ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಲ್ಲಿ ನಡೆದ ಮಾರುತಿ ಓಮ್ನಿ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕೃಷಿ ಕೂಲಿ ಕಾರ್ಮಿಕ ಆ.14ರ ಮುಂಜಾನೆ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಒಳಮೊಗ್ರು ಗ್ರಾಮದ ಅರಂತನಡ್ಕ ನಿವಾಸಿ ನಾರಾಯಣ (26ವ.) ಮೃತಪಟ್ಟರು. ಆ.13ರಂದು ರಾತ್ರಿ ಪುತ್ತೂರಿಗೆ ಬಂದಿದ್ದ ತನ್ನ ದೂರದ ಸಂಬಂಧಿಯನ್ನು ಮನೆಗೆ ಕರೆದುಕೊಂಡು ಬರಲು ಬೈಕ್ ನಲ್ಲಿ ತೆರಳುತ್ತಿರುವ ವೇಳೆ ಮುಕ್ರಂಪಾಡಿ ಪೆಟ್ರೋಲ್ ಬಂಕ್ ಬಳಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಾರುತಿ ಓಮ್ನಿ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸವಾರ ನಾರಾಯಣರವರನ್ನು ಇಲ್ಲಿನ ಮಹಾವೀರ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಜ್ಜಿ ಮನೆಯಲ್ಲಿ ವಾಸವಿದ್ದರು…
ಕೆಮ್ಮಾಯಿ ನಿವಾಸಿ ಕೊರಗಪ್ಪ ಎಂಬವರ ಪುತ್ರನಾಗಿರುವ ನಾರಾಯಣ ಹಾಗೂ ಅವರ ಸಹೋದರ ಚಂದ್ರ ಯಾನೆ ಸುಂದರ ಇವರಿಬ್ಬರು ಕೆಲ ವರ್ಷಗಳ ಹಿಂದೆ ತನ್ನ ತಾಯಿಯ ನಿಧನದ ಬಳಿಕ ಒಳಮೊಗ್ರು ಅರಂತನಡ್ಕದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸ್ತವ್ಯವಿದ್ದ ಊರಿನಲ್ಲಿಯೇ ಕೃಷಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆ.13ರಂದು ಕೆಲಸದ ನಿಮಿತ್ತ ಪುತ್ತೂರಿಗೆ ಬಂದಿದ್ದ ಸಂಬಂಧಿ ಶೇಖರರವರು ರಾತ್ರಿ ವೇಳೆ ಮನೆಗೆ ಹಿಂತಿರುಗಲು ವಾಹನ ದೊರೆಯದೆ ಪುತ್ತೂರಿನಲ್ಲಿ ಉಳಿದಿದ್ದರು. ಹೀಗಾಗಿ ಶೇಖರವರು ತನ್ನನ್ನು ಕರೆದುಕೊಂಡು ಹೋಗಲು ಬರಲು ತಿಳಿಸಿದಂತೆ ನಾರಾಯಣ ರವರು ಬೈಕ್ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಅವರು ಮೃಪಟ್ಟಿದ್ದಾರೆ ಎನ್ನಲಾಗಿದೆ.