರ್‌ಟಿಸಿ, ಮೆಸ್ಕಾಂಗೆ ಸೇರ್ಪಡೆಗೊಳ್ಳಬೇಕೆಂದು ಹೇಳಿದರು.


ಬೆಂಗಳೂರಿನಲ್ಲಿ ಕಂಬಳ: ತುಳು ಸಂಸ್ಕೃತಿ, ಆಚಾರ-ವಿಚಾರವನ್ನು ಕರ್ನಾಟಕದ ಜನತೆಗೆ ತೋರಿಸಬೇಕು. ತುಳುನಾಡಿನ ಆಹಾರದ ಕ್ಯಾಂಟೀನ್ ಬೆಂಗಳೂರಿನಲ್ಲೂ ತೆರೆಯಬೇಕು. ದೇಶಕ್ಕೆ ನಮ್ಮ ಆಚಾರ ವಿಚಾರ ತಿಳಿಯಬೇಕು. ಅದಕ್ಕಾರಿ ಬೆಂಗಳೂರಿನಲ್ಲಿ ತುಳುಭವನ ನಿರ್ಮಾಣಕ್ಕೆ 1 ಎಕ್ರೆ ಜಾಗ ಕೊಡಿಸಬೇಕು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಸದನದಲ್ಲಿ ತುಳು ಮಾತನಾಡಿದ್ದಕ್ಕೆ ಡಿ.ಕೆ.ಶಿವಕುಮಾರ್ ಅವರು ಭಾರೀ ಪ್ರಶಂಸೆ ವ್ಯಕ್ತಪಡಿಸಿದರು ಎಂದು ಶಾಸಕರು ಹೇಳಿದರು.


ಉಪ್ಪಿನಂಗಡಿಯಲ್ಲಿ ರೂ. 450 ಕೋಟಿಯ ಟೂರಿಸಮ್ ಯೋಜನೆ: ಉಪ್ಪಿನಂಗಡಿಯನ್ನು ಟೂರಿಸಮ್ ಕ್ಷೇತ್ರವನ್ನಾಗಿ ಮಾಡಲು ರೂ. 450 ಕೋಟಿಯ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲ ಸಂಗಮದಂತೆ ಇಲ್ಲಿಯೂ ಶಿವಲಿಂಗ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಸಂಗಮದ ಕೆಳಗಡೆ ಡ್ಯಾಮ್ ಮಾಡಿ ವರ್ಷ ಪೂರ್ತಿ ನೀರು ನಿಲ್ಲಿಸುವ ವ್ಯವಸ್ಥೆ. ಭಕ್ತರಿಗೆ ಶಿವಲಿಂಗ ದರ್ಶನದ ವ್ಯವಸ್ಥೆ. ಬೋಟಿಂಗ್ ಸೌಲಭ್ಯ ಮಾಡುವ ಯೋಜನೆ ಇದೆ. ಬೆಳ್ಳಿಪ್ಪಾಡಿ ಕಠಾರದಲ್ಲಿ ಡ್ಯಾಮ್ ನಿರ್ಮಾಣ ಆಗಲಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಯೋಜನೆ: ಉಪ್ಪಿನಂಡಿಯ ಯೋಜನೆಯಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲೂ ಹಲವು ಅಭಿವೃದ್ಧಿಯ ವಿಶಿಷ್ಟ ರೀತಿಯ ಪರಿಕಲ್ಪನೆಯ ಮಾಸ್ಟರ್ ಪ್ಲಾನ್ ನನ್ನ ಮುಂದಿದೆ. ದೇವಾಲಯಕ್ಕೆ ಹೋಗುವ ಪ್ರಮುಖ ದಾರಿ ಸರಿಯಿಲ್ಲ. ಅಲ್ಲಿನ ಆಡಳಿತ ಮಂಡಳಿಯವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆ ಮಾಸ್ಟರ್ ಪ್ಲಾನ್ ನನ್ನ ಮನಸ್ಸಿಗೆ ಒಪ್ಪಿಲ್ಲ. ಅದಕ್ಕೆ ನಾನು ಎರಡೆರಡು ಸಲ ಮೀಟಿಂಗ್ ಮಾಡಿದ್ದೆ. ನಾನು ಮಾಸ್ಟರ್ ಪ್ಲಾನ್ ಇಟ್ಟುಕೊಂಡು ಸೈಟ್‌ನಲ್ಲಿ ನಿಂತು ಮಾತನಾಡುವ ಎಂದಿದ್ದೆ. ಕೆಲವರಿಗೆ ಮಾಸ್ಟರ್ ಪ್ಲಾನ್ ನೋಡಲು ಗೊತ್ತಿದೆ. ಕೆಲವರಿಗೆ ಮಾಸ್ಟರ್ ಪ್ಲಾನ್ ಅಂದರೆ ಏನೆಂದು ಗೊತ್ತಿಲ್ಲ ಎಂದ ಅವರು ಕಂಬಳದ ಗದ್ದೆಯನ್ನು ಪಕ್ಕಕ್ಕೆ ಸ್ಥಳಾಂತರಿಸುವ ಕುರಿತು ಚಿಂತನೆ ಮಾಡಿದ್ದೇನೆ. ಆಗ ಜಾಗ ತುಂಬಾ ಸಿಗುತ್ತದೆ. ದೇವಳದ ಹಿಂಬದಿಯಲ್ಲಿರುವ ಪೊಲೀಸ್ ಸ್ಟೇಷನ್, ಮನೆಗಳಿರುವ ಜಾಗ ದೇವಾಲಯಕ್ಕೆ ಸಂಬಂಧಿಸಿದ್ದು, ಅದನ್ನು ತೆಗೆದು ಕ್ಷೇತ್ರಕ್ಕೆ ಬರಲು ವಿಶಾಲವಾದ ರಸ್ತೆ, ಪಕ್ಕದ ತೋಡಿಗೆ ರಿಟೈನಿಂಗ್ ವಾಲ್ ಮಾಡಬೇಕು ಎಂಬ ಚಿಂತನೆ ಇದೆ. ಸುಮಾರು ರೂ.50 ರಿಂದ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಪ್ರಸ್ತಾಪ ನನ್ನ ಮುಂದಿದೆ. ಆದರೆ ಇಲ್ಲಿನ ಮಾಸ್ಟರ್ ಪ್ಲಾನ್ ಸರಕಾರಕ್ಕೆ ಹೋಗಿಲ್ಲ. ಇಲ್ಲಿ ರಫ್ ಸ್ಕೆಚ್ ಮಾಡಿ ಇಟ್ಟಿದ್ದಾರೆ. ಅದನ್ನು ಕೂಡಾ ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತೇನೆ. ಪಡಮಲೆಯಲ್ಲೂ ಅಭಿವೃದ್ಧಿ ಕಾರ್ಯ ಆಗಲಿದೆ ಎಂದರು. ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚೆಗಳ ಅಭಿವೃದ್ಧಿಯು ನಡೆಯಲಿದೆ. ಅಲ್ಪಸಂಖ್ಯಾತರ ರೂ. ೩ಕೋಟಿ ಅನುದಾನವನ್ನು ಮಸೀದಿಗಳ ಅಭಿವೃದ್ಧಿಗೆ ನೀಡಲಾಗುವುದು ಎಂದು ಶಾಸಕರು ಹೇಳಿದರು.


ಸುಸಜ್ಜಿತ ಆಟದ ಮೈದಾನ: ಪುತ್ತೂರಿನಲ್ಲಿ ಸುಜ್ಜಿತವಾದ ಆಟದ ಮೈದಾನ ಇರಬೇಕೆಂಬುದು ನನ್ನ ದೊಡ್ಡ ಕನಸು. ಬಾಸ್ಕೆಟ್‌ಬಾಲ್, ವಾಲಿಬಾಲ್, ಕ್ರಿಕೆಟ್, ಈಜುಕೊಳ ಸೌಲಭ್ಯವಿರುವ ಮೈದಾನ ಇರಬೇಕು. 20 ಎಕ್ರೆ ಜಾಗ ಸಾಮಾಜಿಕ ಅರಣ್ಯ ಇಲಾಖೆಯ ಹೆಸರಲ್ಲಿದ್ದು ಅವರಿಗೆ ಬದಲಿಯಾಗಿ 10 ಎಕ್ರೆ ಜಾಗ ಕೊಡುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಕಬಕದಲ್ಲಿ ಕ್ರಿಕೆಟ್ ಮೈದಾನಕ್ಕೆ ಗೊತ್ತುಪಡಿಸಿದ ಜಾಗವನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿ ಲೀಸಿಗೆ ತೆಗೆದುಕೊಂಡಿರುವುದನ್ನು ತಡೆ ಹಿಡಿದಿದ್ದೇನೆ. ಅವರು 3 ವರ್ಷದೊಳಗೆ ಇಂಟರ್‌ನ್ಯಾಷನಲ್ ಸ್ಟೇಡಿಯಂ ಮಾಡಿ ಅಭಿವೃದ್ಧಿ ಪಡಿಸಿದರೆ ಮಾತ್ರ ಮಾಡಬೇಕೆಂದು ಹೇಳಿದ್ದೇನೆ. ಯಾಕೆಂದರೆ ಅವರಿಗೆ ಹಣ ಮಾಡುವ ಉದ್ದೇಶ ಇರುವುದು ನನಗೆ ಚೆನ್ನಾಗಿ ಗೊತ್ತಿದೆ. ಬೀರಮಲೆ ಗುಡ್ಡೆಯ ಅಭಿವೃದ್ಧಿಗೆ ರೂ.1 ಕೋಟಿ ಪ್ರಸ್ತಾವನೆ ಕಳಿಸಿದ್ದೇನೆ ಎಂದು ಶಾಸಕರು ಹೇಳಿದರು. ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಸವಣೂರು ಸಹಿತ ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಚಾನೆಲ್, ಟಿವಿ, ಪತ್ರಿಕಾ ಮಾಧ್ಯಮದವರು ಭಾಗವಹಿಸಿದ್ದರು.

ಬೀರಮಲೆಯಲ್ಲಿ ರೋಪ್‌ವೇ ಯೋಜನೆ ಇಲ್ಲ
ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಪುತ್ತೂರನ್ನು ಪ್ರವಾಸೋದ್ಯಮವನ್ನಾಗಿ ಮಾಡುವ ನಿಟ್ಟಿನಲ್ಲಿ ಪುತ್ತೂರು ಬೀರಮಲೆ ಗುಡ್ಡೆಯಿಂದ ಬಾಲವನಕ್ಕೆ ರೋಪ್‌ವೇ ಮಾಡುವ ಯೋಜನೆ ಕುರಿತು ಪ್ರಸ್ತಾಪಿಸಿದ್ದರು. ಆದರೆ ಅವರ ಯೋಜನೆಯ ಕನಸು ಕನಸಾಗಿಯೇ ಉಳಿದಿದೆ. ಇದನ್ನು ನಿಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಇದೆಯೋ ಎಂದು ಪತ್ರಕರ್ತರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪ್ರಶ್ನಿಸಿದರು. ಉತ್ತರಿಸಿದ ಅಶೋಕ್ ಕುಮಾರ್ ರೈಯವರು ನಾವು ಆಗುವ ಕನಸು ಕಾಣಬೇಕು. ನನ್ನ ಆಲೋಚನೆಯಲ್ಲಿ ಇದಿಲ್ಲ. ನಾನು ಆಗುವುದನ್ನು ಮಾತ್ರ ಮಾಡುವುದು. ರೋಪ್‌ವೇಯನ್ನು ಖಾಸಗಿಯವರು ನಡೆಸಬೇಕು. ಅದಕ್ಕೆ ದೊಡ್ಡ ವೆಚ್ಚ ಇದೆ. ಸಿಂಗಾಪುರ, ಮಲೇಷಿಯಾದಲ್ಲಿ ಇಂತಹ ಯೋಜನೆ ಇದೆ. ಅದನ್ನು ಪುತ್ತೂರಿನಲ್ಲಿ ಮಾಡುತ್ತೇವೆ ಎಂದಾದರೆ ಇಲ್ಲಿ ಅಷ್ಟೆ ವೈಯಾಬಿಲಿಟಿ ಬೇಕಲ್ಲ. ವೈಯಾಬಿಲಿಟಿ ಇಲ್ಲದೆ ಇಲ್ಲಿ ಮಾಡುವಂತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಪುತ್ತೂರನ್ನು ಪ್ರವಾಸೋದ್ಯಮವನ್ನಾಗಿ ಮಾಡುವ ನಿಟ್ಟಿನಲ್ಲಿ ಪುತ್ತೂರು ಬೀರಮಲೆ ಗುಡ್ಡೆಯಿಂದ ಬಾಲವನಕ್ಕೆ ರೋಪ್‌ವೇ ಮಾಡುವ ಯೋಜನೆ ಕುರಿತು ಪ್ರಸ್ತಾಪಿಸಿದ್ದರು. ಆದರೆ ಅವರ ಯೋಜನೆಯ ಕನಸು ಕನಸಾಗಿಯೇ ಉಳಿದಿದೆ. ಇದನ್ನು ನಿಮ್ಮ ಅವಧಿಯಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಇದೆಯೋ ಎಂದು ಪತ್ರಕರ್ತರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಪ್ರಶ್ನಿಸಿದರು. ಉತ್ತರಿಸಿದ ಅಶೋಕ್ ಕುಮಾರ್ ರೈಯವರು ನಾವು ಆಗುವ ಕನಸು ಕಾಣಬೇಕು. ನನ್ನ ಆಲೋಚನೆಯಲ್ಲಿ ಇದಿಲ್ಲ. ನಾನು ಆಗುವುದನ್ನು ಮಾತ್ರ ಮಾಡುವುದು. ರೋಪ್‌ವೇಯನ್ನು ಖಾಸಗಿಯವರು ನಡೆಸಬೇಕು. ಅದಕ್ಕೆ ದೊಡ್ಡ ವೆಚ್ಚ ಇದೆ. ಸಿಂಗಾಪುರ, ಮಲೇಷಿಯಾದಲ್ಲಿ ಇಂತಹ ಯೋಜನೆ ಇದೆ. ಅದನ್ನು ಪುತ್ತೂರಿನಲ್ಲಿ ಮಾಡುತ್ತೇವೆ ಎಂದಾದರೆ ಇಲ್ಲಿ ಅಷ್ಟೆ ವೈಯಾಬಿಲಿಟಿ ಬೇಕಲ್ಲ. ವೈಯಾಬಿಲಿಟಿ ಇಲ್ಲದೆ ಇಲ್ಲಿ ಮಾಡುವಂತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಮೆಡಿಕಲ್ ಕಾಲೇಜಿಗಾಗಿ ಬೆಂಗಳೂರಿಗೆ ಕಾಲ್ನಡಿಗೆ !
ನನ್ನದು ಮೆಡಿಕಲ್ ಕಾಲೇಜು ಮೈನ್ ಅಜೆಂಡಾ. ಅದಕ್ಕೆ ರೂ.1ಸಾವಿರ ಕೋಟಿ ಅನುದಾನ ಬೇಕು. ಈ ಕುರಿತ ಸೌಲಭ್ಯ ದಕ್ಷಿಣ ಕನ್ನಡಕ್ಕೆ ಮರೀಚಿಕೆಯಾಗಿದೆ. ಈ ಕುರಿತು ಸದನದಲ್ಲಿ ಪ್ರಶ್ನೆ ಮಾಡಲು ಹೋದರೂ ಕೂಡಾ ನಮ್ಮ ಜೊತೆಯಲ್ಲಿದ್ದವರು ‘ಪಾತೆರೋಡ್ಚಿ ಮಾರ್ರೆ’ ಎಂದು ಹೇಳುವವರೇ ಇರುವುದು. ಆದರೆ ನಾನು ಅದನ್ನು ಮೀರಿ ಸದನದಲ್ಲಿ ಮಾತನಾಡಿದ್ದೆ. ಮುಖ್ಯಮಂತ್ರಿಯವರು ಮುಂದಿನ ಬಜೆಟ್‌ನಲ್ಲಿ ಕೊಡುವ ಎಂದು ಹೇಳಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಕೊಡದಿದ್ದರೆ ಪುತ್ತೂರಿನವರು ಸುಮಾರು 10ಸಾವಿರ ಮಂದಿ ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಹೋಗೋಣ. ಇದು ಪ್ರತಿಭಟನೆಯಲ್ಲ. ಅಲ್ಲಲ್ಲಿ ಟೆಂಟ್ ಹಾಕಿ ವಿಶ್ರಾಂತಿ ಪಡೆದು ಮುಂದೆ ಸಾಗೋಣ ಎಂದು ಶಾಸಕರು ಹೇಳಿದರು. ಮೆಡಿಕಲ್ ಕಾಲೇಜು ಆದರೆ ಎರಡುಮೂರು ಸಾವಿರ ಮಂದಿಗೆ ಕೆಲಸ ಸಿಗುತ್ತದೆ ಎಂದರು.

12 ದಿನದ ಕಲಾಪದಲ್ಲಿ 11ದಿನ ಮಾತನಾಡಿದ್ದೇನೆ
ಪ್ರಥಮ ಭಾರಿಗೆ ಶಾಸಕನಾದವ ಸದನದಲ್ಲಿ ಮಾತನಾಡಬೇಕಾದರೆ ಕನಿಷ್ಟ ಒಂದು ವರ್ಷ ತೆಗೆದು ಕೊಳ್ಳಬೇಕಾಗುತ್ತದೆ. ಆದರೆ ನಾನು ಆರಂಭದ ಕಲಾಪದಲ್ಲೇ ಮಾತನಾಡಲು ಆರಂಭಿಸಿದ್ದೆ. 12 ದಿವಸದ ಕಲಾಪದಲ್ಲಿ 11 ದಿನ ಮಾತನಾಡಿದ್ದೇನೆ. ಅದರಲ್ಲೂ ತುಳವಿನ ಬಗ್ಗೆ, ಮತದಾರರ ಬೇಡಿಕೆಯ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಮುಂದೆ ತುಳು ಅಕಾಡೆಮಿ ಅಧ್ಯಕ್ಷರಾಗುವವರು 5 ತಿಂಗಳಲ್ಲಿ 5 ಇಲಾಖೆಯ ಎನ್‌ಒಸಿ ಕೊಡಿಸಬೇಕು ಎಂದು ಶಾಸಕರು ಹೇಳಿದರು.

ಆ.15ಕ್ಕೆ ಶಾಸಕರ ಕಚೇರಿ ಉದ್ಘಾಟನೆ:
ತುರ್ತು ಆರೋಗ್ಯಕ್ಕೆ ಸಂಬಂಧಿಸಿ ಸ್ಪಂಧನೆ ನೀಡಲು ಪುತ್ತೂರು ಮತ್ತು ಬೆಂಗಳೂರಿನಲ್ಲಿ ವ್ಯವಸ್ಥೆ, ಇಲ್ಲಿಂದ ಬೆಂಗಳೂರಿಗೆ ಹೋದವರಿಗೆ ಸಹಾಯವಾಗಲು ವ್ಯವಸ್ಥೆ, ಕಂದಾಯ ವಿಭಾಗಕ್ಕೆ, ಟ್ರಸ್ಟ್ ಕೆಲಸಕ್ಕೆ, ಕಾಮಗಾರಿಯ ವಿಚಾರಗಳಿಗೆ ಪುತ್ತೂರಿನಲ್ಲಿ 7 ಮಂದಿ ಹಾಗೂ ಬೆಂಗಳೂರಿನಲ್ಲಿ 2 ಮಂದಿ ಸಹಾಯಕರು ಇರುತ್ತಾರೆ. ಜನರಿಗೆ ಉತ್ತಮ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಸರಕಾರದಿಂದ ಬರುವ ಎಲ್ಲಾ ಯೋಜನೆಗಳನ್ನು ಉಚಿತವಾಗಿ ಮಾಡಿಕೊಡಲು ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಶಾಸಕರ ಕಚೇರಿಯಲ್ಲೇ ತೆರೆಯಲಾಗುತ್ತದೆ. ಹಾಗಾಗಿ ಆ.15ಕ್ಕೆ ಕಚೇರಿ ಉದ್ಘಾಟನೆ ನಡೆಯಲಿದೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here