ಮೂರು ದಿನಗಳು ನಡೆಯುವ ಪುಸ್ತಕ ಹಬ್ಬ, ಪುಸ್ತಕದಾನಿಗಳ ಮೇಳ, ಸಾಹಿತ್ಯ ವೈಭವಕ್ಕೆ ಚಾಲನೆ

0

ನಮ್ಮ ಸಂಸ್ಕೃತಿ ಪರಿಚಯಿಸಲು ನಮ್ಮ ಭಾಷೆಯ ಅಗತ್ಯ – ಸಂಜೀವ ಮಠಂದೂರು
ಪರಿಷತ್‌ನಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಆಗಬೇಕು – ಡಾ| ಶ್ರೀನಾಥ್
ಪುಸ್ತಕ ಕೊಳ್ಳಲು ಉತ್ಸಾಹ ಹುಮ್ಮಸ್ಸು ಬರಲಿ – ಪ್ರೊ. ವಿ.ಬಿ.ಅರ್ತಿಕಜೆ
ಓದುವ ಹವ್ಯಾಸ ಬೆಳೆಯಲು ಭಿನ್ನ ಕಾರ್ಯಕ್ರಮ – ಪುತ್ತೂರು ಉಮೇಶ್ ನಾಯಕ್

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಇವರ ಸಹಕಾರದೊಂದಿಗೆ ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮೂರು ದಿನಗಳು ನಡೆಯುವ ‘ಪುಸ್ತಕ ಹಬ್ಬ’, ‘ಪುಸ್ತಕದಾನಿಗಳ ಮೇಳ’ ಮತ್ತು ‘ಸಾಹಿತ್ಯ ವೈಭವ’ವಕ್ಕೆ ಆ.11ರಂದು ಚಾಲನೆ ನೀಡಲಾಯಿತು. ದ್ವಾರಕಾ ಕನ್ಸ್ ಸ್ಟ್ರಕ್ಷನ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಅವರು ಆರಂಭದಲ್ಲಿ ಪುಸ್ತಕ ಮೇಳದ ಉದ್ಘಾಟಿಸಿದ ಬಳಿಕ ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ನಡೆಯಿತು.


ನಮ್ಮ ಸಂಸ್ಕೃತಿ ಪರಿಚಯಿಸಲು ನಮ್ಮ ಭಾಷೆಯ ಅಗತ್ಯ:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜವನ್ನು ಪರಿವರ್ತನೆ ಮಾಡಲು ಪುಸ್ತಕದ ಮಹತ್ವ ಬಹಳಷ್ಟಿದೆ. ಇದರ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಪುಸ್ತಕ ಹಬ್ಬದ ಮೂಲಕ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಮೊದಲು ನಮ್ಮ ಭಾಷೆಯ ಪರಿಚಯವಾಗಬೇಕು ಎಂದ ಅವರು ಈ ಹಿಂದೆ ಕನ್ನಡದ ಸ್ಥಳಕ್ಕಾಗಿ ಬೇಡಿಕೆ ಬಂದಾಗ ನಾನು ಸಾಲ್ಮರ ದೇವರಾಜ ಅರಸು ಬಳಿಯ ಮೌಲಾನ ಆಜಾದ್ ಶಾಲೆಯ ಪಕ್ಕದಲ್ಲಿ ಜಾಗ ಗುರುತಿಸುವ ಪ್ರಯತ್ನ ಮಾಡಿದ್ದೇನೆ. ಈಗ ಮಾಜಿ ಶಾಸಕನಾದರೂ ಕನ್ನಡದ ಅಭಿಮಾನಿ ಎಂದರು. ಶಾಸಕನಾಗಿದ್ದ ಸಂದರ್ಭದಲ್ಲಿ ಸಂಜೀವ ಮಠಂದೂರು ಅವರು ಕನ್ನಡ ಸಾಹಿತ್ಯ ಪರಿಷತ್ ಗೆ ಜಾಗ ಗುರುತಿಸಿಕೊಟ್ಟ ಹಿನ್ನಲೆಯಲ್ಲಿ ಅವರನ್ನು ಪರಿಷತ್ ವತಿಯಿಂದ ಅಭಿನಂದಿಸಲಾಯಿತು.


ಪರಿಷತ್‌ನಲ್ಲಿ ಸದಸ್ಯರ ಸಂಖ್ಯೆ ಜಾಸ್ತಿ ಆಗಬೇಕು:
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ದ.ಕ.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಅವರು ಮಾತನಾಡಿ ನಾನು ಬಹಳಷ್ಟು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಭಾಗವಹಿಸಿದ್ದೆನೆ. ಕಳೆದ ಒಂದೂವರೆ ವರ್ಷದಿಂದ ದಕ್ಷಿಣಕನ್ನಡ ಸಾಹಿತ್ಯ ಪರಿಷತ್ ಸುಮಾರು 300ಕ್ಕೂ ಅಧಿಕ ಕಾರ್ಯಕ್ರಮ ಮಾಡುವ ಮೂಲಕ ಸಾಹಿತ್ಯವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಿದ್ದೇವೆ. ಸಾಹಿತ್ಯ ಪರಿಷತ್‌ನ ಕಾರ್ಯಕ್ರಮದ ಮೇಲೆ ತುತ್ತ ತುದಿಯಲ್ಲಿರುವವರು ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಇದ್ದಾರೆ. ಅವರು 125ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿದ್ದಾರೆ. ಅವರನ್ನು ಜಿಲ್ಲಾ ಪರಿಷತ್‌ನಿಂದ ಅಂಭಿನಂದಿಸುತ್ತೇವೆ ಎಂದರು. ಇವತ್ತು ಅನಾರೋಗ್ಯದಿಂದ ಮನೆಯಲ್ಲಿರುವ ಸಾಹಿತಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಜಿಲ್ಲೆಯಿಂದ ನಡೆಯುತ್ತಿದೆ. ಅದನ್ನು ಪುತ್ತೂರಿಗೂ ವಿಸ್ತರಿಸಲಾಗುವುದು. ಇದರ ಜೊತೆಗೆ ಪುತ್ತೂರು ತಾಲೂಕಿನಲ್ಲಿ ಸುಮಾರು 400ರಷ್ಟು ಮಾತ್ರ ಸಾಹಿತ್ಯ ಪರಿಷತ್‌ಗೆ ಸದಸ್ಯರಿದ್ದಾರೆ. ಈ ಸದಸ್ಯತ್ವ ಜಾಸ್ತಿ ಮಾಡಬೇಕು ಎಂದರು.


ಪುಸ್ತಕ ಕೊಳ್ಳಲು ಉತ್ಸಾಹ ಹುಮ್ಮಸ್ಸು ಬರಲಿ:
ಪ್ರಥಮ ಪುಸ್ತಕಗಳನ್ನು ದಾನಿಗಳಾದ ಪ್ರೊ.ಬಿ.ವಿ.ಅರ್ತಿಕಜೆ ಅವರು ವಿತರಣೆ ಮಾಡಿ ಮಾತನಾಡಿ ಕೆಲವು ವರ್ಷಗಳ ಹಿಂದೆಯೂ ಇದನ್ನೇ ಮಾಡಿದ್ದೇವೆ. ಪುಸ್ತಕ ಕೊಳ್ಳುವವರು ಅರ್ಹರು ಬೇಕಾಗಿದ್ದಾರೆ. ಕೊಳ್ಳುವವರೇ ಇಲ್ಲದಿದ್ದರೇ ಏನು ಮಾಡುವುದು ಎಂದ ಅವರು ಆರಂಭಿಸುವುದು ಸುಲಭ. ಅದನ್ನು ಮುಂದುವರಿಸಬೇಕು. ಪುಸ್ತಕ ಕೊಳ್ಳಲು ಉತ್ಸಾಹ ಮತ್ತು ಹುಮ್ಮಸು ಬೇಕು ಎಂದರು. ಹಿಂದೊಮ್ಮೆ ಪುತ್ತೂರು ಪತ್ರಿಕಾ ಭವನದಲ್ಲಿ ಪತ್ರಕರ್ತರಿಗೆ ಕೆಲವೊಂದು ಪುಸ್ತಕ ಕೊಟ್ಟಿದ್ದೆ. ಆದರೆ ಅದು ಮತ್ತೆ ನೋಡುವಾಗ ಕಸದ ಬುಟ್ಟಿ ಸೇರಿತ್ತು. ಕಸದ ಬುಟ್ಟಿಯಲ್ಲಿದ್ದ ಪುಸ್ತಕವನ್ನು ನಾನು ಮತ್ತೆ ಪಡೆದು ಬೇರೆ ಶಾಲೆಗೆ ಕೊಟ್ಟೆ ಎಂದು ನೆನಪಿಸಿಕೊಂಡರು.


ಓದುವ ಹವ್ಯಾಸ ಬೆಳೆಯಲು ಭಿನ್ನ ಕಾರ್ಯಕ್ರಮ:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ಆಶಯದಂತೆ ಹಳ್ಳಿಗೂ ಸಾಹಿತ್ಯ ಪಸರಿಸಬೇಕೆಂಬ ಚಿಂತನೆಯಂತೆ ನಾವು ಹಳ್ಳಿ ಹಳ್ಳಿಗೂ ಕಾರ್ಯಕ್ರಮ ಮಾಡುತ್ತಿದ್ದೇವೆ. ಇವತ್ತು ಯುವಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಒಂದು ಪುಸ್ತಕ ಉಚಿತವಾಗಿ ನೀಡುವ ಹಾಗು ಪುಸ್ತಕ ದಾನ ಮಾಡುವ ಮೂಲಕ ಪುಸ್ತಕ ದಾನಿಗಳ ಮೇಳವನ್ನು ಭಿನ್ನ ರೀತಿಯ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.


ಕೃತಿ ಬಿಡುಗಡೆ:
ಸಾಗಿತಿ ಸಂಧ್ಯಾ ದತ್ತಾತ್ರೇಯ ರಾವ್ ಇವರ ‘ಸಕ್ಕರೆ ಗೊಂಬೆ’ (ಮಕ್ಕಳ ಕವನ ಸಂಕಲನ) ಹಾಗೂ ‘ಭಾವ ದ್ಯುತಿ’ (ಕವನ ಸಂಕಲನ) ಕೃತಿಗಳನ್ನು ವಿವೇಕಾನಂದ ಸ್ವಾಯತ್ತ ಪರೀಕ್ಷಾ ಕೇಂದ್ರದ ಕುಲಸಚಿವ ಹಿರಿಯ ಸಾಹಿತಿ ಡಾ.ಎಚ್.ಜಿ.ಶ್ರೀಧರ್ ಬಿಡುಗಡೆ ಮಾಡಿ ಮಾತಮಾಡಿ ಈ ಕವಿತೆಯಲ್ಲಿರುವ ಭರವಸೆಯನ್ನು ಸಂಭ್ರಮಿಸುವ ಮನೋಧರ್ಮವಿದೆ ಎಂದರು. ಕೃತಿಯ ಕುರಿತು ಮಾತನಾಡಿದರು. ಸಾಹಿತಿ ಶಂಕರಿ ಶರ್ಮ ಅವರು ಕೃತಿಕಾರರನ್ನು ಪರಿಚಯಿಸಿದರು.


ಕನ್ನಡ ಗೊತ್ತಿಲ್ಲದ ಬ್ಯಾಂಕ್ ಉದ್ಯೋಗಿಗೆ ಕನ್ನಡ ಪುಸ್ತಕ ನೀಡಿ ಗೌರವ:
ಕನ್ನಡ ಗೊತ್ತಿಲ್ಲದ ಬ್ಯಾಂಕ್ ನೌಕರರಿಗೆ ಕನ್ನಡ ಕಲಿಸುವ ಅಭಿಯಾನಕ್ಕೆ ಸಂಬಂಧಿಸಿ ಕೇರಳ ನಿವಾಸಿ ಯೂನಿಯನ್ ಬ್ಯಾಂಕ್ ಮಾರ್ಕೆಟಿಂಗ್ ಮ್ಯಾನೇಜರ್ ಜಲ್ವಿನ್ ಜಾನ್ ವಿನ್ ಅವರಿಗೆ ಕನ್ನಡ ಪಸ್ತಕ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ನಾನು ಕನ್ನಡವನ್ನು ಕಲಿಯುತ್ತೇನೆಂದು ಜಲ್ವಿನ್ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಶಾಖಾ ಪ್ರಬಂಧಕ ಸುರೇಶ್ ನಾಯಕ್ ಉಪಸ್ಥಿತರಿದ್ದರು.

ಹಿರಿಯ ವೈದ್ಯರಾದ ಡಾ.ಸುಧಾ ರಾವ್, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ ಐತ್ತಪ್ಪ ನಾಯ್ಕ್ ಮಾತನಾಡಿದರು. ಪ್ರಕಾಶ್ ಕೊಡೆಂಕಿರಿ, ಕೃತಿಕಾರ ಸಂಧ್ಯಾ ದತ್ತಾತ್ರೆಯ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾಂದ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ ನ ಪುತ್ತೂರು ಘಟಕದ ಗೌರವ ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕೋಶಾಧಿಕಾರಿ ಡಾ| ಹರ್ಷಕುಮಾರ್ ರೈ ವಂದಿಸಿದರು. ಕೆಯ್ಯೂರು ಶಾಲೆಯ ಮುಖ್ಯಗುರು ಬಾಬು ಎಂ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕೋಶಾಧ್ಯಕ್ಷ ಡಾ| ಹರ್ಷಕುಮಾರ್ ರೈ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೊಳುವಾರುಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರಿಂದ ‘ಮಾಗಧ ವಧೆ’ ಪ್ರಸಂಗದ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here