ಒಳಮೊಗ್ರು ಗ್ರಾ ಪಂ ತ್ರಿವೇಣಿ ಪಲ್ಲತ್ತಾರ್‌ಗೆ ಒಲಿದ ಅದೃಷ್ಟ ಲಕ್ಷ್ಮೀ – ಎರಡನೇ ಬಾರಿಗೆ ಅಧ್ಯಕ್ಷೆಯಾಗಿ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷರಾಗಿ ಅಶ್ರಫ್ ಉಜಿರೋಡಿ ಆಯ್ಕೆ

0

ಪುತ್ತೂರು: ಬಹಳಷ್ಟು ಕುತೂಹಲ ಕೆರಳಿಸಿದ್ದ ಒಳಮೊಗ್ರು ಗ್ರಾಮ ಪಂಚಾಯತ್‌ನ ಎರಡನೇ ಹಂತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷೆಯಾಗಿ ತ್ರಿವೇಣಿ ಪಲ್ಲತ್ತಾರು ಹಾಗೂ ಉಪಾಧ್ಯಕ್ಷರಾಗಿ ಅಶ್ರಫ್ ಉಜಿರೋಡಿಯವರು ಟಾಸ್ ವಿನ್ ಮೂಲಕ ಆಯ್ಕೆಯಾಗಿದ್ದಾರೆ. ಒಟ್ಟು 15 ಸದಸ್ಯ ಬಲ ಹೊಂದಿರುವ ಗ್ರಾ.ಪಂನಲ್ಲಿ 7 ಮಂದಿ ಬಿಜೆಪಿ ಹಾಗೂ 7 ಮಂದಿ ಕಾಂಗ್ರೆಸ್ ಹಾಗೂ ಓರ್ವ ಎಸ್‌ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿತ್ತು. ಅದರಂತೆ ಆ.14ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಬಿ.ಸಿ ಚಿತ್ರಾರವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮಹೇಶ್ ರೈ ಕೇರಿ, ಅಶ್ರಫ್ ಉಜಿರೋಡಿ ಹಾಗೂ ಅಬ್ದುಲ್ ಸಿರಾಜುದ್ದೀನ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯದೇ ಇದ್ದುದರಿಂದ ಚುನಾವಣೆ ನಡೆಯಿತು.15 ಮಂದಿ ಸದಸ್ಯರಲ್ಲಿ ಓರ್ವ ಸದಸ್ಯ ಲತೀಫ್ ಟೈಲರ್‌ರವರು ಚುನಾವಣೆಗೆ ಗೈರು ಹಾಜರಾಗಿದ್ದರು. ಚುನಾವಣೆಯಲ್ಲಿ ತ್ರಿವೇಣಿ ಪಲ್ಲತ್ತಾರು ಹಾಗೂ ಬಿ.ಸಿ ಚಿತ್ರಾರವರು ತಲಾ 7 ಮತಗಳನ್ನು ಪಡೆದುಕೊಂಡಿದ್ದರು. ಉಪಾಧ್ಯಕ್ಷ ಸ್ಥಾನದ ಮಹೇಶ್ ರೈ ಕೇರಿ ಹಾಗೂ ಅಶ್ರಫ್ ಉಜಿರೋಡಿಯವರು ತಲಾ 7 ಮತಗಳನ್ನು ಪಡೆದುಕೊಂಡಿದ್ದರೆ ಅಬ್ದುಲ್ ಸಿರಾಜುದ್ದೀನ್‌ರವರು ಯಾವುದೇ ಮತಗಳನ್ನು ಪಡೆದುಕೊಂಡಿರಲಿಲ್ಲ. ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಇದರಲ್ಲಿ ಅಧ್ಯಕ್ಷರಾಗಿ ತ್ರಿವೇಣಿ ಪಲ್ಲತ್ತಾರು ಹಾಗೂ ಉಪಾಧ್ಯಕ್ಷರಾಗಿ ಅಶ್ರಫ್ ಉಜಿರೋರಿ ಜಯಗಳಿಸಿದರು. ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕಿ ರೇಖಾರವರು ಚುನಾವಣಾ ಅಧಿಕಾರಿಯಾಗಿ ನಡೆಸಿಕೊಟ್ಟರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಕಾರ್ಯದರ್ಶಿ ಜಯಂತಿ, ಸಿಬ್ಬಂದಿಗಳಾದ ಜಾನಕಿ, ಕೇಶವ, ಗುಲಾಬಿ, ಮೋಹನ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here