ರಸ್ತೆ ತಡೆ, ಬಂದ್‌ನಿಂದ ತೊಂದರೆಗೊಳಗಾದವರು ನರಳಿ ಶಾಪ ಹಾಕುತ್ತಾ ಹೆದರಿ ಅದನ್ನು ಸಹಿಸಿಕೊಳ್ಳುತ್ತಾರೆ. ಪ್ರೀತಿಯಿಂದಲ್ಲ. ಅಂತಹ ಒತ್ತಾಯದ ಬೆಂಬಲ ಬೇಕೇ?.
ಅದರ ಬದಲು ಜನರ ಪ್ರೀತಿ, ವಿಶ್ವಾಸ ಗಳಿಸುವ ಹೋರಾಟ ನಿಮ್ಮದಾಗಲಿ
ರಸ್ತೆ ತಡೆ, ಬಂದ್‌ನಿಂದ ದಿನನಿತ್ಯ ದುಡಿಯುವವರು, ವ್ಯಾಪಾರಿಗಳು, ರಿಕ್ಷಾ ವಾಹನ ಚಾಲಕರು, ದುಡಿಮೆ ಮತ್ತು ಚಲನೆಯನ್ನು ನಂಬಿಕೊಂಡು ಬದುಕುವವರು, ಇಡೀ ದಿನ ದುಡಿದರೂ ಜೀವನಕ್ಕೆ ಸಾಕಾಗದವರು, ೧೦ ನಿಮಿಷ ತಡವಾದರೂ ಜೀವ, ಜೀವನ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿರುವವರು ಅಪಾರ ಬಂಡವಾಳದ ರಿಸ್ಕ್ ಇರುವವರನ್ನೆಲ್ಲಾ ವಿಚಾರಿಸಿ ನೋಡಿ.
ಬಂದ್, ರಸ್ತೆ ತಡೆಯಿಂದ ಹಿಂಸೆಗೆ, ತೊಂದರೆಗೆ ಒಳಗಾಗುವ ಜನರ ದುಃಖಃದ ಪರಿಸ್ಥಿತಿ ತಮಗೆ ಬಂದರೆ ಹೇಗಾದೀತು? ಎಂದು ಪ್ರತಿಯೊಬ್ಬರಲ್ಲಿ ವಿಶೇಷವಾಗಿ ಅದಕ್ಕೆ ಕರೆಕೊಟ್ಟ ಪ್ರತಿಭಟನಾಕಾರರು ನೆನೆಸಿಕೊಂಡರೆ ಬಂದ್, ರಸ್ತೆ ತಡೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಬಹುದು.
ಸೌಜನ್ಯರಿಗೆ ನ್ಯಾಯ ದೊರಕುವ ಹೋರಾಟಕ್ಕೆ ಊರಿನ ಎಲ್ಲರೂ ಬೆಂಬಲ ನೀಡುತ್ತಿರುವಾಗ ಬಂದ್ ಮತ್ತು ರಸ್ತೆ ತಡೆಗೆ ಕೊಟ್ಟಿರುವ ಕರೆ ಜನರ ಸ್ವಾತಂತ್ರ ನಾಶಕ್ಕೆ ಕಾರಣವಾಗುವುದು ಮಾತ್ರವಲ್ಲ ವಿನಾಕಾರಣ ನಿರಪರಾಧಿಗಳಿಗೆ ತೊಂದರೆ ಎಂದು ಜನತೆ (ಅದನ್ನು ಬೆಂಬಲಿಸುವವರು) ಮತ್ತು ಪುತ್ತಿಲ ಪರಿವಾರದವರು ಅರ್ಥ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ ತಮ್ಮ ಬೆಂಬಲಿಗರ, ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಬಹುದೇ ಹೊರತು ಜಾಸ್ತಿಯಾಗದು ಎಂದು ಪುತ್ತಿಲ ಪರಿವಾರದವರು ತಿಳಿದುಕೊಳ್ಳಬೇಕು.
ಬಂದ್, ರಸ್ತೆ ತಡೆ ಕಾನೂನು ಬಾಹಿರ. ಅದರಿಂದ ಜನರಿಗೆ ಆಗುವ ತೊಂದರೆಗಳಿಗೆ ಜವಾಬ್ದಾರಿ ಮತ್ತು ಪರಿಹಾರವನ್ನು ಅದಕ್ಕೆ ಕರೆ ಕೊಟ್ಟ ಸಂಘಟಕರೆ ಕೊಡಬೇಕೆಂದು ನ್ಯಾಯಾಲಯದ ಆದೇಶವಿದೆ ಎಂಬುವುದನ್ನು ತಿಳಿಸುವ ಮೂಲಕ ಜನತೆಯಲ್ಲಿ ಜಾಗೃತಿ ಉಂಟು ಮಾಡುತ್ತಿದ್ದೇವೆ. ಯಾರಿಗೂ ತೊಂದರೆಯಾಗದಂತೆ ಕಾರ್ಯಕ್ರಮ ನಡೆಯಲಿ ಎಂಬ ಆಶಯವನ್ನು ಹೊಂದಿದ್ದೇನೆ.
ಸೌಜನ್ಯಳ ಪರ ಹೋರಾಟದಲ್ಲಿ ರಸ್ತೆ ತಡೆ ಬಿಟ್ಟರೆ ಕಾರ್ಯಕ್ರಮದ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಉಚಿತ ಪ್ರಚಾರನೀಡುತ್ತೇವೆ.