ಉಪ್ಪಿನಂಗಡಿ: ಮೋದಿಯ ಹಣ ತೆಗೆದು ಕೊಡುತ್ತೇನೆಂದು ವಂಚನೆ-ವೃದ್ಧರಿಂದ ಏಳು ಸಾವಿರ ಲಪಟಾಯಿಸಿದ ಅಪರಿಚಿತ

0

ಉಪ್ಪಿನಂಗಡಿ: ಅಡಿಕೆ ಅಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ಹಣದೊಂದಿಗೆ ಹಿಂದಿರುಗುತ್ತಿದ್ದ ವೇಳೆ ಹಿರಿಯ ನಾಗರಿಕರೋರ್ವರನ್ನು ಬೈಕ್‌ನಲ್ಲಿ ಬಂದ ಅಪರಿಚಿತನೋರ್ವ ಪರಿಚಿತನಂತೆ ಮಾತನಾಡಿ ಕೊರೋನಾ ಟೈಮ್‌ನಲ್ಲಿ ಮೋದಿಯ ಹಣ ಬೇಕಾದಷ್ಟು ಬಂದಿದೆ. ಅದನ್ನು ನಿಮಗೆ ಸಿಗುವ ಹಾಗೆ ಮಾಡುತ್ತೇನೆ ಎಂದು ನಂಬಿಸಿ, ಏಳು ಸಾವಿರ ರೂಪಾಯಿ ಪಡೆದುಕೊಂಡು ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪದ್ಮುಂಜ ಸಮೀಪದ 65ರ ಹರೆಯದ ವೃದ್ಧರೋರ್ವರು ಉಪ್ಪಿನಂಗಡಿಯ ಅಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ, ಅವರ ಬಳಿ ಬೈಕ್‌ನಲ್ಲಿ ಯುವಕನೋರ್ವ, ತುಳುವಿನಲ್ಲಿ `ಏನು ಗೌಡ್ರೆ? ಹೇಗಿದ್ದೀರಿ? ನಾನು ನಿಮ್ಮ ಮಗಳ ಶಾಲಾ ಸಹಪಾಠಿ ಮೋಹನ್ ಅಂತ ತನ್ನನ್ನು ಪರಿಚಯಿಸಿಕೊಂಡಿದ್ದಲ್ಲದೆ, ತಾನೀಗ ಕೆನರಾ ಬ್ಯಾಂಕ್‌ನಲ್ಲಿರೋದು. ಮನುಷ್ಯನೆಂದವ ಯಾರಿಗಾದರೂ ಉಪಕಾರವಾಗಬೇಕು ಅಲ್ವೇ? ಕೊರೋನಾ ಟೈಂನಲ್ಲಿ ಬಂದ ಮೋದಿಯವರ ಹಣ ಬ್ಯಾಂಕ್‌ನಲ್ಲಿ ಹಾಗೆನೇ ಕೊಳೆಯುತ್ತಾ ಇದೆ. ಅದನ್ನು ಯಾರ ಅಕೌಂಟ್‌ಗೂ ಹಾಕಬಹುದು. ನಿಮ್ಮ ಪಾಸ್ ಪುಸ್ತಕ, ಆಧಾರ್ ಕಾರ್ಡ್ನ ಜೆರಾಕ್ಸ್ ಕಾಪಿ ಕೊಟ್ಟರೆ ಸಾಕು. ಅದಕ್ಕಾಗಿ ನೀವು ನನಗೆ 7 ಸಾವಿರ ರೂಪಾಯಿ ಹಣ ನೀಡಿದರೆ ಸಾಕು ಎಂದೆಲ್ಲಾ ಮಾತಿನಲ್ಲಿ ನಂಬಿಸಿ, ಬ್ಯಾಂಕ್ ಪಾಸು ಪುಸ್ತಕ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ತರುವ ಮುನ್ನ ನನಗೆ 7000 ರೂಪಾಯಿ ಹಣವನ್ನು ನೀಡಿ ಎಂದು ಒತ್ತಾಯಿಸಿದನಂತೆ. ಆತನ ಮಾತನ್ನು ನಂಬಿದ ಅವರು ಅಡಿಕೆ ಮಾರಾಟದಿಂದ ಬಂದಿರುವ ಹಣದಿಂದ 7,000 ರೂಪಾಯಿ ಹಣವನ್ನು ಆತನ ಕೈಗಿತ್ತು. ಪಾಸು ಪುಸ್ತಕ ಹಾಗೂ ಆಧಾರ್ ಕಾರ್ಡ್ನ ಜೆರಾಕ್ಸ್ ತರಲು ಹೋದರು.

ಜೆರಾಕ್ಸ್ ಪ್ರತಿಯೊಂದಿಗೆ ಹಿಂದಿರುಗಿದಾಗ ಬೈಕಿನೊಂದಿಗೆ ಯುವಕನೂ ನಾಪತ್ತೆಯಾಗಿದ್ದ. ಬಹಳಷ್ಟು ಹೊತ್ತು ಆತನಿಗಾಗಿ ಕಾದು ಕಾದು ಬಸವಳಿದಾಗ ತಾನು ಮೋಸ ಹೋಗಿರುವ ಶಂಕೆ ಮನದಲ್ಲಿ ಮೂಡಿತ್ತು. ಕಂಗೆಟ್ಟು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೇಟೆಯೊಳಗಿನ ಸಿಸಿ ಕ್ಯಾಮಾರ ದಲ್ಲಿನ ದೃಶ್ಯಾವಳಿಯ ಮೂಲಕ ವಂಚಕನ ಗುರುತು ಪತ್ತೆಗೆ ಶ್ರಮಿಸುತ್ತಿದ್ದಾರೆ. ಮೋದಿ ಹಣ ಬಂದಿದೆ ಎಂದು ನಂಬಿಸಿ ಅಮಾಯಕರಿಂದ ಏಳು ಸಾವಿರ ರೂಪಾಯಿ ಹಣವನ್ನು ಎಗರಿಸುತ್ತಿರುವ ಹಲವು ಪ್ರಕರಣಗಳು ಈ ಪರಿಸರದಲ್ಲಿ ನಡೆದಿದ್ದು, ಎಲ್ಲಾ ಪ್ರಕರಣದಲ್ಲಿಯೂ ವಂಚಕ ಕಬಳಿಸುತ್ತಿದ್ದ ಮೊತ್ತ ಏಳು ಸಾವಿರ ರೂ. ಮಾತ್ರ ಎಂಬುದು ಗಮನಾರ್ಹ. ಬಹಳಷ್ಟು ಮುನ್ನೆಚ್ಚರಿಕೆ ವಹಿಸುತ್ತಿರುವ ವ್ಯಕ್ತಿಗಳೂ ಈ ವಂಚಕ ತಂಡಕ್ಕೆ ಸಿಲುಕುತ್ತಿದ್ದು, ಸಮ್ಮೋಹನ ವಿದ್ಯೆಯನ್ನು ಬಳಸಿ ವಂಚನೆ ನಡೆಸಲಾಗುತ್ತಿದೆಯೇ ಎಂಬ ಶಂಕೆ ಉದ್ಭವಿಸಿದೆ. ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಜಾಗರೂಕರಾಗಬೇಕಾಗಿದೆ.

LEAVE A REPLY

Please enter your comment!
Please enter your name here