ಗ್ರಾಮಸಭೆ ಸಂದರ್ಭ ವೈದ್ಯರು ಕುಸಿದು ಬಿದ್ದ ಪ್ರಕರಣ-ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ದೂರು

0

ಉಪ್ಪಿನಂಗಡಿ: ಕಳೆದ ಆ.9ರಂದು ನಡೆದ ಗೋಳಿತ್ತೊಟ್ಟು ಗ್ರಾಮ ಸಭೆಯಲ್ಲಿ ನೆಲ್ಯಾಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರ ಮೇಲೆ ಅನಗತ್ಯ ಪ್ರಶ್ನೆಗಳೊಂದಿಗೆ ಮಾನಸಿಕ ಹಿಂಸೆ ಹಾಗೂ ಒತ್ತಡವನ್ನು ನೀಡಿ, ಅವರು ಕುಸಿದು ಬೀಳುವಂತೆ ಮಾಡಿರುವುದಲ್ಲದೆ, ವೈದ್ಯರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆಗೆ ಒಳಗಾಗಿರುವುದರಿಂದ ತಪ್ಪಿತಸ್ಥ ಗ್ರಾಮಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ದ.ಕ. ಜಿಲ್ಲಾ ಶಾಖೆಯ ವತಿಯಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆ.14ರಂದು ದೂರು ನೀಡಲಾಯಿತು.


ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಶಿಶಿರ ಇಲಾಖೆಯ ಮಾಹಿತಿ ನೀಡುತ್ತಿದ್ದಾಗ, ಗ್ರಾಮಸ್ಥರಾದ ಡೀಕಯ್ಯ ಪೂಜಾರಿ ಹಾಗೂ ಗಣೇಶ್ ಎಂಬಿಬ್ಬರು ವಿದ್ಯಾರ್ಥಿನಿಯೋರ್ವಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ವೈದ್ಯಾಧಿಕಾರಿಯವರು ಸೂಕ್ತ ಉತ್ತರ ನೀಡಿದ್ದರೂ, ಸದ್ರಿ ಗರ್ಭಿಣಿಯಾಗಿದ್ದ ವೈದ್ಯರನ್ನು 40 ನಿಮಿಷ ವೇದಿಕೆಯಲ್ಲಿ ನಿಲ್ಲಿಸಿ, ಪದೇ ಪದೇ ಪ್ರಶ್ನೆಯನ್ನು ಕೇಳಿದ್ದಲ್ಲದೆ, ವೈದ್ಯರೇ ವಿದ್ಯಾರ್ಥಿನಿಯನ್ನು ಸಾಯಿಸಿದ ರೀತಿಯಲ್ಲಿ ವೈದ್ಯರಿಗೆ ಮಾನಸಿಕ ಹಿಂಸೆ ಹಾಗೂ ಒತ್ತಡವನ್ನು ನೀಡಿದ್ದರಿಂದ ಅವರು ಕುಸಿದು ಬಿದ್ದಿರುತ್ತಾರೆ. ಗ್ರಾಮ ಸಭೆಯ ಚರ್ಚಾ ನಿಯಂತ್ರಣಾಧಿಕಾರಿಯವರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾ.ಪಂ.ನ ಅಧ್ಯಕ್ಷ- ಉಪಾಧ್ಯಕ್ಷರು ಹಾಗೂ ಸದಸ್ಯರು ಅಲ್ಲೇ ಹಾಜರಿದ್ದರೂ, ಅವರು ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಬಳಿಕ ವೈದ್ಯರನ್ನು ಆಸ್ಪತ್ರೆಯ ಸಿಬ್ಬಂದಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರಿಗೆ ಗರ್ಭಪಾತವಾಗಿದೆ ಹಾಗೂ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆ.10ರಂದು ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ವೆಂಟಿಲೇಟರ್ ಚಿಕಿತ್ಸೆ ನೀಡಲಾಗಿದ್ದು, ಅವರು ಸಾವು- ಬದುಕಿನ ಹೋರಾಟದಲ್ಲಿ ಇದ್ದಾರೆ. ಡಾ. ಶಿಶಿರ ಅವರು ಸಾರ್ವಜನಿಕವಾಗಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಆದ್ದರಿಂದ ಅವರು ಈ ರೀತಿ ಆಗಲು ಕಾರಣರಾದ ಗ್ರಾಮಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಸಂಘವು ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ದ.ಕ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ದೀಪಕ್ ರೈ ನೇತೃತ್ವದಲ್ಲಿ ಈ ದೂರು ನೀಡಲಾಯಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here